
Jana Nayagan: ಅಡೆತಡೆಗಳನ್ನ ಮೆಟ್ಟಿ ನಿಂತ 'ಜನ ನಾಯಗನ್', ಹೊಸ ಇತಿಹಾಸ ಬರೆದ ಸಿಎಂ ದಳಪತಿ ವಿಜಯ್
CM Vijay's Jana Nayagan: ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ದಳಪತಿ ವಿಜಯ್ ಅವರ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಬಿಡುಗಡೆಗೂ ಮುನ್ನವೇ ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ತಮಿಳು ಚಿತ್ರರಂಗದ ಸ್ಟಾರ್ ನಟ, ಈಗಿನ ಸಿಎಂ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಭರ್ಜರಿಯಾಗಿ ತೆಗೆ ಕಂಡಿದ್ದು, ಬಿಡುಗಡೆಗೂ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಪ್ರಮುಖ ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಯಲ್ಲಿ ಮೊದಲ ಶೋ ಆರಂಭವಾಗುವ ಮುನ್ನವೇ ಬರೋಬ್ಬರಿ 10 ಲಕ್ಷಕ್ಕೂ (1 ಮಿಲಿಯನ್) ಹೆಚ್ಚು ಮುಂಗಡ ಟಿಕೆಟ್‌ಗಳ ಮಾರಾಟ ಆಗಿದ್ದು, ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಹೊಸ ದಾಖಲೆ ಬರೆದ 'ಜನ ನಾಯಗನ್' ಸಿನಿಮಾ
ಇದಕ್ಕೂ ಮುನ್ನ ವಿಜಯ್ ಅಭಿನಯದ 'ವಾರಿಸು' ಮತ್ತು 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಸಿನಿಮಾಗಳು ಬಿಡುಗಡೆಗೆ ಮುನ್ನವೇ 1 ಮಿಲಿಯನ್‌ಗೂ ಅಧಿಕ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದವು. ಇದೀಗ 'ಜನ ನಾಯಗನ್' ಸೇರಿ ಸತತ ಮೂರು ಸಿನಿಮಾಗಳು ಈ ಸಾಧನೆ ಮಾಡಿವೆ. ಈ ಮೂಲಕ ಆನ್‌ಲೈನ್ ಪ್ರಿ-ಸೇಲ್ಸ್‌ನಲ್ಲಿ ಹ್ಯಾಟ್ರಿಕ್ 1 ಮಿಲಿಯನ್ ದಾಖಲೆ ಬರೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ. ಈ ವರದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಅಡೆತಡೆಗಳನ್ನು ಮೆಟ್ಟಿ ನಿಂತು ಅದ್ಧೂರಿ ಬಿಡುಗಡೆ
ಹೆಚ್.ವಿನೋತ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೆ ಮುನ್ನ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗುವಲ್ಲಿ ಎದುರಾದ ವಿಳಂಬ ಮತ್ತು ಕಾನೂನು ಪ್ರಕ್ರಿಯೆಗಳಿಂದಾಗಿ ಆರಂಭದಲ್ಲಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಅಷ್ಟೇ ಅಲ್ಲದೆ ಬಿಡುಗಡೆಗೂ ಕೆಲ ದಿನಗಳ ಮುನ್ನವೇ ಚಿತ್ರದ ಕಾನೂನುಬಾಹಿರ ಪ್ರತಿಯೊಂದು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದ್ದು ಕೂಡ ದೊಡ್ಡ ಹಿನ್ನಡೆ ಆಗಿತ್ತು.
ಆದರೂ ಈ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು 'ಜನ ನಾಯಗನ್' ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಶುಭಾರಂಭ ಕಂಡಿದೆ. ಅಭಿಮಾನಿಗಳ ಅಪಾರ ಬೆಂಬಲದಿಂದಾಗಿ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯ ದಿನ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಿನಿಮಾನ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದು, ಇನ್ನೂ ದೊಡ್ಡ ಮಟ್ಟದಲ್ಲಿ ಹಣ ಬಾಚುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.
ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ
ಪೂರ್ಣ ಪ್ರಮಾಣದ ರಾಜಕೀಯ ಜೀವನಕ್ಕೆ ಕಾಲಿಡುವ ಮುನ್ನ ನಟ ವಿಜಯ್ ಅಭಿನಯಿಸಿರುವ ಕೊನೆಯ ಚಿತ್ರ ಇದಾಗಿದೆ ಎಂಬುದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹೆಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಲಿ, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್ ಮತ್ತು ನರೈನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ.
ರಿಲೀಸ್‌ಗೆ ಮುನ್ನವೇ ಸಾಲು ಸಾಲು ದಾಖಲೆಗಳನ್ನು ಧೂಳೀಪಟ ಮಾಡಿರುವ 'ಜನ ನಾಯಗನ್' ಮುಂಬರುವ ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಲಿದೆ ಎಂಬುದೆ ಇದೀಗ ಕುತೂಹಲ ಹೆಚ್ಚಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ವಿಜಯ್ ಅವರ ಕೊನೇ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಹಾಕಿತ್ತು. ಇದೀಗ ಸಿನಿಮಾನ ನೋಡಿದವರಿಂದ ಉತ್ತರ ಪ್ರತಿಕ್ರಿಯೆಗಳು ಬರುತ್ತಿದ್ದು, ಇನ್ನೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂದು ಹೇಳಲಾಗುತ್ತಿದೆ.