
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಸಂವಾದ ಇಂದು
ಬೆಂಗಳೂರು: ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರು ಭಾನುವಾರ (ಆ.23) ಬೆಂಗಳೂರಿಗೆ ಬರಲಿದ್ದು, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ.
ನೇಹಾ ಬೋರಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ವಿಡಿಯೊ ಹಂಚಿಕೊಂಡಿದ್ದಾರೆ. ‘ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿಗಳಲ್ಲಿ ಅಕ್ರಮ ಸೇರಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡೋಣ ಬನ್ನಿ’ ಎಂದು ಆಹ್ವಾನ ನೀಡಿದ್ದಾರೆ.
ನಗರದ ಕಬ್ಬನ್ ಉದ್ಯಾನದಲ್ಲಿರುವ ಎನ್‌ಜಿಒ (ಸರ್ಕಾರಿ ನೌಕರರ ಭವನ) ಸಭಾಂಗಣದಲ್ಲಿ ಭಾನುವಾರ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ–ಕರ್ನಾಟಕ ಘಟಕದ ಸಂಘಟನಾ ಸದಸ್ಯೆ ಶ್ರೀಗಂಗಾ ಪಿ. ತಿಳಿಸಿದರು.
ನಟ ಕಿಶೋರ್, ಗಾಯಕ ಟಿ.ಎಂ.ಕೃಷ್ಣ ಅವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟ, ಅದರಿಂದ ಎದುರಾದ ಸವಾಲುಗಳ ಬಗ್ಗೆ ಮೂವರೂ ಮಾತನಾಡಲಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅತಿಥಿಗಳು ಮಾತನಾಡಿದ ನಂತರ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರ ಜತೆಗೆ ಸಂವಾದ ಏರ್ಪಡಿಸಲಾಗಿದೆ. ಹಲವು ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳ ಸದಸ್ಯರೂ ಸಂವಾದದಲ್ಲಿ ಸಭಿಕರಾಗಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.