
ಟ್ರಂಪ್ ವರ್ತನೆ ಬಗ್ಗೆ ಭಾರತದ ಎಚ್ಚರದ ನಡೆ
ನವದೆಹಲಿ (ಪಿಟಿಐ): ವಿವಿಧ ದೇಶಗಳ ನಾಯಕರ ಬಗೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೋರುತ್ತಿರುವ ಊಹಿಸಲಾಗದ ವರ್ತನೆಯ ಕಾರಣಕ್ಕೆ, ಎಚ್ಚರದಿಂದ ವ್ಯವಹರಿಸುವ ನಡೆಯನ್ನು ಭಾರತವು ತನ್ನದಾಗಿಸಿಕೊಂಡಿತ್ತು ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.
‘ಕಳೆದ ತಿಂಗಳು ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆ ಸಂದರ್ಭದಲ್ಲಿ ಟ್ರಂಪ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ, ಮಾಧ್ಯಮದೊಂದಿಗೆ ಸಂವಾದ ನಡೆಸದಿರುವ ಕುರಿತು ನಿರ್ಧರಿಸಲಾಗಿತ್ತು’ ಎಂದು ಹೇಳಿವೆ.
‘ಮೋದಿ–ಟ್ರಂಪ್ ಚರ್ಚೆ ಬಳಿಕ ಜಂಟಿ ಮಾಧ್ಯಮ ಗೋಷ್ಠಿ ಆಯೋಜಿಸಲು ಬಯಸುವುದಿಲ್ಲ ಎಂದು ಭಾರತವು ನಮಗೆ ಮುಂಚಿತವಾಗಿ ಮಾಹಿತಿ ನೀಡಿತ್ತು’ ಎಂಬ ಅಮೆರಿಕ ರಾಯಭಾರಿ ಸರ್ಗಿಯೊ ಗೊರ್ ಅವರ ಹೇಳಿಕೆಯ ಬಳಿಕ ಸರ್ಕಾರದಿಂದ ಈ ಸ್ಪಷ್ಟನೆ ಹೊರಬಿದ್ದಿದೆ.
‘ಮಾಧ್ಯಮಗಳ ಪ್ರಶ್ನೆಗೆ ಅವಕಾಶ ಬೇಡ ಎಂಬ ಭಾರತದ ಮನವಿಗೆ ಟ್ರಂಪ್ ಅವರೂ ಸಮ್ಮತಿ ಸೂಚಿಸಿದ್ದರು. ಆದರೆ ಇದನ್ನು ಮರೆತ ಅಧ್ಯಕ್ಷರು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಟ್ಟರು. ಸುಮಾರು 45 ನಿಮಿಷ ಸಂವಾದ ನಡೆಯಿತು’ ಎಂದೂ ಗೊರ್ ಅವರು ವೇದಿಕೆಯೊಂದರಲ್ಲಿ ಹೇಳಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-51-266063094