ಹಾಕಿ ವಿಶ್ವಕಪ್: ನೆದರ್ಲೆಂಡ್ಸ್‌ಗೆ ಮಣಿದ ಸಲೀಮಾ ಪಡೆ
ಆಮ್‌ಸ್ಟೆಲ್ವೀನ್ (ಪಿಟಿಐ): ಸಲೀಮಾ ಟೆಟೆ ನಾಯಕತ್ವದ ಭಾರತ ಮಹಿಳೆಯರ ತಂಡವು ಎಫ್‌ಐಎಚ್ ಹಾಕಿ ವಿಶ್ವಕಪ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಶುಕ್ರವಾರ 0–2ರಿಂದ ಹಾಲಿ ಚಾಂಪಿಯನ್ ನೆದರ್ಲೆಂಡ್ಸ್ ಎದುರು ಪರಾಭವಗೊಂಡಿತು.
ಜಂಟಿ ಆತಿಥೇಯ ತಂಡದ ಯಿಬಿ ಯಾನ್ಸನ್ ಪಂದ್ಯ ಆರಂಭಗೊಂಡ ಎರಡೇ ನಿಮಿಷಗಳಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿ ಮುನ್ನಡೆ ಒದಗಿಸಿದರು. ನಂತರ ಫ್ರೆಡರಿಕ್ ಮಾಟ್ಲಾ 38ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲನ್ನಾಗಿ ಪರಿವರ್ತಿಸಿದರು.
ಗೋಲ್‌ಕೀಪರ್ ಸವಿತಾ ಪೂನಿಯಾ ನೇತೃತ್ವದಲ್ಲಿ ಭಾರತ ತಂಡದ ರಕ್ಷಣಾ ವಿಭಾಗ ದಿಟ್ಟ ಹೋರಾಟ ತೋರಿತು. ಹೀಗಾಗಿ, ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಕೂಡ ಆಗಿರುವ ಬಲಿಷ್ಠ ನೆದರ್ಲೆಂಡ್ಸ್ ಪಡೆಗೆ ಒಂದೂ ಫೀಲ್ಡ್ ಗೋಲು ಗಳಿಸಲಾಗಲಿಲ್ಲ. ಆದರೆ, ಫಾರ್ವರ್ಡ್ ಆಟಗಾರ್ತಿಯರು ಗೋಲು ಗಳಿಸಲಾಗದ ಕಾರಣ ಭಾರತ ಹಿನ್ನಡೆ ಅನುಭವಿಸಬೇಕಾಯಿತು.
ಈ ಪಂದ್ಯಕ್ಕೆ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 1–1ರಲ್ಲಿ ಚೀನಾ ಜೊತೆಗೆ ಡ್ರಾ ಸಾಧಿಸಿತು.
ಇ ಗುಂಪಿನಲ್ಲಿರುವ ಭಾರತ ತಂಡದ ಪಾಲಿಗೆ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಪಂದ್ಯವು ನಿರ್ಣಾಯಕವಾಗಿದೆ. ಒಂದೊಮ್ಮೆ ಸೋತರೆ, ಟೂರ್ನಿಯಿಂದ ಹೊರಬೀಳಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-43-2048593185