Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಆಗಸ್ಟ್ 11ರವರೆಗೆ ಭಾರೀ ಮಳೆ, ಐಎಂಡಿ ವರದಿ

Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಆಗಸ್ಟ್ 11ರವರೆಗೆ ಭಾರೀ ಮಳೆ, ಐಎಂಡಿ ವರದಿ

Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಆಗಸ್ಟ್ 11ರವರೆಗೆ ಭಾರೀ ಮಳೆ, ಐಎಂಡಿ ವರದಿ

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮುಂಗಾರು ಮಳೆ ಕೊಂಚ ದುರ್ಬಲಗೊಂಡಿದೆ. ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಹಗುರ ಮಳೆ ಸುರಿಯುತ್ತಿದ್ದು, ಪಶ್ಚಿಮ ಘಟ್ಟಗಳ ಸಾಲಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದೆ. ಈ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮಟ್ಟದಲ್ಲಿ ಸಾಮಾನ್ಯ ವಾತಾವರಣವಿದ್ದು, ತೀವ್ರ ಸ್ವರೂಪ ಬದಲಾವಣೆ, ವಾಯು ಚಂಡಮಾರುತ ಪ್ರಸರಣ, ವಾಯುಭಾರ ಕುಸಿತದಂತಹ ಬದಲಾವಣೆಗಳು ಸದ್ಯಕ್ಕಿಲ್ಲ. ಈ ಕಾರಣದಿಂದ ಕರಾವಳಿ, ಮಲೆನಾಡಿನಲ್ಲಿ ಮಳೆ ತಗ್ಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಹಗುರದಿಂದ ಸಾಮಾನ್ಯ ಮಳೆ ಆಗುತ್ತಿದೆ.

ಈ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್‌

ಐಎಂಡಿ ಪ್ರಕಾರ, ಇಂದಿನಿಂದ ಮುಂದಿನ 48 ಗಂಟೆಗಳ ಕಾಲ (ಆಗಸ್ಟ್ 11ರವರೆಗೆ) ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಗಂಟೆಗೆ 30 ಕಿಲೋ ಮೀಟರ್ ವೇಗದಲ್ಲಿ ಗಾಳಿ ಸಹಿತ 65 ರಿಂದ 115ಮಿಲಿ ಮೀಟರ್‌ ವರೆಗೆ ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್'‌ ನೀಡಲಾಗಿದೆ.

ಒಟ್ಟು ಐದು ದಿನಗಳ ಪೈಕಿ ಕೇವಲ ಎರಡು ದಿನ ಭಾರೀ ಮಳೆ ನಿರೀಕ್ಷೆ ಇದೆ. ಇನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿತ್ರದುರ್ಗದಲ್ಲಿ ಹಗುರ ಮಳೆ ಆಗಲಿದೆ. ಹಾವೇರಿ, ಧಾರವಾಡ, ಬೆಳಗಾವಿ, ಗದಗ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವಿವಿಧೆಡೆ ಸೋನೆ ಮಳೆ ಆಗಲಿದ್ದು, ಮೋಡ ಕವಿದ ಮತ್ತು ಬಿಸಿಲು ಎರಡು ವಿಧದ ವಾತವರಣ ಕಂಡು ಬರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಮಬ್ಬು ಕವಿದ ವಾತಾವರಣವೇ ಕಂಡು ಬರುತ್ತಿದೆ. ವಿವಿಧೆಡೆ ಸಂಜೆ ಹೊತ್ತಿಗೆ ಮಳೆ ಜಮಾಯಿಸುತ್ತಿದ್ದು, ಅಲ್ಲಲ್ಲಿ ಹಗುರ ಮಳೆ, ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಮುಂದಿನ ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಕಂಡು ಬರಲಿದೆ.

ಕೇರಳ, ಪಶ್ಚಿಮ ಘಟ್ಟಗಳು, ರಾಜ್ಯದ ಮಲೆನಾಡಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ವಾಣಿವಿಲಾಸ, ತುಂಗಾ, ಭದ್ರಾ, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ, ಹಾರಂಗಿ, ಕೆ.ಆರ್ ಎಸ್ ಸೇರಿದಂತೆ ಅನೇಕ ಜಲಾಶಯಗಳಲ್ಲಿ ಒಳಹರಿವು ಏರಿಕೆ ಆಗಿದೆ. ಬರಗಾಲ ಛಾಯೆ ಆವರಿಸಿದ್ದ ಕರ್ನಾಟಕದಲ್ಲಿ ನೀರಾವರಿ ಅವಲಂಬಿತ ರೈತರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಒಣಬೇಸಾಯ ಅಥವಾ ಮಳೆ ಆಶ್ರಿತ ರೈತರ ಸಂಕಷ್ಟ ಮುಂದುವರಿದಿದೆ.

rain weather monsoon bengaluru ಮಳೆ ಹವಾಮಾನ

rain weather monsoon bengaluru ಮಳೆ ಹವಾಮಾನ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ