ಧಾರವಾಡ: ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಕಸ ವಿಲೇವಾರಿ ಅವ್ಯವಸ್ಥೆ

ಧಾರವಾಡ: ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಕಸ ವಿಲೇವಾರಿ ಅವ್ಯವಸ್ಥೆ

ಧಾರವಾಡ: ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಕಸ ವಿಲೇವಾರಿ ಅವ್ಯವಸ್ಥೆ

ಧಾರವಾಡ: ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿವೆ. ಈ ಪ್ರದೇಶವು ಕಸ ವಿಲೇವಾರಿ ಅವ್ಯವಸ್ಥೆ, ಒಳಚರಂಡಿ, ಬೀದಿದೀಪ ಕೊರತೆ ಮೊದಲಾದ ಸಮಸ್ಯೆಗಳ ಸರಮಾಲೆಯ ಕೂಪವಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಈ ಕೈಗಾರಿಕಾ ವಲಯವು 2,065 ಎಕರೆ ಇದೆ. ಸಿಎನ್‍ಸಿ ಯಂತ್ರ, ಆಟೊಮೊಬೈಲ್, ವಾಹನಗಳ ಬಿಡಿಭಾಗಗಳ ತಯಾರಿಕೆ, ಜವಳಿ, ಔಷಧ ತಯಾರಿಕೆ ಘಟಕ ಸಹಿತ 500ಕ್ಕೂ ಹೆಚ್ಚು ಕೈಗಾರಿಕೆಗಳು ಇಲ್ಲಿವೆ.

ಈ ಪ್ರದೇಶದ ಮುಖ್ಯ ರಸ್ತೆಗಳು ಹಾಗೂ ಒಳ ರಸ್ತೆಗಳು ಗುಂಡಿಮಯವಾಗಿದ್ದು, ಸಂಚಾರ ಪಡಿಪಾಟಲಾಗಿದೆ. ಮಳೆಯಾದಾಗ ರಸ್ತೆಗಳು ಕೆಸರುಮಯವಾಗುತ್ತವೆ. ಕಾರ್ಮಿಕರು ಓಡಾಡಲು ಪ್ರಯಾಸ ಪಡುವಂತಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರ ತಾಪತ್ರಯ ಹೇಳತೀರದು.

ಎಚ್.ಪಿ. ಗ್ಯಾಸ್ ಮಾರ್ಗದ ಮುಖ್ಯರಸ್ತೆ ಸಹಿತ ಬಹುತೇಕ ಒಳರಸ್ತೆಗಳಲ್ಲಿ ಬೀದಿದೀಪಗಳೇ ಇಲ್ಲ. ಪಾಳಿ ಮುಗಿಸಿ ಕಾರ್ಮಿಕರು ಕತ್ತಲಿನಲ್ಲಿಯೇ ಮನೆಗೆ ತೆರಳುವಂತಾಗಿದೆ.

ಕೈಗಾರಿಕಾ ಪ್ರದೇಶದಲ್ಲಿ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇಲ್ಲ. ಕೈಗಾರಿಕೆ, ಹೋಟೆಲ್ ತ್ಯಾಜ್ಯ, ಪ್ಲಾಸ್ಟಿಕ್, ಪ್ಯಾಕಿಂಗ್ ವಸ್ತು ಹಾಗೂ ರಾಸಾಯನಿಕ ತ್ಯಾಜ್ಯವನ್ನು ರಸ್ತೆ ಬದಿ, ನಿವೇಶನಗಳಲ್ಲಿ ಎಸೆಯಲಾಗಿದೆ. ಕಸ ಕೊಳೆತು ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ನೊಣಗಳ ಆವಾಸ ತಾಣವಾಗಿದೆ.

ಕೆಲವೆಡೆ ಗಟಾರಗಳು ಹಾಳಾಗಿದ್ದು, ತ್ಯಾಜ್ಯ, ಮದ್ಯದ ಖಾಲಿ ಬಾಟಲಿಗಳು ಬಿದ್ದಿವೆ. ಮಳೆಯಾದಾಗ ಚರಂಡಿಯ ಕೊಳಕು ಹಾಗೂ ಫ್ಯಾಕ್ಟರಿಗಳಿಂದ ಹೊರಬರುವ ರಸಾಯನಿಕಯುಕ್ತ ದ್ರವ ಕೆರೆಗೆ ಸೇರುತ್ತಿದೆ.

‘ಬೀದಿದೀಪ ಇಲ್ಲದ ಕಾರಣ ಕಾರ್ಮಿಕರು ರಾತ್ರಿ ವೇಳೆ ವಿಷಜಂತುಗಳ ಹಾಗೂ ದುಷ್ಕರ್ಮಿಗಳ ಭಯದಲ್ಲೇ ಓಡಾಡುವಂತಾಗಿದೆ. ಅಲ್ಲದೇ, ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಪೊಲೀಸ್‌ ಗಸ್ತು ವ್ಯವಸ್ಥೆ ಜಾರಿಗೊಳಿಸಬೇಕು’ ಎಂದು ಕಾರ್ಮಿಕ ಕಲ್ಲಪ್ಪ ಎಂ. ಒತ್ತಾಯಿಸಿದ್ದಾರೆ.

‘ಎಕರೆಗೆ (ನಿವೇಶನ) ವರ್ಷಕ್ಕೆ ₹40 ಸಾವಿರ ಶುಲ್ಕ ಪಾವತಿಸುತ್ತೇವೆ. ಆದರೂ ರಸ್ತೆ, ದೀಪ, ನೀರು ಇತ್ಯಾದಿ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟವರಿಗೆ ಗೋಗರೆಯಬೇಕಾಗಿದೆ. ನಿವೇಶನ ವಿತರಿಸುವಾಗ ಎಲ್ಲ ಮೂಲಸೌಕರ್ಯದ ಭರವಸೆ ನೀಡಿ ಹಣ ಪಡೆಯುತ್ತಾರೆ. ನಂತರ ನಿರ್ವಹಣೆ ಮರೆಯುತ್ತಾರೆ’ ಎಂಬುದು ಉದ್ಯಮಿಗಳ ದೂರು.

‘ಸಮಸ್ಯೆಗೆ ಶೀಘ್ರ ಮುಕ್ತಿ’

‘ಬೇಲೂರು ಕೈಗಾರಿಕೆ ವಲಯದ ನಿರ್ವಹಣೆ ಜವಾಬ್ದಾರಿಯನ್ನು ಈ ಹಿಂದೆ ಬೇಲೂರು ಗ್ರೋಥ್ ಸೆಂಟರ್‌ ನಿಭಾಯಿಸುತ್ತಿತ್ತು. ಈಗ ಕೆಐಎಡಿಬಿಗೆ ಹಸ್ತಾಂತರಗೊಂಡಿದೆ. ಮೊದಲ ಹಂತದಲ್ಲಿ ವ್ಯವಸ್ಥಿತ ಗಟಾರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮುಂದಿನ ಹಂತದಲ್ಲಿ ರಸ್ತೆಗಳ ದುರಸ್ತಿ ಮೌಲಸೌಕರ್ಯಕ್ಕೆ ಒತ್ತು ನೀಡಲಾಗುವುದು’ ಕೆಐಎಡಿಬಿ ವಲಯ ಅಭಿವೃದ್ಧಿ ಅಧಿಕಾರಿ ಆನಂದಕುಮಾರ ಝಳಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೈಜ್ಞಾನಿಕವಾಗಿ ಘನತ್ಯಾಜ್ಯ ನಿರ್ವಹಣೆಗೆ, ಕಸ ಸಂಗ್ರಹಣಾ ಘಟಕ ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಬಾಕಿ ಇದೆ’ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-24-67053815

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ