
Park: ಬೆಂಗಳೂರು ಸೇರಿ ಕರ್ನಾಟಕದ ಪಾರ್ಕ್‌ಗಳಲ್ಲಿ ಹೊಸ ಯೋಜನೆ: ಶೇ.5 ರಷ್ಟು ಜಾಗ ಬಳಕೆಗೆ ಪ್ಲ್ಯಾನ್!
ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಸರ್ಕಾರಿ ಉದ್ಯನಗಳ / ಪಾರ್ಕ್‌ಗಳ ಮೇಲೆ ಕಣ್ಣಿಟ್ಟಿದೆ. ಕರ್ನಾಟಕದಲ್ಲಿನ ಉದ್ಯನಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಜಾಗವನ್ನು ಮಾರಾಟ ಮಾಡುವುದು, ಗುತ್ತಿಗೆ, ವಿನಿಮಯ ಹಾಗೂ ಅಡಮಾನ ಸೇರಿದಂತೆ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರ ಮಾಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆದರೆ, ಕರ್ನಾಟಕ ಸರ್ಕಾರದ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಸಹ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಭ್ರಷ್ಟ, ದುಷ್ಟ ರಿಯಲ್ ಎಸ್ಟೇಟ್ ಮಾಫಿಯಾ ಸರಕಾರ ಇದೀಗ ನಾಗರಿಕ ಬಳಕೆಗೆ ಮೀಸಲಿಟ್ಟ ಉದ್ಯಾನಗಳ ಲೂಟಿಗೆ ಮುಂದಾಗಿರುವ ಆಘಾತಕಾರಿ ಬೆಳವಣಿಗೆ ನಡೆದಿರುವುದು ವರದಿಯಾಗಿದೆ.
ಗ್ಯಾರಂಟಿಗಳ ಹೆಸರಲ್ಲಿ ದಿವಾಳಿ ಎದ್ದಿರುವ ಸರಕಾರ ರಸ್ತೆ, ಪಾರ್ಕಿಂಗ್ ಏರಿಯಾ, ಕೆರೆ, ಉದ್ಯಾನಗಳು ಹೀಗೆ ಎಲ್ಲವನ್ನೂ ಲೂಟಿಯ ಮಾರ್ಗವಾಗಿ ಬಳಸಿಕೊಳ್ಳುವ ಹಗಲು ದರೋಡೆಗೆ ಇಳಿದಿದೆ. ತೋಟಗಾರಿಕೆ ಇಲಾಖೆಯ ಸರಕಾರಿ ಉದ್ಯಾನಗಳ ರಕ್ಷಣೆ ಕಾಯಿದೆ-1975ಕ್ಕೆ ತಿದ್ದುಪಡಿ ಮಾಡುವ ಮಸೂದೆಗೆ ಶುಕ್ರವಾರ ಡಿಕೆಶಿ ಸಂಪುಟ ಅನುಮೋದನೆ ನೀಡಿದ್ದು ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡುವ ಸಿದ್ಧತೆ ನಡೆದಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5 ರಷ್ಟನ್ನು ಮಾರುವ, ವಿನಿಮಯ ಮಾಡುವ,ಉಡುಗೊರೆ ನೀಡುವ, ಅಡಮಾನ ಇಡುವ ಪ್ರಸ್ತಾವನೆಯನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ.
ಅಂದರೆ ಪರಿಸರದ ರಕ್ಷಣೆಗೆ, ನಾಗರಿಕರ ಆರೋಗ್ಯ ಸಂರಕ್ಷಣೆಗೆ ಮತ್ತು ಇತ್ಯಾದಿ ಬಳಕೆಗೆ ತೋಟಗಾರಿಕೆ ಮೀಸಲಿಟ್ಟಿರುವ ಸರಕಾರಿ ಉದ್ಯಾನಗಳ ಲಪಟಾಯಿಸಲು ಈ ಸರಕಾರ ವ್ಯವಸ್ಥಿತ ಸಂಚು ರೂಪಿಸಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಡಿಕೆಶಿ ಉಪಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಮತ್ತು ರಾಜ್ಯದ ಕೆರೆಗಳ ಬಫರ್ ಜೋನನ್ನು ಕಡಿಮೆ ಮಾಡಿ ರಿಯಲ್ ಎಸ್ಟೇಟ್ ಹಿತಾಸಕ್ತಿ ಕಾಪಾಡಲು ಅತ್ಯಮೂಲ್ಯ ಜಲಮೂಲಗಳಾದ ಕೆರೆಗಳನ್ನು ಲೂಟಿ ಮಾಡಿದ್ದು ನೆನಪಿರಬಹುದು.
ಲೂಟಿಯ ಹಿತಾಸಕ್ತಿಯ ಮುಂದೆ ಈ ಸರಕಾರಕ್ಕೆ ನೆಲ, ಜಲ, ವಾಯು, ವಾತಾವರಣ ರಕ್ಷಣೆ ಯಾವುದೂ ಕೂಡ ಲೆಕ್ಕಕ್ಕೇ ಇಲ್ಲ. ಪರಿಸರಕ್ಕೆ ಮತ್ತು ನಾಗರಿಕ ಕಲ್ಯಾಣಕ್ಕೆ ಮಾರಕವಾಗಿರುವ ಉದ್ದೇಶಿತ ಮಸೂದೆ ತಡೆಗೆ ಬಿಜೆಪಿ ಶತಪ್ರಯತ್ನ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಕ್ರೋಶ ಹೊರ ಹಾಕಿದ್ದಾರೆ.