
ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಅಂಟಿಸಿ ನಕಲಿ ಔಷಧ ಮಾರಾಟ: ಎಸ್‌ಐಟಿ ತನಿಖೆ
ಬೆಂಗಳೂರು: ‘ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಿ.ಕೆ. ತಾಂಡ್ಯ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ನಕಲಿ ಔಷಧ ಪತ್ತೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ ಆಯುಕ್ತ ಶ್ರೀನಿವಾಸ್, ಬೆಂಗಳೂರು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ನೇತೃತ್ವದ ತಂಡವು ಜಂಟಿ ಕಾರ್ಯಾಚರಣೆ ಕೈಗೊಂಡು, ಬಿಡದಿಯ ಕುರುಬರಕೇರನ ಹಳ್ಳಿಯ (ನಂ.34) ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಸುಮಾರು ₹4.91 ಕೋಟಿ ಮೌಲ್ಯದ ನಕಲಿ ಔಷಧಗಳು, ಬಾಟಲಿಗಳು, ನಕಲಿ ಲೇಬಲ್‌ಗಳು, ಸ್ಟ್ಯಾಂಪ್‌ಗಳು, ಪ್ಯಾಕೇಜಿಂಗ್ ಸಾಮಗ್ರಿ ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳು ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ನಕಲಿ ಔಷಧ ತರಿಸಿಕೊಂಡು, ಅವುಗಳನ್ನು ಹೊಸ ಬಾಟಲಿಗೆ ತುಂಬಿ ಬಹುರಾಷ್ಟ್ರೀಯ ಕಂಪನಿ ಹಾಗೂ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಲೇಬಲ್ ಅಂಟಿಸಿ ಔಷಧ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಮಾರಾಟ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬಾಟಲಿಗಳಲ್ಲಿ ಹಾನಿಕಾರಕ ಪದಾರ್ಥಗಳನ್ನು ತುಂಬಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಬಳಸುವ ಔಷಧಿಯನ್ನು ನಕಲು ಮಾಡಲಾಗಿದೆ. ಅಲ್ಲದೇ ಬಾಟಲಿ ಮೇಲೆ ಅಂಟಿಸಿದ ಲೇಬಲ್‌ನಲ್ಲಿ ಸ್ಕ್ಯಾನಿಂಗ್ ಕೋಡ್ ಸಹ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಮಾಹಿತಿ ನೀಡಿದರು.
‘ಫಾರ್ಮ್ ಹೌಸ್ ಶಡಿಯಪ್ಪಗೆ ಸೇರಿದ್ದು, ಇದನ್ನು ಬೆಂಗಳೂರಿನ ಪ್ರಶಾಂತ್ ಗುತ್ತಿಗೆ ಪಡೆದಿದ್ದಾರೆ. ಪ್ರಶಾಂತ್ ಈಗ ದುಬೈನಲ್ಲಿದ್ದಾರೆ, ಪ್ರಶಾಂತ್ ಸಂಬಂಧಿ ತೇಜಸ್ ಇದನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
‘ಐದು ತಿಂಗಳಿಂದ ನಕಲಿ ಔಷಧ ಮಾರಾಟ ನಡೆಯುತ್ತಿದೆ ಎಂದು ಆರೋಪಿಗಳು ಹೇಳಿದ್ದಾರೆ. ನಿಖರವಾಗಿ ಎಷ್ಟು ದಿನಗಳಿಂದ ನಡೆಯುತ್ತಿದೆ? ಮೂಲ ಯಾವುದು? ಎಂಬುದನ್ನು ತಿಳಿಯಲು ಔಷಧ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ’ ಎಂದು ವಿವರಿಸಿದರು.
ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಈ ಜಾಲ ಚಾಚಿಕೊಂಡಿರುವ ಸಾಧ್ಯತೆ ಇದ್ದು, ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಹಾಗೂ ಇತರ ರಾಜ್ಯಗಳ ಸಹಕಾರದ ಅಗತ್ಯವಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರಕ್ಕೂ ಮಾಹಿತಿ ನೀಡಲಾಗುವುದು. ನಕಲಿ ಔಷಧ ತಯಾರಕರು, ಸಾಗಣೆದಾರರು, ಮಧ್ಯವರ್ತಿಗಳು, ಆಸ್ಪತ್ರೆಗಳು ಮತ್ತು ಔಷಧಾಲಯಗಳನ್ನು ಪತ್ತೆ ಹಚ್ಚಲು ಎಸ್‌ಐಟಿ ರಚನೆ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಜತೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಶಪಡಿಸಿಕೊಂಡಿರುವ ನಕಲಿ ಔಷಧಗಳನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ನಕಲಿ ಔಷಧ ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಅಥವಾ ವಿತರಿಸುವುದಕ್ಕೆ ಹತ್ತು ವರ್ಷದಿಂದ ಜೀವಾವಧಿ ವರೆಗಿನ ಶಿಕ್ಷೆ ವಿಧಿಸಬಹುದು ಎಂದರು.
ರಾಮನಗರ: ನಕಲಿ ಔಷಧಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾವರೆಕೆರೆ ಠಾಣೆ ಪೊಲೀಸರು ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ.
ರಾಮನಗರದ ಚಾಮುಂಡೇಶ್ವರಿ ಬಡಾವಣೆಯ ಪ್ರಭುದೇವ್ ಅಲಿಯಾಸ್ ಪ್ರಭು (27), ಹರಳೇಪೇಟೆಯ ತೇಜಸ್ ಆರ್.ಡಿ ಅಲಿಯಾಸ್ ತೇಜು (26), ಕೆಂಗೇರಿ ಉಪನಗರದ ದುಬಾಸಿಪಾಳ್ಯದ ನವೀನ್ ಕೆ.ಪಿ (41) ಹಾಗೂ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಸೂರು ಗ್ರಾಮದ ವೆಂಕಟೇಶ್ ಚೌಧರಿ (35) ಬಂಧಿತರು.
ಪ್ರಮುಖ ಆರೋಪಿ ಬೆಂಗಳೂರಿನ ನಾಗರಬಾವಿಯ ಪ್ರಶಾಂತ್ ಆರ್. ದುಬೈನಲ್ಲಿದ್ದು, ಆತನನ್ನು ವಶಕ್ಕೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಫಾರ್ಮ್ ಹೌಸ್ ಅನ್ನು ಬಾಡಿಗೆಗೆ ಪಡೆದು ಒಂದು ವರ್ಷದಿಂದ ನಕಲಿ ಔಷಧದ ದಂಧೆ ನಡೆಸುತ್ತಿದ್ದರು. ಹೂವಿನ ಅಲಂಕಾರದ ಕೆಲಸ ಮಾಡುತ್ತಿದ್ದ ಪ್ರಭು, ಔಷಧ ವಿತರಣೆ ಮಾಡುತ್ತಿದ್ದ ವೆಂಕಟೇಶ ಚೌಧರಿ ಹಾಗೂ ತೋಟದ ಕೆಲಸ ಮಾಡುತ್ತಿದ್ದ ನವೀನ್ ಈ ಜಾಲದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಂಧೆಯಲ್ಲಿ ಇನ್ನೂ ಯಾರುಯಾರು ಇದ್ದಾರೆ? ಜಾಲ ಎಲ್ಲೆಲ್ಲಿ ಸಕ್ರಿಯವಾಗಿದೆ ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಲಂ 276 (ಔಷಧಗಳ ಕಲಬೆರಕೆ), 51 (ಕೃತ್ಯಕ್ಕೆ ಕುಮ್ಮಕ್ಕು) ಹಾಗೂ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಶಪಡಿಸಿಕೊಂಡಿರುವ ವಸ್ತು; ಲೇಬಲ್ ಮೇಲಿರುವ ತಯಾರಕರು
1.CEFIAVIGENT 2.5 INJECTION; M/S EUCRATIA HEALTH CARE
1.HIZLAM INJECTABLES; M/S WELCURE REMEDIES
3.ZAVICEFTA INJECTION