
ಚಾನೆಲ್‌ನಲ್ಲಿ ಸೇರುತ್ತಿರುವ ಚರಂಡಿ ನೀರು: ರೋಗ ಆಹ್ವಾನಿಸುತ್ತಿರುವ ಕಾಲುವೆ
ಜಾವಗಲ್: ಗ್ರಾಮದ ಹೃದಯ ಭಾಗದಲ್ಲಿ ಹಾದು ಹೋಗಿರುವ ಫೀಡರ್ ಚಾನೆಲ್ (ಪೋಷಕ ಕಾಲುವೆಯು) ಕೊಳಚೆ ನೀರು ಹಾಗೂ ಗಿಡಗಂಟಿಗಳಿಂದ ತುಂಬಿಹೋಗಿದ್ದು, ಇದರ ಪರಿಣಾಮ ಈ ಕಾಲುವೆಯ ಆಸುಪಾಸಿನಲ್ಲಿ ವಾಸಿಸುತ್ತಿರುವ ನಿವಾಸಿಗಳು ಸೊಳ್ಳೆ ಕಾಟ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ.
ಜಾವಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಕಟ್ಟೆಯಿಂದ ಖಲಂದರ್ ನಗರ, ಜನತಾ ಬಡಾವಣೆ, ಗಾಂಧಿನಗರ, ಲಕ್ಷ್ಮಿಪುರ ಮಾರ್ಗವಾಗಿ ಗ್ರಾಮದ ಬಸ್ ನಿಲ್ದಾಣದ ಹಿಂಭಾಗದಿಂದ ಗ್ರಾಮದ ದೊಡ್ಡ ಕೆರೆಗೆ ನೀರಿನ ಸಂಪರ್ಕ ಕಲ್ಪಿಸುವ ಪೋಷಕ ಕಾಲುವೆ ಇದಾಗಿದೆ.
ಮಳೆಗಾಲದಲ್ಲಿ ಈ ಕಾಲುವೆ ಮೂಲಕ ಗ್ರಾಮದ ದೊಡ್ಡಕೆರೆಗೆ ಹೆಚ್ಚಿನ ನೀರು ಹರಿದು ಬರುವ ವ್ಯವಸ್ಥೆ ಇದ್ದರೂ ಕಾಲುವೆಯನ್ನು ಸ್ವಚ್ಛಗೊಳಿಸದೇ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದು, ಇದರ ಪರಿಣಾಮ ಕಾಲುವೆ ತುಂಬೆಲ್ಲ ಗಿಡಗಂಟಿಗಳು ಬೆಳೆದು ನಿಂತು ನೀರಿನ ಸರಾಗ ಹರಿವಿಗೆ ತೊಡಕುಂಟಾಗಿದೆ. ಕಾಲುವೆಯು ಸೊಳ್ಳೆ ಹಾಗೂ ಕ್ರಿಮಿ-ಕೀಟಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ನೀರಿನ ಹರಿವಿಗೆ ತೊಡಕು ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೇ ಅನೇಕ ಬಾರಿ ಸಮಸ್ಯೆಗಳು ಉಂಟಾಗಿರುವ ಉದಾಹರಣೆಗಳಿವೆ.
ಕಳೆದ ವರ್ಷ ಗ್ರಾಮದಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಈ ಕಾಲುವೆಯ ಮೂಲಕ ಅತಿ ಹೆಚ್ಚಿನ ನೀರು ಗ್ರಾಮದ ದೊಡ್ಡ ಕೆರೆಗೆ ಹರಿಯಲು ಆರಂಭಿಸಿತು. ಆದರೆ ಕಾಲುವೆಯಲ್ಲಿ ಗಿಡಗಂಟಿಗಳು ಹೆಚ್ಚಿದ್ದರಿಂದ ಕಾಲುವೆಯಲ್ಲಿ ಹರಿಯಬೇಕಾಗಿದ್ದ ಮಳೆಯ ನೀರು, ಕಾಲುವೆಯ ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಜೊತೆಗೆ ಕಾಲುವೆ ಹಲವು ಭಾಗ ಹಾನಿಗೊಳಗಾಗಿತ್ತು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಂಡೋಪ ತಂಡವಾಗಿ ಗ್ರಾಮಕ್ಕೆ ಬಂದು, ಈ ಪೋಷಕ ಕಾಲುವೆಯನ್ನು ವೀಕ್ಷಿಸಿದ್ದರು. ಅದನ್ನು ಹೊರತುಪಡಿಸಿದರೆ, ಈವರೆಗೂ ಕಾಲುವೆಯನ್ನು ಸ್ವಚ್ಛಗೊಳಿಸಲು ಹಾಗೂ ಹಾನಿಗೊಳಗಾದ ಕಾಲುವೆಯ ಸೇತುವೆ ಮತ್ತು ತಡೆಗೋಡೆಗಳನ್ನು ದುರಸ್ತಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಮಾತು.
ಪ್ರಸ್ತುತ ಮಳೆಗಾಲ ಆರಂಭವಾಗಲಿದ್ದು ಕಾಲುವೆಯು ಸ್ವಚ್ಛವಾಗಿಲ್ಲದ್ದರಿಂದ ಈ ಬಾರಿಯೂ ಹೆಚ್ಚಿಗೆ ಮಳೆಯಾದಲ್ಲಿ, ಮಳೆಯ ನೀರು ಕಾಲುವೆಯ ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಬಹುದೆಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಮತ್ತೊಂದೆಡೆ ಈ ಪೋಷಕ ಕಾಲುವೆಗೆ ಗ್ರಾಮದಲ್ಲಿನ ಬಹುತೇಕ ಮೋರಿಗಳ (ಚರಂಡಿಗಳ) ನೀರು ಹರಿಯುತ್ತಿದ್ದು, ಕಾಲುವೆಯಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಡೆಂಗಿ ಹಾಗೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಈ ಭಾಗದ ಜನರನ್ನು ಆವರಿಸಿದೆ.
ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಲುವೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಶಿಥಿಲಗೊಂಡಿರುವ ಕಾಲುವೆಯ ಹಲವು ಭಾಗಗಳನ್ನು ದುರಸ್ತಿಗೊಳಿಸಿ, ಮಳೆಗಾಲದಲ್ಲಿ ಕಾಲುವೆಯಲ್ಲಿ ಹರಿಯುವ ನೀರಿನಿಂದ ಸಾರ್ವಜನಿಕರ ಮನೆಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಕಾಲುವೆ ದುರಸ್ತಿ, ಸ್ವಚ್ಛತೆಗೆ ಕ್ರಮಕೈಗೊಳ್ಳದ ಇಲಾಖೆ: ಆಕ್ರೋಶ ಹೂಳು, ಗಿಡಗಂಟಿಗಳಿಂದ ಉಕ್ಕಿ ಹರಿಯುವ ನೀರು ಕಾಲುವೆಯ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಆತಂಕ