
Copra Price: ತಿಪಟೂರು ಎಪಿಎಂಸಿ ಕೊಬ್ಬರಿ ಧಾರಣೆ.. ದಾಖಲೆಯ ಏರಿಕೆ
Copra: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೊಬ್ಬರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈಗಾಗಲೇ ಇಲ್ಲಿನ ಎಪಿಎಂಸಿಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಉದಾಹರಣೆಯೂ ಇದೆ. ಹಾಗಾದ್ರೆ ಇದೀಗ ಪ್ರಸ್ತುತ ಧಾರಣೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದ ಪ್ರಸಿದ್ಧ ತೆಂಗು ಹಾಗೂ ಕೊಬ್ಬರಿ ವಹಿವಾಟಿನ ಪ್ರಮುಖ ಕೇಂದ್ರವಾಗಿರುವ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಮಾಹಿತಿ ಪ್ರಕಾರ, ಶುಕ್ರವಾರ (ಆಗಸ್ಟ್ 21) ಪ್ರತಿ ಕ್ವಿಂಟಾಲ್ (100 ಕೆ.ಜಿ) ಧಾರಣೆಯು 31,500 ರೂಪಾಯಿ ತಲುಪಿದೆ ಎಂದು ತಿಳಿದುಬಂದಿದೆ.
ದರ ಏರಿಕೆಗೆ ಪ್ರಮುಖ ಕಾರಣಗಳು
ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹಬ್ಬ-ಹರಿದಿನಗಳು ಹತ್ತಿರ ಆಗುತ್ತಿರುವುದರಿಂದ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ತಿಪಟೂರು ಕೊಬ್ಬರಿ ತನ್ನ ವಿಶಿಷ್ಟ ರುಚಿ, ಹೆಚ್ಚಿನ ಎಣ್ಣೆಯಂಶಕ್ಕೆ ಹೆಸರುವಾಸಿಯಾಗಿದೆ. ಇದರಿಂದಾಗಿ ಕಲ್ಪತರು ನಾಡಿನ ಕೊಬ್ಬರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಹೇಳಬಹುದು.
ಇತ್ತೀಚಿನ ಹವಾಮಾನ ವೈಪರೀತ್ಯ ಹಾಗೂ ಇಳುವರಿಯಲ್ಲಿ ಆದ ವ್ಯತ್ಯಾಸದಿಂದ ಮಾರುಕಟ್ಟೆಗೆ ಬರುವ ಕೊಬ್ಬರಿಯ ಪ್ರಮಾಣ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಇದು ಕೂಡ ಪ್ರಮುಖ ಕಾರಣವಾಗಿದೆ. ಇಲ್ಲಿನ ಮಾರುಕಟ್ಟೆಯು ರೈತರಿಗೆ ನಿಖರ ಮಾಹಿತಿಯನ್ನು ನೀಡುತ್ತಲೇ ಬಂದಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ, ರೈತರಿಗೆ ಸೂಕ್ತ ಬೆಲೆ ಸಿಗುತ್ತಿದೆ. ಇದರಿಂದ ಇಲ್ಲಿನ ಕೊಬ್ಬರಿ ಬೆಳೆಗಾರರಲ್ಲಿ ವಿಶ್ವಾಸವನ್ನು ಹೆಚ್ಚಿದೆ ಎನ್ನಲಾಗುತ್ತಿದೆ.
ತೆಂಗು ಬೆಳೆಗಾರರಲ್ಲಿ ಹೆಚ್ಚಿನ ಸಂತಸ
ಇನ್ನೂ ಕೊಬ್ಬರಿ ಬೆಲೆ ಏರಿಕೆಯಿಂದಾಗಿ ತುಮಕೂರು, ಹಾಸನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ತೆಂಗು ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದು, ಬರುವ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳ ಆಗುವ ನಿರೀಕ್ಷೆಯಲ್ಲಿದ್ದಾರೆ.