
‘ನಂದಗೋಕುಲ’ ಕೇಶವ ಪಾತ್ರದಿಂದ ದಿಢೀರ್ ಹೊರಬಂದ ನಟ ಯಶ್ವಂತ್; ಕಾರಣವಿದು...
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡಿಗರ ನೆಚ್ಚಿನ ‘ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರದಿಂದ ಯಶ್ವಂತ್ ಕುಮಾರ್ ಅವರು ಹೊರಬಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಧಾರಾವಾಹಿ ಚಿತ್ರೀಕರಣದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಬರೋಬ್ಬರಿ 350 ಸಂಚಿಕೆಗಳನ್ನು ಪೂರೈಸಿರುವ ‘ನಂದಗೋಕುಲ’. ಮರೆಯಲಾಗದ ಒಂದು ಪಾತ್ರ. ಲಕ್ಷಾಂತರ ಸುಂದರ ನೆನಪುಗಳು. ಕೇಶವ ಯಾವಾಗಲೂ ನನ್ನ ಭಾಗವಾಗಿರುತ್ತಾನೆ. ಈ ಪ್ರಯಾಣವನ್ನು ವಿಶೇಷವಾಗಿಸಿದ್ದಕ್ಕಾಗಿ ನಂದಗೋಕುಲ ಕುಟುಂಬಕ್ಕೆ ಧನ್ಯವಾದಗಳು. ಈಗ ಮುಂದಿನ ಅಧ್ಯಾಯ’ ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳಿಗೆ ಸುದೀರ್ಘ ಪತ್ರದ ಬರೆದಿರುವ ಯಶ್ವಂತ್ ಅವರು, ‘ಆತ್ಮೀಯ ನಂದಗೋಕುಲ ಕುಟುಂಬ, ಇಂದು ನಾನು ನನ್ನ ಪ್ರಯಾಣದ ಒಂದು ವಿಶೇಷ ಅಧ್ಯಾಯವನ್ನು ಮುಗಿಸುತ್ತಿದ್ದೇನೆ.
ನನ್ನ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿ ಉಳಿಯುವ ಪಾತ್ರ 'ಕೇಶವ'ನಿಗೆ ನಾನು ವಿದಾಯ ಹೇಳುತ್ತಿದ್ದೇನೆ, ಅದರೊಂದಿಗೆ 'ನಂದಗೋಕುಲ'ದೊಂದಿಗಿನ ನನ್ನ ಪಯಣ ಕೊನೆಗೊಂಡಿದೆ.
ಸರಿ ಸುಮಾರು 350 ಸಂಚಿಕೆಗಳು, ನೀವು ಕೇಶವನನ್ನು ನಿಮ್ಮ ಮನೆ ಮಗನಾಗಿ ಸ್ವೀಕರಿಸಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ, ಬೆಂಬಲಿಸಿದ್ದೀರಿ ಮತ್ತು ನಾನು ಊಹಿಸಲು ಸಾಧ್ಯವಾಗದಷ್ಟು ಪ್ರೀತಿಸಿದ್ದೀರಿ. ನೀವು ನನ್ನ ಮೇಲೆ ಮತ್ತು ಪಾತ್ರದ ಮೇಲೆ ತೋರಿಸಿದ ಅಪಾರ ಪ್ರೀತಿಯನ್ನು ನಾನು ಶಾಶ್ವತವಾಗಿ ನನ್ನೊಂದಿಗೆ ಕೊಂಡೊಯ್ಯುತ್ತೇನೆ.
ನನ್ನ ಜೀವನದ ಅರ್ಥಪೂರ್ಣ ಭಾಗವಾಗಿರುವ 'ನಂದಗೋಕುಲ'ವನ್ನು ಬಿಡುವುದು ಸುಲಭದ ಮಾತಲ್ಲ. ಹಲವು ಚಿಂತನಶೀಲ ಚರ್ಚೆಗಳ ನಂತರ, ಪಾತ್ರದ ಬೆಳವಣಿಗೆ ಹಾಗೂ ಕೆಲವು ವೃತ್ತಿಪರ ಅಂಶಗಳನ್ನು ಪರಿಗಣಿಸಿದ ನಂತರ ನಾನು ನನ್ನ ಪ್ರಯಾಣದ ಮುಂದಿನ ಅಧ್ಯಾಯವನ್ನು ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ.
ಈ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ಎಲ್ಲರಿಗೂ - ನನ್ನ ಸಹನಟರು, ನಿರ್ದೇಶಕರು, ಬರಹಗಾರರು, ತಂತ್ರಜ್ಞರು ಮತ್ತು ಇಡೀ ನಂದಗೋಕುಲ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ನಿಮ್ಮೊಂದಿಗೆ ಬದುಕಿದ ಪ್ರತಿ ದೃಶ್ಯ, ನೀವುಗಳು ನೀಡಿದ ಪ್ರತಿ ಮೆಚ್ಚುಗೆ ಮತ್ತು ಪ್ರತಿ ಟೀಕೆ ಕೂಡ ನನ್ನ ಬೆಳವಣಿಗೆಯ ಒಂದು ಭಾಗವಾಗಿದೆ. ನಾನು ಹೋದಲ್ಲೆಲ್ಲಾ ಆ ನೆನಪುಗಳನ್ನು ಮತ್ತು ಪಾಠಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ.
ಬಹುಮುಖ್ಯವಾಗಿ, ನಿಮಗೆ, ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ - ಕೇಶವನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಕೇಶವನನ್ನು ಹಾಗೇ ನೋಡಿ ಸುಮ್ಮನಾಗಲಿಲ್ಲ, ನೀವು ಅವನೊಂದಿಗೆ ಬೆರೆತು, ಅವನನ್ನು ಅರ್ಥಮಾಡಿಕೊಂಡಿರಿ ಮತ್ತು ಅವನನ್ನು ನಿಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಂಡಿರಿ. ಈ ಬಾಂಧವ್ಯವನ್ನು ನಾನು ಯಾವಾಗಲೂ ಜೋಪಾನವಾಗಿಡುತ್ತೇನೆ.
ಇದು ನಂದಗೋಕುಲದೊಂದಿಗಿನ ನನ್ನ ಪ್ರಯಾಣದ ಅಂತ್ಯವಾಗಿರಬಹುದು, ಆದರೆ ಇದು ನನ್ನ ಹೊಸ ಪ್ರಯಾಣದ ಶುರು. ನನ್ನ ಹೃದಯದಲ್ಲಿ ಕೃತಜ್ಞತೆಯೊಂದಿಗೆ, ಹಿಂದಿನ ಪಾಠಗಳು ಮತ್ತು ಮುಂದೆ ಏನಾಗಲಿದೆ ಎಂಬುದರ ಉತ್ಸಾಹದೊಂದಿಗೆ ನಾನು ಹೊಸ ಅಧ್ಯಾಯಕ್ಕೆ ಹೆಜ್ಜೆ ಹಾಕುತ್ತಿದ್ದೇನೆ - ಆ ಅಧ್ಯಾಯ ನನ್ನ ಮುಂಬರುವ ಚಿತ್ರ 'ಸಮುದ್ರ ಮಂಥನ'ದಿಂದ ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಚಿತ್ರಮಂದಿರಗಳಲ್ಲಿ ಭೇಟಿಯಾಗಲು ಮತ್ತು ಈ ಹೊಸ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ತುದಿಗಾಲಿನಲ್ಲಿ ನಿಂತಿದ್ದೇನೆ.
ನಿನ್ನೆಯವರೆಗೂ ನಾನು ಕೇಶವನಾಗಿದ್ದೆ, ನಾಳೆ, ಪರದೆಯ ಮೇಲೆ ಇನ್ಯಾರೋ, ಆದರೆ ಕೊನೆವರೆಗೂ, ನಾನು ನಿಮ್ಮ ಯಶ್ವಂತ್’ ಎಂದು ಬರೆದುಕೊಂಡಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತ ಧಾರೆ’ ಧಾರಾವಾಹಿಯಲ್ಲಿಯೂ ‘ಜೀವ’ ಪಾತ್ರ ಮಾಡುತ್ತಿರುವ ಯಶ್ವಂತ್, ಅಪಾರ ಅಭಿಮಾನಿಗಳನ್ನೂ ಗಳಿಸಿದ್ದಾರೆ.
ಸದ್ಯ ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಯಶ್ವಂತ್ ಅವರಿಗೆ ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.