
ಗದಗ | ಹೋರಾಟದ ಫಲ: ಸ್ಮಾರಕ ನಿರ್ಮಾಣ ಆರಂಭ
ಗದಗ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರುವ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣ ಕಾರ್ಯ ಕೊನೆಗೂ ಆರಂಭವಾಗಿದೆ. ಒಟ್ಟಾರೆ ₹10 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.
ಹಲವು ವರ್ಷಗಳ ಹೋರಾಟದ ಫಲವಾಗಿ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಕಾಮಗಾರಿಯು ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆಯುತ್ತಿದೆ. ವಿಧಾನಸಭಾಧ್ಯಕ್ಷರೂ ಆಗಿರುವ ಶಾಸಕ ಜಿ.ಎಸ್. ಪಾಟೀಲ ಅವರು ಈಚೆಗೆ ಯೋಜನೆ ಘೋಷಣೆ ಮಾಡಿದ್ದರು. ಅದರಂತೆ, ಸದ್ಯ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮೂರು ಅಂತಸ್ತಿನ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
‘ಮೊದಲ ಹಂತದ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಸ್ಮಾರಕ ನಿರ್ಮಾಣ ಕಾಮಗಾರಿಗೆ 9ರಿಂದ 11 ತಿಂಗಳ ಅವಧಿ ಬೇಕಾಗುತ್ತದೆ. ಸರ್ಕಾರ ಅನುದಾನ ಬಿಡುಗಡೆಗೊಳಿಸಿದ ನಂತರ ಇನ್ನುಳಿದ ಕಾಮಗಾರಿಗಳನ್ನು ನಡೆಸಲಾಗುತ್ತದೆ’ ಎಂದು ರೋಣ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ ಕುಸುಗಲ್ ಹೇಳಿದರು.
ಏನೇನು ಇರಲಿದೆ?: ಕಚೇರಿ ಹಾಗೂ ಟಿಕೆಟ್ ಕೌಂಟರ್ ಇರುವ ಪ್ರವೇಶದ್ವಾರ (46 ಮೀಟರ್ ಅಳತೆ), ನೆಲಮಹಡಿ ಹಾಗೂ ಮೊದಲ ಮಹಡಿ ಒಳಗೊಂಡ ಸ್ಮಾರಕ (372 ಮೀಟರ್), ಆರು ವಿಶ್ರಾಂತಿ ಸ್ಥಳಗಳು (180 ಮೀಟರ್), ಬಯಲು ರಂಗಮಂದಿರ (496 ಮೀಟರ್), ಅಂದಾನಪ್ಪ ದೊಡ್ಡಮೇಟಿ ಅವರ ಸಮಾಧಿ (10 ಮೀಟರ್), ಸಾರ್ವಜನಿಕ ಶೌಚಾಲಯ (45 ಮೀಟರ್) ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ಸ್ಮಾರಕದಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರ ಪ್ರತಿಮೆ, ಸ್ವಾತ್ರ್ಯಂತ್ರ್ಯ ಹೋರಾಟಗಾರಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ನಿರ್ಮಿಸುವ ಅಂಶ ಯೋಜನೆಯಲ್ಲಿದೆ.
ಕಾಲಮಿತಿ ನಿಗದಿಗೆ ಆಗ್ರಹ: ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಿಲ್ಲ. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ನಡೆಸುವುದರಿಂದ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಸರ್ಕಾರದ ಅನುದಾನಕ್ಕಾಗಿ ಕಾಯಬೇಕಾಗುತ್ತದೆ. ಹಾಗಾಗಿ, ನಿಗದಿಗೊಳಿಸಿದ ಅಷ್ಟೂ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಿ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಯ.
‘ಸ್ವಾತಂತ್ರ್ಯ, ಕನ್ನಡಕ್ಕಾಗಿ ಹೋರಾಟ’
‘ಸ್ವಾತಂತ್ರ್ಯ ಹೋರಾಟದಲ್ಲಿ ನಿರತರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಅವರು ಜೈಲು ಸೇರಿದಾಗ ಮಹಾತ್ಮ ಗಾಂಧಿ ಸಂಪರ್ಕಕ್ಕೆ ಬಂದರು. ಆ ಒಡನಾಟದಿಂದಲೇ 1934ರಲ್ಲಿ ಜಕ್ಕಲ್ಲಿ ಗ್ರಾಮಕ್ಕೆ ಗಾಂಧಿ ಅವರನ್ನು ಕರೆತಂದರು. ಗಾಂಧಿ ಪ್ರಭಾವದಿಂದ, ತಾವು ಹರಿಜನರಿಗೆ ನೀಡಿದ್ದ ಸಾಲದ ಪತ್ರಗಳನ್ನು ಹರಿದುಹಾಕಿದ್ದರು’ ಎಂದು ಗ್ರಾಮದ ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಸ್ಮರಿಸಿದರು.
‘ಮುಂಬೈ ವಿಧಾನಮಂಡಲದಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ್ದ ಅವರು, ತಮ್ಮ ಕಲ್ಪನೆಯಲ್ಲಿ ಭುವನೇಶ್ವರಿಯ ಚಿತ್ರ ಬರೆಯಿಸಿದ್ದರು. ಕರ್ನಾಟಕ ಏಕೀಕರಣಕ್ಕೆ ಅಪಾರ ಕೊಡುಗೆ ನೀಡಿದರು. ಆಗರ್ಭ ಶ್ರೀಮಂತರಾಗಿದ್ದ ಅವರು ಹುಬ್ಬಳ್ಳಿಯ ಕೆಎಂಸಿಯಲ್ಲಿ ಮೃತಪಟ್ಟಾಗ, ಆಸ್ಪತ್ರೆಗೆ ಪಾವತಿಸಲು ಕುಟುಂಬದವರ ಬಳಿ ₹500 ಸಹ ಇರಲಿಲ್ಲ. ಅಂತಹ ಮಹಾನ್ ವ್ಯಕ್ತಿಯ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರ ಪೂರ್ಣಗೊಳ್ಳಬೇಕಿದೆ’ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-23-240238329