
ಕೆಜಿಎಫ್: ಅಂತರ್ಜಲದ ಅಸಮರ್ಪಕ ಬಳಕೆಯೇ ಸಮಸ್ಯೆಗೆ ಕಾರಣ
ಕೆಜಿಎಫ್: ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಬಿಕ್ಕಟ್ಟಿಗೆ ಅಂತರ್ಜಲವನ್ನು ಸಮರ್ಪಕವಾಗಿ ಬಳಸಿದಿರುವುದೇ ಕಾರಣ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ.
ನಗರದ ಪಶ್ಚಿಮ ದಿಕ್ಕಿನಲ್ಲಿರುವ ಪಾಲಾರ್ ಬೆಲ್ಟ್‌ನಲ್ಲಿ ಅಗಾಧ ಪ್ರಮಾಣದ ಶುದ್ಧ ಕುಡಿಯುವ ನೀರು ಇದೆ. ಅವುಗಳ ಇರುವಿಕೆಯನ್ನು ಈ ಹಿಂದೆಯೇ ಬ್ರಿಟಿಷರು ಪತ್ತೆ ಹಚ್ಚಿದ್ದರು. ಈ ನೀರಿನ ಸಂಗ್ರಹಕ್ಕಾಗಿ ಬ್ರಿಟಿಷರು ಬಾವಿಗಳನ್ನು ನಿರ್ಮಿಸಿ, ಚಿನ್ನದ ಗಣಿಗಾರಿಕೆಗಳಿಗೆ ಪೂರೈಸುತ್ತಿದ್ದರು. ಒಂದೆಡೆ ಬೇತಮಂಗಲದ ಜಲಾಶಯದ ನೀರು, ಮತ್ತೊಂದೆಡೆ ಪಾಲಾರ್ ಬೆಲ್ಟ್‌ನಲ್ಲಿ ಸಿಗುವ ಅಂತರ್ಜಲದ ನೀರಿನಿಂದ ನೀರಿನ ಸಮಸ್ಯೆಯೇ ಇರಲಿಲ್ಲ. ಈಗ ಗಣಿ ಕಾಲೊನಿಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ, ಆಧುನಿಕ ಅವಿಷ್ಕಾರದ ಮೂಲಕ ಲಭ್ಯ ಇರುವ ನೀರನ್ನು ಉಪಯೋಗಿಸಿಕೊಳ್ಳಲು ಮನಸ್ಸು ಮಾಡಬೇಕು ಎಂಬುದು ಚರ್ಚೆಯ ವಿಷಯವಾಗಿದೆ.
ಬೆಮಲ್ ಬಳಿಯಿಂದ ಶುರುವಾಗುವ ಪಾಲಾರ್ ಬೆಲ್ಟ್ ಸದಾ ನೀರಿನ ಆಗರ. ಮಳೆಗಾಲದಲ್ಲಿ ಗಣಿಯ ಬಾವಿಗಳಲ್ಲಿನ ನೀರು ಹೊರ ಬಂದು ಹರಿದು ಹೋಗುತ್ತದೆ. ಈಗಲೂ ಅಜ್ಜಪಲ್ಲಿ ಬಳಿ ಇರುವ ಪಾಲಾರ್ ಬೆಲ್ಟ್‌ನಲ್ಲಿ ಗರಿಷ್ಠ ಸಂಖ್ಯೆಯ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. 100ರಿಂದ 120 ಅಡಿಯೊಳಗೆ ನೀರು ಸಿಗುತ್ತಿದೆ. ಈ ಪ್ರದೇಶದಲ್ಲಿ ಅಂತರ್ಜಲವನ್ನು ಸಮರ್ಪಕ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಬಳಸಿಕೊಂಡಲ್ಲಿ, ಯಥೇಚ್ಚವಾದ ಶುದ್ಧ ಕುಡಿಯುವ ನೀರು ಪಡೆಯಬಹುದು ಎಂದು ನಗರಸಭೆ ಮಾಜಿ ಅಧ್ಯಕ್ಷ ದಯಾನಂದ ಹೇಳುತ್ತಾರೆ.
ವಲಗಮಾದಿಯ ಸಿಂಕ್, ದೋಬಿ ಘಾಟ್, ಮಸ್ಕಿನ್ ಮೊದಲಾದ ಪ್ರದೇಶಗಳಲ್ಲಿ ಕೊರೆಯಲಾದ ಹಳೇ ಬೋರ್‌ವೆಲ್‌ಗಳಲ್ಲಿ ಇಂದಿಗೂ ಮೇಲ್ಭಾಗದಲ್ಲಿ ನೀರು ಇದೆ. ಆದರೆ ಪಂಪ್‌ಸೆಟ್‌ಗಳ ನಿರ್ವಹಣೆ, ಮೋಟಾರ್ ಕಳ್ಳತನದಿಂದ ಬೇಸತ್ತ ಅಧಿಕಾರಿಗಳು ಈ ಕಡೆ ಮುಖ ಮಾಡುತ್ತಿಲ್ಲ ಎಂದು ಮೈನಿಂಗ್ ನಿವಾಸಿಗಳು ಹೇಳುತ್ತಾರೆ.
ಪಾಲಾರ್ ಬೆಲ್ಟ್‌ನಲ್ಲಿ ಸ್ಥಳೀಯವಾಗಿ ನಾಗಾವರ ಕಣಿವೆ ಎಂದು ಕರೆಯಲಾಗುತ್ತಿದೆ. ಈ ಪ್ರದೇಶವು ಅರಣ್ಯ ಪ್ರದೇಶವಾಗಿದ್ದು, ಒಂದು ಭಾಗ ಬೆಟ್ಟದಿಂದ ಕೂಡಿದೆ. ಇಲ್ಲಿನ ಭೂಮಿಯೊಳಗೆ ಪದರಿನ ರೂಪದಲ್ಲಿರುವ ಕಲ್ಲುಗಳು ವಿನ್ಯಾಸಗೊಂಡಿವೆ. ಆದ್ದರಿಂದ ಕೊಳವೆಬಾವಿ ಕೊರೆದು ಮೋಟಾರ್ ಅಳವಡಿಸಿ, ನೇರವಾಗಿ ನೀರನ್ನು ಹೊರೆತೆಗೆಯುವುದು ಅಸಾಧ್ಯ. ಆದ್ದರಿಂದ ಬ್ರಿಟಿಷರು ಕಲ್ಲಿನ ಪದರದ ಮಧ್ಯೆ ನಿರಂತರವಾಗಿ ಹರಿದುಹೋಗುವ ನೀರನ್ನು ಸಂಗ್ರಹಿಸಿ ಮೇಲೆತ್ತಿ ಬಳಸುತ್ತಿದ್ದರು.
ಜಲಾಶಯದಿಂದ ನೀರು ಸಂಗ್ರಹ ಸಾಧ್ಯ
ಕೋರಮಂಡಲ್‌ನಿಂದ ನಾಗಾವರ ಪ್ರದೇಶವು ಪಾಲಾರ್ ಬೆಲ್ಟ್‌ಗೆ ಬರುತ್ತದೆ. ಬೂದಿಕೋಟೆಯ ಮಾರ್ಕಂಡೇಯ ಜಲಾಶಯದ ನೀರಿನ ಹರಿವು ಕೂಡ ಇಲ್ಲಿಗೆ ಸಂಪರ್ಕಿಸುತ್ತದೆ. ಗಣಿ ಮುಚ್ಚಿದ ಮೇಲೆ ಗಣಿಯ ಸುರಂಗಗಳಲ್ಲಿ ನೀರು ತುಂಬಿಕೊಂಡಿದೆ. ಆದ್ದರಿಂದ ಭೂ ಕಂಪನಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಒಂದು ವೇಳೆ ಗಣಿಯೊಳಗೆ ಹರಿಯುವ ನೀರನ್ನು ಹೊರತೆಗೆದರೆ, ನೀರಿನ ಪ್ರಮಾಣ ಕಡಿಮೆಯಾಗಿ ಶಾಖ ಉಂಟಾಗಿ ಭೂ ಕಂಪನಗಳು ಆಗುವ ಸಾಧ್ಯತೆ ಇದೆ. ನಾಗಾವರದ ಬಳಿ ದೊಡ್ಡ ಜಲಾಶಯ ನಿರ್ಮಾಣ ಮಾಡಿ ಸಂಗ್ರಹವಾಗುವ ನೀರನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ಭೂಗರ್ಭ ಶಾಸ್ತ್ರಜ್ಞ ನಾಗರಾಜ್ ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-18-1925701758