
ಚಿಕ್ಕಬಾಣಾವರ, ಜಾಲಹಳ್ಳಿಯಲ್ಲಿ ಪ್ರತ್ಯೇಕ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು
ಬೆಂಗಳೂರು: ಚಿಕ್ಕಬಾಣಾವರ ಹಾಗೂ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮುಂಜಾನೆ ಹಾಗೂ ಭಾನುವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನೆಲಮಂಗಲ–ದಾಸನಪುರ ರಸ್ತೆಯ ಹುಸ್ಕೂರು ರಸ್ತೆಯಲ್ಲಿ ಸೋಮವಾರ ಮುಂಜಾನೆ ವೇಗವಾಗಿ ಚಲಿಸುತ್ತಿದ್ದ ಕಾರು, ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಅರುಣ್ ಕುಮಾರ್ (58) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರುಣ್ ಕುಮಾರ್ ಅವರ ಪುತ್ರ ಡ್ಯಾನಿಯಲ್, ಅವರ ತಾಯಿ ಹಾಗೂ ಸ್ನೇಹಿತ ವಿಕಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡ್ಯಾನಿಯಲ್ ಕಾರು ಚಾಲನೆ ಮಾಡುತ್ತಿದ್ದರು.
‘ಅರುಣ್‌ಕುಮಾರ್ ಉಲ್ಲಾಳದಲ್ಲಿ ನೆಲಸಿದ್ದರು. ಕಿರಾಣಿ ಅಂಗಡಿ ನಡೆಸುತ್ತಿದ್ದರು. ದೊಡ್ಡಬಳ್ಳಾಪುರದಲ್ಲಿ ನೆಲಸಿದ್ದ ಸಂಬಂಧಿಕರ ಮನೆಗೆ ತೆರಳಿದ್ದರು. ತಂದೆ–ತಾಯಿಯನ್ನು ಮನೆಗೆ ಕರೆತರಲು ಡ್ಯಾನಿಯಲ್ ತಮ್ಮ ಸ್ನೇಹಿತ ವಿಕಾಸ್ ಜತೆಗೆ ಕಾರಿನಲ್ಲಿ ದೊಡ್ಡಬಳ್ಳಾಪುರಕ್ಕೆ ತೆರಳಿದ್ದರು. ಕಿರಾಣಿ ಅಂಗಡಿ ಬಾಗಿಲು ತೆರೆಯಬೇಕೆಂಬ ಕಾರಣಕ್ಕೆ ಸೋಮವಾರ ಮುಂಜಾನೆಯೇ ನಗರದತ್ತ ಹೊರಟಿದ್ದರು. ಮಾರ್ಗ ಮಧ್ಯೆ ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕನ ಪಕ್ಕವೇ ಕುಳಿತಿದ್ದ ಅರುಣ್‌ಕುಮಾರ್‌ಗೆ ಗಂಭೀರ ಗಾಯಗಳಾಗಿದ್ದವು. ಸ್ಥಳದಲ್ಲಿಯೇ ಅವರು ಮೃತಪಟ್ಟರು’ ಎಂದು ಸಂಚಾರ ಪೊಲೀಸರು ಹೇಳಿದರು.
ಕಾರು ಅತಿ ವೇಗದಲ್ಲಿ ಚಲಿಸುತ್ತಿತ್ತು. ನಿಯಂತ್ರಣ ಸಾಧ್ಯವಾಗದೇ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿ ಸಾವು: ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೆರೆ ಶಾಲೆಯ ಎದುರು ರಸ್ತೆ ದಾಟುವಾಗ ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಬ್ಬಿಗೆರೆ ನಿವಾಸಿ, ಕ್ಯಾಬ್ ಚಾಲಕ ಚೇತನ್(35) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹೋಟೆಲ್‌ನಲ್ಲಿ ಊಟ ಮುಗಿಸಿಕೊಂಡು ಭಾನುವಾರ ರಾತ್ರಿ 9.30ರ ಸುಮಾರಿಗೆ ರಸ್ತೆ ದಾಟುತ್ತಿದ್ದರು. ಅದೇ ಸಂದರ್ಭದಲ್ಲಿ ವೇಗವಾಗಿ ಬಂದ ದ್ವಿಚಕ್ರ ವಾಹನವು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟರು ಎಂದು ಸಂಚಾರ ಪೊಲೀಸರು ಹೇಳಿದರು.
‘ಅಪಘಾತದ ಬಳಿಕ ದ್ವಿಚಕ್ರ ವಾಹನ ಸವಾರ, ವಾಹನ ನಿಲುಗಡೆ ಮಾಡದೇ ಪರಾರಿಯಾಗಿದ್ದಾನೆ. ಆತನ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಅಪಘಾತ ನಡೆದ ಸ್ಥಳದ ಸುತ್ತಮುತ್ತಲ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಸಂಗ್ರಹಿಸಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-4-1711428402