
ಮುದಗಲ್‌ನಲ್ಲಿ ನಿರ್ಮೂಲನೆಯಾಗದ ಭಿಕ್ಷಾಟನೆ; ಮಕ್ಕಳ ಬಳಕೆ
ಮುದಗಲ್: ಪಟ್ಟಣದ ವಿವಿಧೆಡೆ ಪುರುಷ, ಮಹಿಳೆಯರು ಅಲ್ಲದೇ ಮಕ್ಕಳೂ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣಿಸುತ್ತಿವೆ.
ಅನೇಕರು ಬೀದಿಗಿಳಿದು ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡತನ, ಅನಕ್ಷರತೆ, ಅಂಗವೈಕಲ್ಯ, ಮಾನಸಿಕ ಅಸ್ವಸ್ಥತೆ, ಕಾಯಿಲೆ, ಹಿರಿತನ ಹೀಗೆ ವಿವಿಧ ಕಾರಣಗಳನ್ನು ನೀಡಿ ಆಹಾರಕ್ಕಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಳವಾಗಿದೆ.
‘ಕೆಲ ಮಹಿಳೆಯರು ಕಂಕುಳಲ್ಲಿ ಮಕ್ಕಳನ್ನು ಎತ್ತಿಕೊಂಡು ಹಣ ಬೇಡುತ್ತಿದ್ದಾರೆ. ಭಿಕ್ಷೆಗಾಗಿ ಬಾಡಿಗೆ ಮಗುವನ್ನು ತಂದು ತೋರಿಸಿ ಭಿಕ್ಷೆ ಬೇಡುತ್ತಿದ್ದಾರೆ. ಕೆಲ ಮಕ್ಕಳಿಗೆ ಮತ್ತಿನ ಔಷಧ ನೀಡುವುದರಿಂದ ಯಾವಾಗಲು ಮಲಗಿರುತ್ತವೆ. ಭಿಕ್ಷಾಟನೆಗೆ ಮಕ್ಕಳನ್ನು ದುರುಪಯೋಗ ಮಾಡಿಕೊಂಡರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎನ್ನುತ್ತಾರೆ ಕೆಲ ಸ್ಥಳೀಯ ನಿವಾಸಿಗಳು.
ಭಾನುವಾರ ಮತ್ತು ಸೋಮವಾರ ಪಟ್ಟಣದಲ್ಲಿ ಸಂತೆ ಇರುವ ಕಾರಣ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಭಾಗದಿಂದ ಭಿಕ್ಷುಕರ ದಂಡೆ ಪಟ್ಟಣಕ್ಕೆ ಆಗಮಿಸುತ್ತದೆ. ಪಟ್ಟಣದ ಪ್ರತಿ ಅಂಗಡಿಗೆ ಹೋಗಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಭಿಕ್ಷಾಟನೆಯಲ್ಲಿ ಸ್ಥಳೀಯರಿಗಿಂತ ಹೊರಗಿನವರೆ ಹೆಚ್ಚು. ಬಸ್‌ಗಳ ಮೂಲಕ ಪಟ್ಟಣಕ್ಕೆ ಬಂದು ಬಸ್ ನಿಲ್ದಾಣ, ಮಾರುಕಟ್ಟೆಯಂತಹ ಜನದಟ್ಟಣೆ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಾರೆ. ‘ಸರ್ಕಾರ ಭಿಕ್ಷಾಟನೆಯಲ್ಲಿ ತೊಡಗಿದವರನ್ನು ಪತ್ತೆ ಮಾಡಿ, ಅವರನ್ನು ನಿರಾಶ್ರಿತರ ಕೇಂದ್ರದಲ್ಲಿ ಇರಿಸಿ, ವಿವಿಧ ಕೌಶಲ ಆಧಾರಿತ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಆದರೆ, ಮುದಗಲ್ ಪಟ್ಟಣದಲ್ಲಿ ಭಿಕ್ಷಾಟನೆ ಮಾಡುವ ಭಿಕ್ಷುಕರಿಗೆ ನಿಯಮಗಳೂ ಅನ್ವಯ ವಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರು.
ಭಿಕ್ಷಾಟನೆಗೆ ಅವಕಾಶವಿಲ್ಲದಿದ್ದರೂ, ಕೆಲವೆಡೆ ಏನೂ ಅರಿಯದ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಸಮೀಪದ ಅಂಕಲಗಿ ಮಠದಲ್ಲಿ ಪ್ರತಿ ಅಮಾವಾಸ್ಯೆ ದಿನ ಬೇರೆ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷುಕರು ಬಂದು ಭಿಕ್ಷಾಟನೆ ಮಾಡುತ್ತಿದ್ದಾರೆ. ಮುಖ್ಯರಸ್ತೆಗಳಲ್ಲಿ ತೃತೀಯಲಿಂಗಿಗಳು ವಾಹನಗಳನ್ನು ಅಡ್ಡಗಟ್ಟಿ ಭಿಕ್ಷಾಟನೆ ಮಾಡುತ್ತಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-32-1662942983