
Pink Line Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸೆಪ್ಟಂಬರ್‍ನಲ್ಲಿ ಪಿಂಕ್ ಲೈನ್ ಓಪನ್?
ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸೆಪ್ಟೆಂಬರ್ ಆರಂಭದಲ್ಲೇ ಗುಡ್‌ನ್ಯೂಸ್ ಸಿಗುವ ಸಾಧ್ಯತೆ ಇದೆ. ಕಾತರರಿಂದ ಕಾಯುತ್ತಿರುವ ಪಿಂಕ್ ಲೈನ್ ಮೆಟ್ರೋ ಮಾರ್ಗವು ಮುಂದಿನ ತಿಂಗಳು ಕಾರ್ಯಾರಣೆಗೆ ಸಿದ್ಧವಾಗಲಿದ್ದು, ಉದ್ಘಾಟನೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಭೂಗತ ಮೆಟ್ರೋ ಮಾರ್ಗದ ಕಾಮಗಾರಿಯನ್ನು ನೆನ್ನೆ ಶನಿವಾರ ಪರಿಶೀಲಿಸಿ, ಅಗತ್ಯ ಸೂಚನೆ ನೀಡಿದ್ದಾರೆ.
ಹೌದು, ಈಗಾಗಲೇ ಗುಲಾಬಿ ಮಾರ್ಗಕ್ಕೆ ಸಂಬಂಧಿಸಿದಂತೆ ಡಿ.ಆರ್.ಡಿ.ಓ ವತಿಯಿಂದ ಪ್ರಮಾಣ ಪತ್ರ ಪಡೆದ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಹಾಗೂ ರೈಲ್ವೆ ಮಂಡಳಿಯಿಂದ ಅನುಮೋದನೆ ಇನ್ನೆರಡು ವಾರಗಳಲ್ಲಿ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಸೆಪ್ಟಂಬರ್ ಮೊದಲ ಅಥವಾ ಎರಡನೇ ವಾರ ಪಿಂಕ್ ಲೈನ್ ತೆರೆಯುವ ಸಾಧ್ಯತೆ ಇದೆ. ಆದರೆ ದಿನಾಂಕ ಇನ್ನೂ ಅಧಿಕೃತವಾಗಿಲ್ಲ.
ಮೇ ತಿಂಗಳಲ್ಲಿ ತೆರೆಯಬೇಕಿದ್ದ ಕಾಳೇನ ಅಗ್ರಹಾರ-ತಾವರೆಕೆರೆ ವರೆಗಿನ ಎತ್ತರಿಸಿದ 7.5 ಕಿಲೋ ಮೀಟರ್ ಕಾರಿಡಾರ್ ಆಗಸ್ಟ್ 15ರಂದು ತೆರೆಯಲಿದೆ ಎಂದು ಹೇಳಲಾಯಿತು. ಆದರೆ ಕಾರಣಾಂತರಗಳಿಂದ ಅಂದು ಸಹ ಈ ಮೊದಲ ಹಂತದ ಪಿಂಕ್ ಲೈನ್ ತೆರೆಯಲೇ ಇಲ್ಲ. ಇದೀಗ ಸೆಪ್ಟಂಬರ್ ತಿಂಗಳಲ್ಲಿ ತೆರೆಯುವುದು ಬಹುತೇಕ ಖಚಿತ ಎನ್ನಲಾಗಿದೆ.
ರೈಲ್ವೆ ಮಂಡಳಿ ಅನುಮೋದನೆ ಬಳಿಕ ಆಯುಕ್ತರ ತಪಾಸಣೆ
ಒಟ್ಟು 21 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ 7.5 ಕಿಲೋ ಮೀಟರ್ ಎತ್ತರಿಸಿದ ಕಾರಿಡಾರ್ ಮೇಲೆ ಪಿಂಕ್ ಲೈನ್ ನಿರ್ಮಾಣವಾಗಿದೆ. ಒಟ್ಟು ಆರು ನಿಲ್ದಾಣಗಳ ಇದರ ವ್ಯಾಪ್ತಿಗೆ ಬರುತ್ತವೆ. ಈ ಕಾರಿಡಾರ್ ಅನ್ನು ರೈಲ್ವೆ ಸುರಕ್ಷತಾ ಆಯುಕ್ತರು ತಪಾಸಣೆ ಮಾಡಿ ಅಂತಿಮ ಒಪ್ಪಿಗೆ ನೀಡಬೇಕು. ರೈಲ್ವೆ ಮಂಡಳಿ ಅನುಮೋದನೆ ಕೊಡುತ್ತಿದ್ದಂತೆ ಅಧಿಕಾರಿಗಳು ತಪಾಸಣೆ ಕೈಗೊಳ್ಳಲಿದ್ದಾರೆ. ಬಳಿಕವೇ ನಗರದ ಹೃದಯಭಾಗದ ಈ ಬಹುನಿರೀಕ್ಷೆಯ ಪಿಂಕ್ ಲೈನ್ ಬಳಕೆದಾರರಿಗೆ ಮುಕ್ತವಾಗಲಿದೆ.
ಡಿಸೆಂಬರ್ ಅಲ್ಲ 2027ರಲ್ಲಿ ಪೂರ್ಣ ಪಿಂಕ್ ಲೈನ್ ಓಪನ್!
ಇನ್ನೂ ಎರಡನೇ ಹಂತದಲ್ಲಿ ತಾವರೆಕರೆಯಿಂದ ನಾಗವಾರ ವರೆಗಿನ 13.5 ಕಿಲೋ ಮೀಟರ್ ಮಾರ್ಗವನ್ನು 2026ರ ಡಿಸೆಂಬರ್‌ನಲ್ಲಿ ತೆರೆಯಲು ಪ್ಲ್ಯಾನ್ ಮಾಡಲಾಗಿದೆ. ಇಂದಿನ ಬೆಳವಣಿಗೆ, ನಿಧಾಣಗತಿ ಕೆಲಸಗಳ ಪ್ರಕ್ರಿಯೆ ನೋಡಿದರೆ ಈ ಭೂಗಮ ಮಾರ್ಗವು 2027ರಲ್ಲಿ ಉದ್ಘಾಟನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.
ಪಿಂಕ್ ಲೈನ್ ಸುರಂಗ ಮಾರ್ಗ ಪರಿಶೀಲಿಸಿದ ಸಚಿವ
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಭೂಗತದಲ್ಲಿರುವ 13.5ಕಿಮೀ ಎರಡನೇ ಹಂತದ ಪಿಂಕ್ ಲೈನ್ ಅಂತಿಮ ಕಾಮಗಾರಿ ಸೇರಿದಂತೆ ಮಾರ್ಗದ ಪ್ರಗತಿಯನ್ನು ನೆನ್ನೆ ಶನಿವಾರ ಪರಿಶೀಲಿಸಿದರು. ಡೇರಿ ವೃತ್ತದಿಂದ ನಾಗವಾರವರೆಗೆ ಬಾಕಿ ಉಳಿದ ಕೆಲಸಗಗಳು ಟ್ರಾಕ್, ಸಿವಿಲ್ ವರ್ಕ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲವನ್ನು 2027 ಮೊದಲು ಮೂರು ತಿಂಗಳು ಪೂರ್ಣಗೊಳ್ಳುವ ಹೊತ್ತಿಗೆ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಸಿವಿಲ್ ಕಾಮಗಾರಿ ಮುಗಿದು ತುಂಬಾ ದಿನ ಆಗಿದೆ. ವಿದ್ಯುತ್ ಪೂರೈಕೆ ಬಹುತೇಕ ಪೂರ್ಣೊಗಂಡಿದ್ದು, ಸಿಗ್ನಲಿಂಗ್ ಜೋಡಣೆ ಕೆಲಸ ನಡೆಯುತ್ತಿದೆ ಎಂದು ತಿಳಿದು ಬಂದಿದೆ.