
ಕುಟುಂಬಕ್ಕಷ್ಟೇ ಅಲ್ಲ ಕಸದ ವಾಹನಕ್ಕೂ ಚಾಲಕಿ: ಜಲಧಿಗೆರೆ ಶಿಲ್ಪಾ ಯಶೋಗಾಥೆ
ಕುಣಿಗಲ್: ಕುಟುಂಬ ಪೊರೆಯಲಿಕ್ಕಾಗಿ ಕಸ ಗುಡಿಸುವ ಕೆಲಸ ಅರಸಿ ಹೋದ ಜಲಧಿಗೆರೆಯ ಶಿಲ್ಪಾ, ಇದೀಗ ಕಸ ಸಂಗ್ರಹಿಸುವ ವಾಹನದ ಚಾಲಕಿ.
ಮೂರು ವರ್ಷದಿಂದಲೂ ಎಡೆಯೂರು ಗ್ರಾಮ ಪಂಚಾಯಿತಿಯ ಕಸದ ವಾಹನಕ್ಕೆ ಚಾಲಕಿಯಾಗಿದ್ದು, ಈಕೆಯ ಸಾಧನೆಯನ್ನು ಗುರುತಿಸಿ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸತ್ಕರಿಸಿದ ತಾಲ್ಲೂಕು ಆಡಳಿತಕ್ಕೆ ಮೆಚ್ಚುಗೆಯ ಮಹಾಪೂರವೇ ಸಂದಿದೆ.
ಕುಣಿಗಲ್ ತಾಲ್ಲೂಕಿನ ಏಕೈಕ ಚಾಲಕಿ ಆಗಿರುವ ಮೂವತ್ತಾರರ ಹರೆಯದ ಶಿಲ್ಪಾ ತಮ್ಮ ಯಶೋಗಾಥೆಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.
ನನ್ನ ಪತಿ ಕುಣಿಗಲ್‌ನ ಖಾಸಗಿ ಡೇರಿಯ ಹಾಲು ಸಂಗ್ರಹಣೆ ವಾಹನವೊಂದರ ಚಾಲಕ. ಮೂಲವ್ಯಾಧಿ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅನಿವಾರ್ಯವಾಗಿ ಡ್ರೈವರ್ ಕೆಲಸವನ್ನು ಬಿಡಬೇಕಾಯಿತು. ಅನಾರೋಗ್ಯದಲ್ಲೂ ಹೋಟೆಲ್ ಒಂದರ ಭದ್ರತಾ ಸಿಬ್ಬಂದಿಯಾದರು. ಸಹಜವಾಗಿಯೇ ಸಂಪಾದನೆ ಕಡಿಮೆಯಾಯಿತು. ಕುಟುಂಬ ನಿರ್ವಹಣೆ ಕಷ್ಟಕರವಾಯಿತು.
ದೈನಂದಿನ ಬದುಕು ದುಸ್ತರವಾಯಿತು. ಒಬ್ಬರ ದುಡಿಮೆ ಯಾವುದಕ್ಕೂ ಸಾಲದಾಯಿತು. ಮನೆಯಿಂದ ಹೊರಬೀಳುವುದು ಅನಿವಾರ್ಯವಾಯಿತು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹುಟ್ಟಿ ಬೆಳೆದಿದ್ದರೂ ತಂದೆಯ ಬೇಜವಾಬ್ದಾರಿತನದಿಂದ ಓದು– ಬರಹ ಕಲಿತಿರಲಿಲ್ಲ. ತಮ್ಮ– ತಂಗಿಯನ್ನು ಕಷ್ಟಪಟ್ಟು ನಾನೇ ಓದಿಸಿದ್ದೆ. ಆದರೆ ನಾನು ಓದಲಾಗಲಿಲ್ಲ. ಈಗೇನು ಮಾಡಬೇಕು ಎಂಬುದೇ ತೋಚದಾಯಿತು. ದಿಕ್ಕೆಟ್ಟಂತಾಗಿ ನೇರವಾಗಿ ಎಡೆಯೂರು ಗ್ರಾಮ ಪಂಚಾಯಿತಿ ಕಚೇರಿಗೆ ಎಡತಾಕಿದೆ.
ಕಚೇರಿಯಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಹಾಸ್ ಅವರನ್ನು ಸಂಪರ್ಕಿಸಿ, ಕಸ ಗುಡಿಸುವ ಕೆಲಸ ಕೊಡುವಂತೆ ಕೇಳಿಕೊಂಡೆ. ಪಿಡಿಒ ಒಂದರೆಕ್ಷಣ ತಬ್ಬಿಬ್ಬಾದರು. ನಮ್ಮಲ್ಲಿ ಕಸ ಗುಡಿಸುವ ಕೆಲಸ ಖಾಲಿ ಇಲ್ಲ. ಒಂದೇ ಒಂದು ಕೆಲಸ ಇದೆ. ಆದರೆ ಅದು ಕಸ ಗುಡಿಸೋದು ಅಲ್ಲ, ಕಸ ಸಂಗ್ರಹಿಸುವ ವಾಹನದ ಡ್ರೈವರ್ ಕೆಲಸ. ನೀವು ಮಾಡುವುದಾದರೆ ಕೆಲಸ ಕೊಡಲು ನಾವು ಸಿದ್ಧ ಎಂದರು.
ಪಿಡಿಒ ಹೇಳಿದ ಮಾತು ಕೇಳಿಸಿಕೊಂಡು ಕಕ್ಕಾಬಿಕ್ಕಿಯಾದೆ. ಒಂದು ದಿನವೂ ಸ್ಟೇರಿಂಗ್ ಮುಟ್ಟಿಲ್ಲ. ಯಾವೊಂದು ವಾಹನ ಚಲಾಯಿಸಿದ ಅನುಭವ ಇಲ್ಲ. ನಾನೇಗೆ ವಾಹನ ಓಡಿಸೋದು ಎಂದು ಚಂದ್ರಹಾಸ್ ಅವರನ್ನೇ ಪ್ರಶ್ನಿಸಿದೆ. ನನ್ನ ಆತ್ಮಸ್ಥೈರ್ಯದ ನುಡಿಗಳನ್ನು ಮನದಲ್ಲೇ ಮೆಚ್ಚಿಕೊಂಡ ಪಿಡಿಒ, ಅದಕ್ಕೇನಂತೆ ತರಬೇತಿ ಕೊಡಿಸೋಣ. ನೀವು ಕೆಲಸಕ್ಕೆ ಸಿದ್ಧವಾ ಎಂದರು. ನಾನು ಹೂಂಗುಟ್ಟಿದೆ ಅಷ್ಟೇ.
ಎಡೆಯೂರಿನಿಂದ ಕುಣಿಗಲ್‌ನ ಅಂಬಿಕಾ ಡ್ರೈವಿಂಗ್ ಸ್ಕೂಲ್‌ಗೆ ಕರೆದೊಯ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ತರಬೇತಿ ಕೊಡುವಂತೆ ಹೇಳಿದರು. ಶುಲ್ಕವನ್ನು ಗ್ರಾಮ ಪಂಚಾಯಿತಿ ಅನುದಾನ ಬಳಸಿಕೊಂಡು ಕಟ್ಟಿದರು. ಎಲ್‌ಎಲ್‌ಆರ್, ಡಿಎಲ್‌ಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಚಾಲನಾ ಪರವಾನಗಿ ಕೊಡಿಸುವಂತೆ ತಿಳಿಸಿ, ಅದಕ್ಕೆ ಅವಶ್ಯವಿದ್ದ ಶುಲ್ಕವನ್ನು ಪಂಚಾಯಿತಿಯಿಂದಲೇ ಭರಿಸಿದರು.
ಮೊದಲ ದಿನದಿಂದಲೇ ತರಬೇತಿ ಆರಂಭವಾಯಿತು. ಹದಿನೈದು ದಿನ ತರಬೇತಿ ಪಡೆದುಕೊಂಡೆ. ವಾಹನ ಸ್ಟಾರ್ಟ್ ಮಾಡೋದು, ಚಾಲನೆ ಮಾಡೋದು, ಹಿಂತೆಗೆಯೋದು ಎಲ್ಲವನ್ನೂ ಕಲಿತಿದ್ದೆ. ಆದರೆ ಅದಷ್ಟು ಸಾಲದು ಅನಿಸಿತು. ಪಿಡಿಒ ಬಳಿ ಈಗ ಕಲಿತಿರೋದು ಏನು ಸಾಲಲ್ಲ ಅಂತ ಹೇಳಿದೆ. ಅದಕ್ಕೇನಂತೆ ನಮ್ಮ ವಾಟರ್‌ಮನ್ ಜೊತೆ ಒಂದಿಷ್ಟು ದಿನ ವಾಹನ ಓಡಿಸು ಅಂದರು. ನನಗೆ ಸಂಕೋಚ ಆಯಿತು. ವಾಟರ್‌ಮನ್ ಬೇಡ. ನನ್ನ ಪತಿಯಿಂದಲೇ ಹೇಳಿಸಿಕೊಳ್ಳುವೆ ಅಂದೆ. ನನ್ನದೇನು ಅಭ್ಯಂತರ ಇಲ್ಲ. ಅದೂ ಇನ್ನೂ ಒಳ್ಳೇಯದು. ಮುಂದುವರಿ ಎಂದು ಪ್ರೋತ್ಸಾಹ ನೀಡಿದರು.
ಪತಿ ಜೊತೆ ಚಾಲಕ ವೃತ್ತಿಯ ಕೌಶಲಗಳನ್ನು ಕಲಿತುಕೊಂಡೆ. ಸ್ವತಂತ್ರವಾಗಿ ವಾಹನ ಚಲಾಯಿಸಬಹುದು ಎಂಬ ಆತ್ಮವಿಶ್ವಾಸ ಮನದಲ್ಲಿ ಮೂಡುತ್ತಿದ್ದಂತೆ ಕೆಲಸಕ್ಕೆ ಹಾಜರಾದೆ. ಮೂರು ವರ್ಷದಿಂದಲೂ ಎಡೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೆಯೂರು, ಬೀರಗಾನಹಳ್ಳಿ, ಜಲಧಿಗೆರೆಯ 2 ಸಾವಿರ ಮನೆಗಳ ಕಸ ಸಂಗ್ರಹಿಸುವ ಜೊತೆಗೆ ಎಡೆಯೂರಿನ ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಿಸುತ್ತಿರುವೆ. ಅಷ್ಟೇ ಅಲ್ಲ ಜನರ ಪ್ರೀತಿ, ವಿಶ್ವಾಸ ಗಳಿಸಿರುವೆ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-17-937835707