
ಚೀನಾದ ಮೆಗಾ ಅಣೆಕಟ್ಟೆ: ಭಾರತಕ್ಕೆ ಭವಿಷ್ಯದ ಅಪಾಯ ನೆನಪಿಸಿದ ನೇಪಾಳ ದುರಂತ
ನೇಪಾಳ–ಟಿಬೆಟ್ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಕೇವಲ ಒಂದು ಪ್ರಾಕೃತಿಕ ವಿಕೋಪವಲ್ಲ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದ ಘಟನೆ. ಹಿಮಬಂಡೆಯ ಕುಸಿತದಿಂದ ಉಂಟಾದ ಭೀಕರ ಪ್ರವಾಹ ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದು, ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ನೀರು ನೇಪಾಳದ ಮೂಲಕ ಭಾರತದ ಗಂಡಕಿ ನದಿಯತ್ತ ಹರಿದಿರುವುದರಿಂದ ಅದರ ಪರಿಣಾಮ ಭಾರತಕ್ಕೂ ತಟ್ಟಿದೆ.
ಈ ದುರಂತದ ನಡುವೆಯೇ ಮತ್ತೊಂದು ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಟಿಬೆಟ್‌ನಲ್ಲಿ ಬ್ರಹ್ಮಪುತ್ರ (ಚೀನಾದಲ್ಲಿ ಈ ನದಿಗೆ ಯರ್ಲುಂಗ್ ತ್ಸಾಂಗ್ಪೋ ಎಂಬ ಹೆಸರಿದೆ) ನದಿಯ ಮೇಲೆ ಚೀನಾ ನಿರ್ಮಿಸುತ್ತಿರುವ ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆ ಭವಿಷ್ಯದಲ್ಲಿ ಭಾರತಕ್ಕೆ ಅಪಾಯದ ಮೂಲವಾಗಬಹುದೇ?. ಕುತೂಹಲಕಾರಿ ಸಂಗತಿಯೆಂದರೆ, ಈ ಆತಂಕವನ್ನು ವ್ಯಕ್ತಪಡಿಸುತ್ತಿರುವುದು ಕೇವಲ ಭಾರತವಲ್ಲ, ಚೀನಾದ ಕೆಲ ವಿಜ್ಞಾನಿಗಳೇ ಯೋಜನೆಯಿಂದ ಭವಿಷ್ಯದಲ್ಲಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ನೇಪಾಳದ ದುರಂತ ಕಲಿಸಿದ ಪಾಠ
ನೇಪಾಳದ ರಸುವಾ ಜಿಲ್ಲೆಯ ಭೀಕರ ಪ್ರವಾಹಕ್ಕೆ ಕಾರಣವಾದುದು ಭಾರೀ ಮಳೆಯಲ್ಲ. ಹಿಮಾಲಯದ ಸೂಕ್ಷ್ಮ ಪ್ರದೇಶದಲ್ಲಿ ಸಂಭವಿಸಿದ ಹಿಮಬಂಡೆಯ ಕುಸಿತವೇ ಈ ದುರಂತದ ಮೂಲ ಕಾರಣ. ಕುಸಿದ ಹಿಮಬಂಡೆ ಪರ್ವತ ಕಣಿವೆಯಲ್ಲಿ ನೈಸರ್ಗಿಕ ತಡೆಗೋಡೆಯಾಗಿ ಮಾರ್ಪಟ್ಟ ಪರಿಣಾಮ ಅಲ್ಲಿ ತಾತ್ಕಾಲಿಕ ಸರೋವರವೇ ನಿರ್ಮಾಣವಾಗಿತ್ತು.
ಈ ಸರೋವರದಲ್ಲಿ ಕೋಟ್ಯಂತರ ಘನ ಮೀಟರ್ ನೀರು ಸಂಗ್ರಹವಾಗಿರುವ ಸಾಧ್ಯಯಿದೆ ಎಂದು ಚೀನಾ ತಿಳಿಸಿದೆ. ಹಿಮಬಂಡೆ ಕರಗಿದ ಬಳಿಕ ನೀರು, ಕಲ್ಲು, ಮಣ್ಣು ಮತ್ತು ಇತರ ಅವಶೇಷಗಳು ಒಮ್ಮೆಲೇ ರಭಸವಾಗಿ ನದಿಗೆ ಉರುಳಿದವು. ಬಳಿಕ ನದಿ ಉಕ್ಕಿ ಉಂಟಾದ ಪ್ರವಾಹವು ಕೆಲವೇ ಗಂಟೆಗಳಲ್ಲಿ ಹಲವು ಹಳ್ಳಿಗಳು, ಸೇತುವೆಗಳು, ರಸ್ತೆಗಳನ್ನು ನಾಶಗೊಳಿಸಿತು. ಲಭ್ಯ ಮಾಹಿತಿಯ ಪ್ರಕಾರ, ಈ ದುರಂತದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 1300ಕ್ಕೂ ಹೆಚ್ಚು ಜನರ ಸುಳಿವು ಇನ್ನೂ ಲಭ್ಯವಾಗಿಲ್ಲ.
ಚೀನಾದ ಮೆಗಾ ಅಣೆಕಟ್ಟು: ಅಪಾಯದ ಮುನ್ಸೂಚನೆಯೇ?
ಜಲ ವಿದ್ಯುತ್ ಯೋಜನೆಗಾಗಿ ಚೀನಾವು ಬ್ರಹ್ಮಪುತ್ರ ನದಿಯ ಮೇಲೆ ವಿಶ್ವದ ಅತಿದೊಡ್ಡ ಅಣೆಕಟ್ಟೆಯನ್ನು ನಿರ್ಮಿಸುತ್ತಿದೆ. ಭೂಗರ್ಭಶಾಸ್ತ್ರಜ್ಞರ ಪ್ರಕಾರ, ಮೆಗಾ ಅಣೆಕಟ್ಟೆ ನಿರ್ಮಾಣವಾಗುತ್ತಿರುವ ಪ್ರದೇಶವು ಅತ್ಯಂತ ಭೂಕಂಪ-ಸೂಕ್ಷ್ಮ ವಲಯವಾಗಿದೆ.
ಇನ್ನೂ ಆತಂಕಕಾರಿ ವಿಷಯವೆಂದರೆ, ಅಣೆಕಟ್ಟು ನಿರ್ಮಾಣ ಸ್ಥಳದ ಮಣ್ಣು ಸಡಿಲವಾಗಿದ್ದು, ಭೂಕಂಪ ಅಥವಾ ಭೂಚಲನೆಯಿಂದ ದೊಡ್ಡ ಪ್ರಮಾಣದ ಅಸ್ಥಿರತೆ ಉಂಟಾಗಬಹುದು ಎಂದು ಚೀನಾದ ಕೆಲ ಭೂಗರ್ಭಶಾಸ್ತ್ರಜ್ಞರೇ ಎಚ್ಚರಿಕೆ ನೀಡಿದ್ದಾರೆ. ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳನ್ನು ಬಲಪಡಿಸುವಂತೆಯೂ ಅವರು ಶಿಫಾರಸು ಮಾಡಿದ್ದಾರೆ.
ಹಿಮಬಂಡೆ ಕುಸಿತವೇ ಇಷ್ಟೊಂದು ಅಪಾಯ ತಂದೊಡ್ಡಿರುವಾಗ, ಒಂದೊಮ್ಮೆ ಭೂಕಂಪದಿಂದಲೋ, ಭೂಮಿಯ ಒಳಗಿನ ಚಲನೆಯಲ್ಲಿನ ಸಣ್ಣ ವ್ಯತ್ಯಾಸದಿಂದಲೋ 42 ಬಿಲಿಯನ್ ಟನ್ ನೀರು ಸಂಗ್ರಹಣ ಸಾಮರ್ಥ್ಯ ಹೊಂದಿರುವ, ಭೂಕಂಪ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಮೆಗಾ ಅಣೆಕಟ್ಟು ಒಡೆದರೆ ಏನಾಗಬಹುದು?.... ಕೇವಲ ಚೀನಾ ಅಲ್ಲ, ಇದರಿಂದ ಭಾರತ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶವು ದೊಡ್ಡಮಟ್ಟದ ಅಪಾಯ ಎದುರಿಸಲಿದೆ.
ಅರುಣಾಚಲ ಪ್ರದೇಶಕ್ಕೆ ಮೊದಲ ಹೊಡೆತ
ಚೀನಾ ಆಕ್ರಮಿತ ಟಿಬೆಟ್‌ನಲ್ಲಿ ಯರ್ಲುಂಗ್ ತ್ಸಾಂಗ್ಪೋ ಎಂದು ಕರೆಯಲ್ಪಡುವ ಬ್ರಹ್ಮಪುತ್ರ ನದಿ, ಅರುಣಾಚಲ ಪ್ರದೇಶ ಪ್ರವೇಶಿಸಿದ ಬಳಿಕ ಸಿಯಾಂಗ್ ಎಂಬ ಹೆಸರನ್ನು ಪಡೆಯುತ್ತದೆ. ಹೀಗಾಗಿ ತ್ಸಾಂಗ್ಪೋ ನದಿಯಿಂದ ಭಾರಿ ಪ್ರಮಾಣದ ನೀರು ಬಿಡುಗಡೆಯಾದರೆ, ಅದರ ಮೊದಲ ಪರಿಣಾಮ ಅರುಣಾಚಲ ಪ್ರದೇಶದ ಮೇಲೆಯೇ ಬೀಳುತ್ತದೆ.
ಅಪಾರ ಪ್ರಮಾಣದ ನೀರು ಏಕಾಏಕಿ ತಗ್ಗು ಪ್ರದೇಶಕ್ಕೆ ನುಗ್ಗಿದರೆ, ಸಿಯಾಂಗ್ ನದಿಯ ದಡದಲ್ಲಿರುವ ಹಳ್ಳಿಗಳು, ಸೇತುವೆಗಳು, ರಸ್ತೆಗಳು ಹಾಗೂ ಇತರ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗುವ ಆತಂಕವಿದೆ. ಪರ್ವತ ಪ್ರದೇಶದ ನದಿಗಳ ಹರಿವಿನ ವೇಗ ಹೆಚ್ಚಿರುವುದರಿಂದ, ಇಂತಹ ಸಂದರ್ಭಗಳಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆಯೂ ಇದೆ.
ಬ್ರಹ್ಮಪುತ್ರ ನದಿಯು ಅರುಣಾಚಲ ಪ್ರದೇಶದಿಂದ ನಂತರ ಅಸ್ಸಾಂ ಪ್ರವೇಶಿಸುತ್ತದೆ. ಅಲ್ಲಿಯೂ ಅಪಾರ ಹಾನಿಗೆ ಕಾರಣವಾಗಬಹುದು. ಅಲ್ಲಿಂದ ಅದು ಬಾಂಗ್ಲಾದೇಶ ಪ್ರವೇಶಿಸಿ, ಆ ದೇಶದ ಜಲವ್ಯವಸ್ಥೆಯ ಪ್ರಮುಖ ಭಾಗವಾಗುತ್ತದೆ. ಹೀಗಾಗಿ ಮೇಲ್ಭಾಗದಲ್ಲಿ ಸಂಭವಿಸುವ ಯಾವುದೇ ಅಪಾಯವು, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಜನರ ಬದುಕಿನ ಮೇಲೂ ಪರಿಣಾಮ ಬೀರಬಹುದು.
ರಾಷ್ಟ್ರೀಯ ಭದ್ರತೆಯ ಪ್ರಶ್ನೆ
ಚೀನಾದ ಮೆಗಾ ಅಣೆಕಟ್ಟಿಗೆ ಸಂಬಂಧಿಸಿದಂತೆ ಭಾರತದ ಪ್ರಮುಖ ಆತಂಕವೆಂದರೆ ಪಾರದರ್ಶಕತೆಯ ಕೊರತೆ. ಅಣೆಕಟ್ಟಿನ ವಿನ್ಯಾಸ, ಭದ್ರತಾ ವ್ಯವಸ್ಥೆಗಳು, ಜಲಾಶಯದ ಸಾಮರ್ಥ್ಯ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತ ಸಂಪೂರ್ಣ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.
ಭಾರತಕ್ಕೆ ಎಚ್ಚರಿಕೆಯ ಗಂಟೆ
ನೇಪಾಳದ ಪ್ರವಾಹವನ್ನು ನೇರವಾಗಿ ಚೀನಾದ ಮೆಗಾ ಅಣೆಕಟ್ಟಿನಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಪಾಯಕ್ಕೆ ಹೋಲಿಸುವುದು ಅತಿಶಯೋಕ್ತಿ ಎನಿಸಬಹುದು. ಆದರೆ, ಹಿಮಾಲಯ ಪ್ರದೇಶ ಎಷ್ಟು ಸೂಕ್ಷ್ಮ, ಅಸ್ಥಿರ ಮತ್ತು ಅನಿರೀಕ್ಷಿತ ಎಂಬುದನ್ನು ಈ ದುರಂತ ಮತ್ತೊಮ್ಮೆ ಸಾಬೀತುಪಡಿಸಿದೆ.
ಭೂಕಂಪಗಳು, ಹಿಮನದಿಗಳ ಕರಗುವಿಕೆ, ಭೂಕುಸಿತಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲಿ ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆ ನಿರ್ಮಾಣವಾಗುತ್ತಿರುವುದನ್ನು ಭಾರತ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಹೀಗಾಗಿ ನೇಪಾಳದ ಪ್ರವಾಹವನ್ನು ಒಂದು ಪ್ರತ್ಯೇಕ ದುರಂತವಾಗಿ ನೋಡುವುದಕ್ಕಿಂತ, ಹಿಮಾಲಯದಲ್ಲಿ ಹೆಚ್ಚುತ್ತಿರುವ ಹೊಸ ಅಪಾಯಗಳ ಮುನ್ಸೂಚನೆ ಎಂದು ಪರಿಗಣಿಸುವ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ.