
ಸಂಪುಟ ವಿಸ್ತರಣೆ ಇನ್ನೂ ಅಸ್ಪಷ್ಟ: ಪಟ್ಟಿ ಬಂದರಷ್ಟೇ ಪ್ರಮಾಣ ವಚನ ಸಮಾರಂಭ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಏರ್ಪಾಟು ಮಾಡುವಂತೆ ಮುಖ್ಯಮಂತ್ರಿ ಸಚಿವಾಲಯದಿಂದ ಲೋಕಭವನಕ್ಕೆ ಯಾವುದೇ ಸಂದೇಶ ರವಾನೆ ಆಗಿಲ್ಲ. ಹೀಗಾಗಿ, ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸೋಮವಾರ (ಆಗಸ್ಟ್ 3) ನಡೆಯಲಿದೆಯೇ ಎಂಬ ಬಗ್ಗೆ ಭಾನುವಾರ (ಆಗಸ್ಟ್ 2) ರಾತ್ರಿಯವರೆಗೂ ಯಾವುದೇ ಸ್ಪಷ್ಟತೆ ಲಭ್ಯವಾಗಿಲ್ಲ.
ಸಂಪುಟ ಸೇರಬೇಕಾದವರ ಪಟ್ಟಿಯನ್ನು ಕಾಂಗ್ರೆಸ್‌ನ ಹೈಕಮಾಂಡ್ ನಾಯಕರು ಇನ್ನೂ ಅಂತಿಮಗೊಳಿಸಿಲ್ಲ. ಹೀಗಾಗಿ, ಸಂಪುಟ ವಿಸ್ತರಣೆ ಯಾವಾಗ ನಡೆಯಬಹುದೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸೋಮವಾರ ಬೆಳಿಗ್ಗೆ 10ರ ವೇಳೆಗೆ ಹೈಕಮಾಂಡ್‌ನಿಂದ ಪಟ್ಟಿ ಬರುವ ಸಾಧ್ಯತೆಯಿದೆ. ಪಟ್ಟಿ ಬಂದರೆ ಸಂಜೆಯೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಬಾರದೇ ಇದ್ದರೆ ಬುಧವಾರಕ್ಕೆ ಮುಂದೂಡಿಕೆ ಆಗಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
‘ಸರ್ಕಾರದ ಕಡೆಯಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. ಪ್ರಮಾಣವಚನ ಸ್ವೀಕರಿಸುವ ಶಾಸಕರ ಪಟ್ಟಿ ಬಂದ ನಂತರವಷ್ಟೆ ಯಾವಾಗ, ಎಷ್ಟು ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲು ಸಾಧ್ಯ. ಪ್ರಮಾಣವಚನ ಸಮಾರಂಭಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಆಗಿವೆ. ರಾಜ್ಯಪಾಲರು ಬೆಂಗಳೂರಿನಲ್ಲಿಯೇ ಇದ್ದಾರೆ’ ಎಂದು ಲೋಕಭವನದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸುವ ಜೊತೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಮೂರು ದಿನಗಳ ಹಿಂದೆಯೇ ಮಾಡಲಾಗಿದೆ. ಅಲ್ಲದೆ, ಬಂದೋಬಸ್ತಿಗೆ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಆದರೆ, ಪ್ರಮಾಣವಚನ ಸ್ವೀಕರಿಸುವ ದಿನ, ಸಮಯದ ಬಗ್ಗೆ ಏನೂ ಗೊತ್ತಿಲ್ಲ’ ಎಂದು ರಾಜ್ಯ ಶಿಷ್ಟಾಚಾರ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನವದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಗುರುವಾರ (ಜುಲೈ 30) ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭಾಗಿಯಾಗಿ ಸಚಿವರ ಪಟ್ಟಿಯ ಬಗ್ಗೆ ಸಮಾಲೋಚನೆ ನಡೆಸಿದ್ದರು. ಭಾನುವಾರ ಅಥವಾ ಸೋಮವಾರ ಬೆಳಿಗ್ಗೆ ಸಚಿವರ ಪಟ್ಟಿ ರಾಜ್ಯದ ನಾಯಕರಿಗೆ ತಲುಪಬಹುದೆಂದು ಸಚಿವ ಸ್ಥಾನ ಆಕಾಂಕ್ಷಿಗಳು ಹೇಳಿಕೊಂಡಿದ್ದರು.
ಯಾರಿಗೆ ಮಣೆ, ಇನ್ನೂ ಗೊಂದಲ: ಕೆಲವು ಹೆಸರುಗಳ ಪೈಕಿ ಯಾರನ್ನು ಪರಿಗಣಿಸಬೇಕೆಂಬ ಬಗ್ಗೆ ಗೊಂದಲ ಮುಂದುವರಿದಿರುವುದೇ ಪಟ್ಟಿ ಅಂತಿಮಗೊಳ್ಳದಿರಲು ಕಾರಣ ಎಂದು ಗೊತ್ತಾಗಿದೆ.
ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸಲು ಪ್ರಯತ್ನವನ್ನು ಮುಂದುವರಿಸಿದ್ದಾರೆ. ಹೀಗಾಗಿ, ಪಟ್ಟಿಯಲ್ಲಿ ಬದಲಾವಣೆ ಆಗುತ್ತಿರುವುದರಿಂದಾಗಿ, ಅಂತಿಮ ತೀರ್ಮಾನ ಹೊರಬೀಳುವುದು ವಿಳಂಬವಾಗುತ್ತಿದೆ ಎಂದೂ ತಿಳಿದುಬಂದಿದೆ.
‘ಸಂಪುಟ ವಿಸ್ತರಣೆ ಸಮಾರಂಭ ಸೋಮವಾರ ನಡೆಯಲಿದೆಯೇ’ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಭಾನುವಾರ ನಡೆದ ಸರ್ವಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಪ್ರಶ್ನೆ ಎದುರಾದಾಗ ಅವರು ಮೌನಕ್ಕೆ ಶರಣಾದರು.
‘ಸಚಿವ ಸಂಪುಟಕ್ಕೆ ಸೇರುವವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ನೂತನ ಸಚಿವರು ಸೋಮವಾರ (ಆ. 3) ಪ್ರಮಾಣವಚನ ಸ್ವೀಕರಿಸುವುದು ಶೇ 99ರಷ್ಟು ನಿಶ್ಚಿತ. ಅದಕ್ಕಾಗಿಯೇ ರಾಜಭವನದಲ್ಲಿ ಸಿದ್ಧತೆ ಮಾಡಿಕೊಳ್ಳಲು ಹೇಳಿದ್ದೇನೆ’ ಎಂದು ಶಿವಕುಮಾರ್ ಶುಕ್ರವಾರ ಹೇಳಿದ್ದರು.
ರಾಮಲಿಂಗಾರೆಡ್ಡಿ ಖಾತೆ ಬದಲು?
ತಮಗೆ ಹಂಚಿಕೆಯಾಗಿದ್ದ ಜಲಸಂಪನ್ಮೂಲ ಖಾತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದ ಸಚಿವ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ.
‘ಈ ಕುರಿತು ರೆಡ್ಡಿಯವರು ಮಾಡಿದ ಮನವಿಗೆ ಹೈಕಮಾಂಡ್ ನಾಯಕರು ಸ್ಪಂದಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಹೊಸದಾಗಿ ಸಂಪುಟ ಸೇರುವ ಸಚಿವರ ಪಟ್ಟಿಯ ಜೊತೆಗೇ ಅವರಿಗೆ ಹಂಚಿಕೆ ಮಾಡಬೇಕಾದ ಖಾತೆಯ ಬಗ್ಗೆಯೂ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಲಿದೆ ಎಂದು ಗೊತ್ತಾಗಿದೆ.