
ಮೊಳಕಾಲ್ಮುರು ನೂತನ ಬಸ್ ನಿಲ್ದಾಣ ಲೋಕಾರ್ಪಣೆ ಇಂದು
ಮೊಳಕಾಲ್ಮುರು: ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿಯ ಬಸ್ ನಿಲ್ದಾಣ ಹೊಂದಬೇಕೆಂಬ ತಾಲ್ಲೂಕಿನ ಜನರ ಬಯಕೆ ಕೈಗೂಡಿದ್ದು, ನೂತನ ಬಸ್ ನಿಲ್ದಾಣ ಭಾನುವಾರ (ಆ. 23ರ) ಲೋಕಾರ್ಪಣೆಯಾಗಲಿದೆ.
ಪಟ್ಟಣದ ಹೃದಯ ಭಾಗದಲ್ಲಿದ್ದ ತಾಲ್ಲೂಕು ಕಚೇರಿ ಬೇರೆಡೆಗೆ ಸ್ಥಳಾಂತರವಾದ ಬಳಿಕ ಆ ಜಾಗವನ್ನು ಕೆಸ್‌ಆರ್‌ಟಿಸಿಗೆ ನೀಡಲಾಗಿತ್ತು. 2023ರಲ್ಲಿ ಕ್ಷೇತ್ರದ ಸಾರಿಗೆ ಸಚಿವರಾಗಿದ್ದ ಸ್ಥಳೀಯ ಶಾಸಕ ಬಿ. ಶ್ರೀರಾಮುಲು ₹ 5 ಕೋಟಿ ವೆಚ್ಚದ ಬಸ್ ನಿಲ್ದಾಣ ಮತ್ತು ಸಮೀಪದ ರಾಯಾಪುರದಲ್ಲಿ ₹ 7 ಕೋಟಿ ವೆಚ್ಚದ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಿ, ಒಂದು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು.
ವಿಧಾನಸಭೆ ಚುನಾವಣೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣವಾಗಿರಲಿಲ್ಲ. ಇದರಿಂದ ಬೇಸತ್ತ ಜನ ಸಾಮಾಜಿಕ ಜಾಲತಾಣಗಳಲ್ಲಿ ವಿಳಂಬದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಜನಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಕೊನೆಗೂ ಬಸ್ ನಿಲ್ದಾಣದ ಕಟ್ಟಡ ಪೂರ್ಣಗೊಂಡಿದೆ.
‘ಬಸ್ ನಿಲ್ದಾಣದಲ್ಲಿ ಕೆಲ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ರಸ್ತೆಯ ಕಾರ್ಯ ಬಾಕಿ ಇದ್ದಿದ್ದರಿಂದ ಲೋಕಾರ್ಪಣೆ ವಿಳಂಬವಾಗಿತ್ತು. ಡಿಪೋ ಸಂಪರ್ಕ ರಸ್ತೆ ಇನ್ನೂ ಮುಗಿದಿಲ್ಲ. ಆದ್ದರಿಂದ ಮೊದಲ ಹಂತದಲ್ಲಿ ಬಸ್ ನಿಲ್ದಾಣವನ್ನು ಸಾಂಕೇತಿಕವಾಗಿ ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ. ಡಿಪೋ ಜೊತೆ ಮತ್ತೊಮ್ಮೆ ಉದ್ಘಾಟನೆ ಮಾಡಿಸಲಾಗುವುದು’ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಿಲ್ದಾಣದಲ್ಲಿ ಸದ್ಯಕ್ಕೆ ಒಟ್ಟು 54 ಟ್ರಿಪ್ ಬಸ್ ಸೇವೆ ಸಿಗಲಿದೆ. ಉದ್ಘಾಟನೆಯ ಅಂಗವಾಗಿ ರಾಂಪುರ– ಬೆಂಗಳೂರು, ಬೆಂಗಳೂರು– ರಾಂಪುರ ಹಾಗೂ ಮೊಳಕಾಲ್ಮುರು– ಗೌರಸಮುದ್ರ– ಚಳ್ಳಕೆರೆ ಮಾರ್ಗವಾಗಿ ಬಸ್ ಸೇವೆ ಆರಂಭಿಸಲಾಗುತ್ತಿದೆ. ಡಿಪೋ ಆರಂಭದ ನಂತರ ಬೇರೆ ಡಿಪೋ ಬಸ್‌ಗಳು ಸೇರಿ 50ಕ್ಕೂ ಹೆಚ್ಚು ಬಸ್ ಸೇವೆ ಸಿಗಲಿದೆ. ಒಂದು ತಿಂಗಳಿನಲ್ಲಿ ಡಿಪೋ ಕಾರ್ಯ ಪೂರ್ಣವಾಗಲಿದೆ ಎಂದು ಅವರು ಹೇಳಿದ್ದಾರೆ.
‘ನಿಲ್ದಾಣದಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ, ಪ್ಲಾಟ್‌ಫಾರ್ಮ್ ಸೇವೆ, ನೀರಿನ ಶುದ್ಧೀಕರಣ ಘಟಕ, ಪ್ರತ್ಯೇಕ ಶೌಚಾಲಯ ಸೌಲಭ್ಯ, ರಾತ್ರಿ ಇಲ್ಲೇ ತಂಗುವ ಬಸ್‌ಗಳ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶೀಘ್ರ ಟೆಂಡರ್ ಕರೆದು ಉಪಾಹಾರ ಗೃಹ, ಮಳಿಗೆಗಳ ಸೇವೆ ನೀಡಲಾಗುವುದು. ಡಿಪೋ ಆರಂಭದ ನಂತರ ಸಮೀಪದ ಹೆದ್ದಾರಿಯಲ್ಲಿ ಸಂಚರಿಸುವ ಕೆಲ ಬಸ್‌ಗಳು ಒಳಗಡೆ ಬಂದು ಹೋಗುವಂತೆ ಮಾಡುವ ಪ್ರಸ್ತಾವನೆ ಪರಿಶೀಲಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಡಿ.ಸಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಮೊಳಕಾಲ್ಮುರು ಮತ್ತು ಕೊಂಡ್ಲಹಳ್ಳಿಯು ರೇಷ್ಮೆ ಸೀರೆ ತಯಾರಿಕೆ ಹಾಗೂ ಮಾರಾಟಕ್ಕೆ ಹೆಸರಾಗಿದ್ದು, ಸಾವಿರಾರು ಜನ ಇದರಿಂದ ಜೀವನ ಕಟ್ಟಿಕೊಂಡಿದ್ದಾರೆ. ಸಾರಿಗೆ ಸೌಲಭ್ಯದಿಂದ ರಾಜ್ಯದ ವಿವಿಧೆಡೆಯಿಂದ ಗ್ರಾಹಕರು ಬಂದು ಹೋಗಲು ಮತ್ತು ಕಚ್ಚಾವಸ್ತು ಸಾಗಣೆಗೆ ಅನುಕೂಲವಾಗಲಿದೆ. ಉದ್ಯಮ ಬೆಳವಣಿಗೆ ಹೆಚ್ಚುವ ನಿರೀಕ್ಷೆಯಿದೆ. ನೆರೆಯ ರಾಯದುರ್ಗದ ಜೀನ್ಸ್ ಉದ್ಯಮಕ್ಕೂ ಇದರಿಂದ ಅನುಕೂಲವಾಗಲಿದೆ ಎಂದು ನೇಕಾರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ. ಮಂಜುನಾಥ್ ಮತ್ತು ಉದ್ಯಮಿ ಮಂಚಿ ಮಾರುತಿ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-150 ‘ಎ’ನಲ್ಲಿ ಓಡಾಡುವ ಸಾರಿಗೆ ಸಂಸ್ಥೆ ನೂರಾರು ಬಸ್‌ಗಳ ಪೈಕಿ ಕೆಲ ಬಸ್‌ಗಳನ್ನಾದರೂ ಪಟ್ಟಣದ ಒಳಗಡೆ ಬಂದು ಹೋಗುವಂತೆ ಕ್ರಮ ಕೈಗೊಂಡಲ್ಲಿ ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸೂಚಿಸಬೇಕು. ಇದರಿಂದ ನಿಲ್ದಾಣ ಮತ್ತು ಡಿಪೋ ಸ್ಥಾಪನೆಗೆ ಸಾರ್ಥಕತೆ ಸಿಗಲಿದೆ ಎಂದು ನಾಗರಿಕರು ಮನವಿ ಮಾಡಿದ್ದಾರೆ.
ಬಸ್ ನಿಲ್ದಾಣದಲ್ಲಿ ಇನ್ನೂ ಕೆಲ ಕಾಮಗಾರಿಗಳು ಬಾಕಿ ಇದ್ದು, ಪೂರ್ಣಗೊಳಿಸಿ ಡಿಪೋ ಹಾಗೂ ನಿಲ್ದಾಣವನ್ನು ಒಟ್ಟಿಗೆ ಉದ್ಘಾಟನೆ ಮಾಡಬೇಕು. ಸೇವೆ ಹೆಸರಿನಲ್ಲಿ ಮಾಡುವುದಾದರೆ ಒಂದು ವರ್ಷದ ಹಿಂದೆಯೇ ಮಾಡಬಹುದಾಗಿತ್ತು. ನಿಲ್ದಾಣ ಮಂಜೂರಿಗೆ ಮಾಜಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಕಾರಣಕರ್ತರಾಗಿದ್ದು, ಭೂಮಿಪೂಜೆ ಫಲಕವನ್ನು ನಿಲ್ದಾಣದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ನಿರ್ಲಕ್ಷಿಸಿದಲ್ಲಿ ಲೋಕಾರ್ಪಣೆ ವೇಳೆ ಪ್ರತಿಭಟನೆ ನಡೆಸುವ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪಾಪೇಶ್ ನಾಯಕ, ಟಿ.ಟಿ. ರವಿಕುಮಾರ್, ಡಿಶ್ ರಾಜು, ತುಮಕೂರ್ಲಹಳ್ಳಿ ಮಂಜುನಾಥ್, ಹಾನಗಲ್ ತಿಪ್ಪೇಸ್ವಾಮಿ ಇದ್ದರು.
ಡಿಪೋ ಆರಂಭದ ನಂತರ ಅಧಿಕ ಸಂಖ್ಯೆಯ ಬಸ್ ಕೊಡಿಸುವ ಮೂಲಕ ಸಾರಿಗೆ ಸಂಪರ್ಕದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿದ್ಯಾರ್ಥಿಗಳ ಹಿತ ಕಾಯಲಾಗುವುದು
ಎನ್.ವೈ. ಗೋಪಾಲಕೃಷ್ಣ, ಶಾಸಕ, ಮೊಳಕಾಲ್ಮುರು
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260823-44-64465684