ಹೊಸಪೇಟೆ ಜಿಲ್ಲಾಸ್ಪತ್ರೆ ಕಟ್ಟಡ: ಇಚ್ಛಾಶಕ್ತಿಗೆ ತಗುಲಿತೇ ಅನಾರೋಗ್ಯ?

ಹೊಸಪೇಟೆ ಜಿಲ್ಲಾಸ್ಪತ್ರೆ ಕಟ್ಟಡ: ಇಚ್ಛಾಶಕ್ತಿಗೆ ತಗುಲಿತೇ ಅನಾರೋಗ್ಯ?

ಹೊಸಪೇಟೆ ಜಿಲ್ಲಾಸ್ಪತ್ರೆ ಕಟ್ಟಡ: ಇಚ್ಛಾಶಕ್ತಿಗೆ ತಗುಲಿತೇ ಅನಾರೋಗ್ಯ?

ಹೊಸಪೇಟೆ (ವಿಜಯನಗರ): ನಗರದ ಜಂಬುನಾಥಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಕಟ್ಟಡ ಸಜ್ಜುಗೊಂಡು ಹಲವು ತಿಂಗಳುಗಳೇ ಕಳೆದಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ. ಆಸ್ಪತ್ರೆ ಆರಂಭಿಸಬೇಕು ಎಂಬ ಇಚ್ಛಾಶಕ್ತಿಗೆ ಅನಾರೋಗ್ಯ ತಗುಲಿದ ಲಕ್ಷಣ ಕಾಣಿಸಿದೆ.

ಸುಮಾರು ₹124 ಕೋಟಿ ವೆಚ್ಚದಲ್ಲಿ ಇಲ್ಲಿ ಆಸ್ಪತ್ರೆ ಕಟ್ಟಡ ಮಾತ್ರವಲ್ಲ, ವೈದ್ಯರು, ಶುಶ್ರೂಷಕಿಯರ ಕ್ವಾರ್ಟರ್ಸ್‌, ಕ್ಯಾಂಟೀನ್‌, ಜನರೇಟರ್, ಸುಸಜ್ಜಿತ ಸಂಪರ್ಕ ರಸ್ತೆ ಎಲ್ಲವೂ ಸಿದ್ಧವಾಗಿದೆ. ಕೆಲವು ವೈದ್ಯಕೀಯ ಉಪಕರಣಗಳು ಸಹ ಬಂದಿವೆ. 250 ಮಂದಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಇತರ ಸಿಬ್ಭಂದಿಯ ನೇಮಕಾತಿಗೂ ಸರ್ಕಾರದ ಅನುಮತಿ ಸಿಕ್ಕಿದೆ. ಆದರೆ ನೇಮಕಾತಿ, ಇತರ ಎಲ್ಲ ವ್ಯವಸ್ಥೆಗಳೂ ಇದೀಗ ಆಸ್ಪತ್ರೆಯ ಉದ್ಘಾಟನೆಗಾಗಿ ಕಾಯುತ್ತಿವೆ.

ಫೆಬ್ರುವರಿ ಮಧ್ಯಭಾಗದಲ್ಲಿ ನಡೆದ ಹಂಪಿ ಉತ್ಸವದ ಸಂದರ್ಭದಲ್ಲೇ ಆಸ್ಪತ್ರೆಯ ಉದ್ಘಾಟನೆಗೆ ಯೋಜನೆ ರೂಪಿಸಲಾಗಿತ್ತು, ಅಂದರೆ ಆಗಲೇ ಕಟ್ಟಡಗಳು, ಇತರ ಸೌಲಭ್ಯಗಳು ಸಿದ್ದವಾಗಿದ್ದವು. ಆದರೆ ಕೆಲವೊಂದು ವೈದ್ಯಕೀಯ ಉಪಕರಣಗಳು ಬಂದಿಲ್ಲ ಎಂಬ ಕಾರಣಕ್ಕೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಂಗಳ ಬಳಿಕ ಉದ್ಘಾಟನೆ ನೆರವೇರಿಸೋಣ ಎಂದಿದ್ದರು. ಆದರೆ ಅದಾಗಿ ಏಳು ತಿಂಗಳು ಕಳೆದಿದೆ, ಸರ್ಕಾರದ ನಾಯಕತ್ವವೂ ಬದಲಾಗಿದೆ. ಆದರೆ ಆಸ್ಪತ್ರೆಗೆ ಉದ್ಘಾಟನೆ ಭಾಗ್ಯ ಮಾತ್ರ ದೊರೆತಿಲ್ಲ.

ಶಾಸಕರ ಒತ್ತಡವೇ ಮುಖ್ಯ: ‘ಹೊಸ ಜಿಲ್ಲೆಯಾಗಿ ಐದು ವರ್ಷ ಕಳೆದರೂ ಜಿಲ್ಲೆಯಲ್ಲಿ ಮೂಲಸೌಲಭ್ಯ ಕಲ್ಪಿಸುವುದು ಬಹಳ ನಿಧಾನಗತಿಯಲ್ಲಿದೆ. ಸುಸಜ್ಜಿತ ಆಸ್ಪತ್ರೆ ಈಗಾಗಲೇ ಕಾರ್ಯಾರಂಭ ಮಾಡಬೇಕಿತ್ತು. ಇಲ್ಲಿ ಸ್ಥಳೀಯ ಶಾಸಕರ ಪಾತ್ರ ದೊಡ್ಡದಿದೆ. ಆಡಳಿತ ಪಕ್ಷದ ಶಾಸಕರೇ ಇಲ್ಲಿದ್ದರೂ ಸರ್ಕಾರವನ್ನು ಎಚ್ಚರಿಸುವ ಕೆಲಸದಲ್ಲಿ ಅವರು ಹಿಂದೆ ಬಿದ್ದಂತೆ ಕಾಣಿಸುತ್ತಿದೆ’ ಎಂದು ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್ ಹೇಳಿದರು.

‘ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲಿ ಈಗಾಗಲೇ ಸ್ಥಾಪನೆಯಾಗಬೇಕಿತ್ತು. ಬಹುತೇಕ ಪ್ರತಿ ಜಿಲ್ಲೆಯಲ್ಲೂ ಇಂದು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದೆ, ಆದರೆ ಹೊಸಪೇಟೆಯಲ್ಲಿ ಅದನ್ನು ತರುವ ಇಚ್ಛಾಶಕ್ತಿ ಯಾರಿಗೂ ಇದ್ದಂತಿಲ್ಲ’ ಎಂದು ಜಿಲ್ಲಾ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಹೇಳಿದರು.

ಸಚಿವರ ಭರವಸೆ: ‘ಪ್ರಧಾನಮಂತ್ರಿ ಆಯುಷ್ಮಾನ್‌ ಭಾರತ್ ಹೆಲ್ತ್‌ ಮಿಷನ್‌ ಯೋಜನೆಯಡಿಯಲ್ಲಿ ಎಂಆರ್‌ಐ ಯಂತ್ರ ಈ ಆಸ್ಪತ್ರೆಗೆ ಮಂಜೂರಾಗಿದೆ. ಕಾರ್ಡಿಯಕ್‌ ಕೇರ್ ಘಟಕ ಮಂಜೂರು ಮಾಡಿಸಲು ಸಹ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಬಸವಂತಪ್ಪ ಹೇಳಿದ್ದರು. ಆದರೆ ಆಸ್ಪತ್ರೆ ಯಾವಾಗ ಉದ್ಘಾಟನೆಗೊಳ್ಳಲಿದೆ ಎಂಬುದನ್ನು ಅವರು ತಿಳಿಸಿರಲಿಲ್ಲ.

ಈ ಬಗ್ಗೆ ಶಾಸಕ ಎಚ್‌.ಆರ್.ಗವಿಯಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಎಂಆರ್‌ಐ ಯಂತ್ರ ಅಳವಡಿಕೆಗೆ ಸಿದ್ಧತೆ

‘ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರ ಅಳವಡಿಕೆಗೆ ಸಮೀಕ್ಷೆ ನಡೆಸಿರುವ ತಜ್ಞರು, ಎಲ್ಲಿ, ಹೇಗೆ ಯಂತ್ರ ಅಳವಡಿಸಬಹುದು ಎಂಬುದನ್ನು ಅಂದಾಜಿಸಿದ್ದಾರೆ. ರಾಜ್ಯದಲ್ಲಿ ಮೂರು ಆಸ್ಪತ್ರೆಗಳಿಗೆ ಈ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದ್ದು, ಜಿಲ್ಲೆಯೂ ಅದರಲ್ಲಿ ಒಂದು, ಜಿಲ್ಲೆಯ ಯಾವೊಂದು ಸರ್ಕಾರಿ ಆಸ್ಪತ್ರೆಯಲ್ಲೂ ಈ ಸೌಲಭ್ಯ ಇಲ್ಲದ ಕಾರಣ ಇದೊಂದು ದೊಡ್ಡ ಆಶಾಕಿರಣ’ ಎಂದು ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಡಾ.ಎಲ್.ಆರ್.ಶಂಕರ್ ನಾಯ್ಕ್‌ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-25-1889710388

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ