
ಬಾಗೇಪಲ್ಲಿ| ಕಲುಷಿತ ತಾಣವಾದ ಕೊರ್ಲಕುಂಟೆ; ಸ್ವಚ್ಛತೆಗೆ ಜನರ ಆಗ್ರಹ
ಬಾಗೇಪಲ್ಲಿ: ಪಟ್ಟಣಕ್ಕೆ ಕೊಳವೆ ಬಾವಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದ್ದ ಪಟ್ಟಣದ ಹೊರವಲಯದಲ್ಲಿನ ಕೊರ್ಲಕುಂಟೆಯು ಸೂಕ್ತ ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಇಂದು ಅಕ್ಷರಶಃ ಕಸ ಹಾಕುವ ಮತ್ತು ಕಲುಷಿತ ನೀರಿನ ತಾಣವಾಗಿ ಮಾರ್ಪಟ್ಟಿದೆ.
ಸದಾ ಸಮೃದ್ಧದಿಂದ ಹಚ್ಛ ಹಸಿರು ಮತ್ತು ಅಂರ್ತಜಲ ಮಟ್ಟದಿಂದ ಕೊಳವೆಬಾವಿಯಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿತ್ತು. ಪಟ್ಟಣದ ಹುಸೇನು ದಾಸಯ್ಯ ದರ್ಗಾ, ಕೊಡಿಕೊಂಡ ರಸ್ತೆ, ಆವುಲಮಂದೆ ರಸ್ತೆ, ಗಂಗಮ್ಮಗುಡಿ ರಸ್ತೆ, ಕುಂಬಾರಪೇಟೆ ಸೇರಿದಂತೆ ವಿವಿಧ ವಾರ್ಡ್‍ಗಳಿಗೆ ಕೊರ್ಲಕುಂಟೆಯಲ್ಲಿ ಅಳವಡಿಸಿದ ಕೊಳವೆಬಾವಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ, ಇಂದು ಪಟ್ಟಣದ ತ್ಯಾಜ್ಯ, ಕಸ, ಮನೆಗಳ ಕಲುಷಿತ ನೀರನ್ನು ಚರಂಡಿಗಳು, ಕಾಲುವೆಗಳ ಮೂಲಕ ಕೊರ್ಲಕುಂಟೆಗೆ ಹರಿಸಲಾಗಿದೆ. ಸತ್ತ ನಾಯಿ, ಇಲಿ, ಹೆಗ್ಗಣ, ಕೋಳಿಗಳ ರೆಕ್ಕೆಪುಕ್ಕ, ಕುರಿ, ಮೇಕೆಗಳ ತ್ಯಾಜ್ಯ ಹಾಕಲಾಗುತ್ತಿದೆ. ಹಳೆಯ ಮತ್ತು ಮನೆ ಕೆಡವಿದ ತ್ಯಾಜ್ಯಗಳಾದ ಸಿಮೆಂಟ್, ಕಲ್ಲು, ಬಂಡೆಗಳನ್ನು ತಂದು ಸುರಿಯಲಾಗಿದೆ.
ಕೊರ್ಲಕುಂಟೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿದೆ. ಕುಂಟೆ ಸುತ್ತಲ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಮನೆ, ಪಾಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಕಟ್ಟೆ ಇಕ್ಕೆಲಗಳಲ್ಲಿ ಕಸ, ತ್ಯಾಜ್ಯಗಳನ್ನು ರಾಶಿಗಟ್ಟಲೇ ಸುರಿಯಲಾಗಿದೆ. ಬೀದಿನಾಯಿಗಳು ತುಂಡು ಮಾಂಸಕ್ಕೆ ಕಚ್ಚಾಡಿಕೊಂಡು, ರಸ್ತೆಗಳಲ್ಲಿ ತಂದು ಹಾಕುತ್ತಿವೆ. ತ್ಯಾಜ್ಯ ಮತ್ತು ಕಲುಷಿತ ನೀರಿನ ಪಕ್ಕ ದುರ್ನಾತ ಬೀರುತ್ತಿದ್ದು, ಜನರು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಕೊರ್ಲಕುಂಟೆಯಲ್ಲಿ ಕಳೆ, ಮುಳ್ಳಿನ ಗಿಡಗಳು ಬೆಳೆದಿದ್ದು, ರಾಶಿಗಟ್ಟಲೇ ಕಸ, ತ್ಯಾಜ್ಯ ತುಂಬಿದೆ. ಗುಂಡಿಗಳಲ್ಲಿ ಕಲುಷಿತ ನೀರು ಸಂಗ್ರಹವಾಗಿದೆ. ಸೊಳ್ಳೆ, ಇಲಿ, ಹೆಗ್ಗಣಗಳು ಮತ್ತು ಹಾವುಗಳ ಕಾಟ ಹೆಚ್ಚಾಗಿದೆ. ಸುತ್ತಮುತ್ತಲಿನ ಜನರು ಬಾಗಿಲು, ಕಿಟಕಿ ಮುಚ್ಚಿಕೊಂಡು ವಾಸ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಜನರನ್ನು ಕಾಡುತ್ತಿದೆ.
ದಂಡದ ಎಚ್ಚರಿಕೆ: ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಲುಷಿತ ನೀರು ಹೊರಗೆ ಬಿಡಬೇಕು. ಮುಂದಿನ ದಿನಗಳಲ್ಲಿ ಯುಜಿಡಿ ಆರಂಭಿಸುತ್ತೇವೆ. ಪಟ್ಟಣದ ಕಲುಷಿತ ನೀರು ಒಳಚರಂಡಿ ಮೂಲಕ ಹರಿಸಲಾಗುವುದು. ಕೊರ್ಲಕುಂಟೆ ಸ್ಥಳ ಪರಿಶೀಲನೆ ಮಾಡಿ, ಕಸ, ತ್ಯಾಜ್ಯ ಹಾಕದಂತೆ ನಾಮಫಲಕ ಹಾಕಿಸಲಾಗುವುದು. ಕಸ ಹಾಕಿದರೆ ದಂಡ ವಿಧಿಸುತ್ತೇವೆ ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಎಚ್.ಎನ್. ಉದ್ಯಾನದಲ್ಲೂ ದುರ್ವಾಸನೆ
ಪುರಸಭೆಯಿಂದ ಕೊರ್ಲಕುಂಟೆ ಪಕ್ಕ ಡಾ.ಎಚ್.ಎನ್.ಉದ್ಯಾನ ನಿರ್ಮಿಸಲಾಗಿದೆ. ಕಸ, ತ್ಯಾಜ್ಯ, ಕಲುಷಿತ ನೀರಿನಿಂದ ದುರ್ವಾಸನೆ ಹೆಚ್ಚಾಗಿದ್ದು, ಜನರು, ಮಕ್ಕಳು ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ.
ಉದ್ಯಾನದಲ್ಲಿ ಸಹ ಸೂಕ್ತ ನಿರ್ವಹಣೆ ಇಲ್ಲ. ಉದ್ಯಾನ ಮತ್ತು ಕೊರ್ಲಕುಂಟೆಯನ್ನು ಅಭಿವೃದ್ಧಿ ಪಡಿಸಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳೇ ಪಟ್ಟಣದ ಕಲುಷಿತ ನೀರನ್ನು ರಾಜಕಾಲುವೆ, ಚರಂಡಿ, ಕಾಲುವೆಗಳ ಮೂಲಕ ಕೊರ್ಲಕುಂಟೆಗೆ ಹರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಕೊರ್ಲಕುಂಟೆಗೆ ಕಲುಷಿತ ನೀರು ಹರಿಯುವುದನ್ನು ಪುರಸಭೆ ಅಧಿಕಾರಿಗಳು ನಿಲ್ಲಿಸಬೇಕು. ಕಸ, ತ್ಯಾಜ್ಯ ಸುರಿಯದಂತೆ ಪಟ್ಟಣದಲ್ಲಿ ಜಾಗೃತಿ ಜಾಥಾ, ಆಟೊ, ಕರಪತ್ರಗಳ ಮೂಲಕ ಪ್ರಚಾರ ಮಾಡಿಸಬೇಕು ಎಂದು ಪುರಸಭಾ ಮಾಜಿ ಸದಸ್ಯ ಮಹಮದ್ ಎಸ್. ನೂರುಲ್ಲಾ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-16-1566267032