
ಥಾಯ್ಲೆಂಡ್ ನ ರಾಜಧಾನಿ ಬ್ಯಾಂಕಾಕ್ ನಲ್ಲಿ ಮಧ್ಯರಾತ್ರಿಯ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಉತ್ತರ ಬ್ಯಾಂಕಾಕ್ ನ ಅತ್ಯಂತ ಜನಪ್ರಿಯ ‘ನಾ ಲಾಡ್ಪ್ರಾವ್’ ಪಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಜನರು ಸಜೀವ ದಹನವಾಗಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 22 ಜನರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಥಾಯ್ಲೆಂಡ್ ಪ್ರಧಾನಿ ಅನುಟಿನ್ ಚಾರ್ನ್ವಿರಕುಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದುರಂತದ ತೀವ್ರತೆಯನ್ನು ಖಚಿತಪಡಿಸಿದ್ದಾರೆ. ಸದ್ಯಕ್ಕೆ 27 ಮೃತದೇಹಗಳನ್ನು ಪಬ್ನಿಂದ ಹೊರತೆಗೆಯಲಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪಬ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ವೇದಿಕೆಯ ಸಮೀಪವಿದ್ದ ಸರ್ಕ್ಯೂಟ್ ಬ್ರೇಕರ್ನಿಂದ ದಿಢೀರನೆ ಹೊಗೆ ಕಾಣಿಸಿಕೊಂಡಿತು ಮತ್ತು ಇಡೀ ಪಬ್ನ ವಿದ್ಯುತ್ ಸಂಪರ್ಕ ಕಡಿತಗೊಂಡಿತು ಎಂದು ಅಲ್ಲಿನ ಸಂಗೀತಗಾರರೊಬ್ಬರು ಮಾಹಿತಿ ನೀಡಿದ್ದಾರೆ.
ಮಧ್ಯರಾತ್ರಿಯ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಅರ್ಧ ಗಂಟೆಯ ಸತತ ಕಾರ್ಯಾಚರಣೆಯ ನಂತರ ಜ್ವಾಲೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಪಬ್ ನ ಒಳಗಿದ್ದ ಮೇಜು, ಕುರ್ಚಿಗಳು ಸೇರಿದಂತೆ ಇಡೀ ಒಳಾಂಗಣ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

source https://suddione.com/breaking-news-massive-fire-in-bangkok-pub-27-people-burnt-alive-63-injured/


0 Comments
If u have any queries, Please let us know