
ರಾಯಬಾಗ: ಬಸ್‌ಗಳ ಬಾಗಿಲಲ್ಲಿ ಜೋತುಬಿದ್ದು ವಿದ್ಯಾರ್ಥಿಗಳ ಪ್ರಯಾಣ
ರಾಯಬಾಗ: ಇಲ್ಲಿಂದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುವ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಶಾಲಾ–ಕಾಲೇಜುಗಳು ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ.
ರಾಯಬಾಗ ಬಸ್ ನಿಲ್ದಾಣದಿಂದ ಸಂಕೇಶ್ವರ, ಮೊರಬ, ಗೋಕಾಕ ಹಾಗೂ ಚಿಂಚಲಿ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ವಿದ್ಯಾರ್ಥಿಗಳು ಬಸ್ ಬಾಗಿಲಿಗೆ ಜೋತುಬಿದ್ದು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದಾರೆ.
ಶಾಲೆ, ಕಾಲೇಜು ಆರಂಭವಾಗುವ ಮತ್ತು ಮುಗಿಯುವ ಹೊತ್ತಿಗೆ ಸಂಚರಿಸುವ ಬಸ್‌ಗಳಲ್ಲಿ ಕಾಲಿಡುವುದಕ್ಕೆ ಸಹ ಜಾಗ ಇರುವುದಿಲ್ಲ. ಬಸ್‌ಗಳಲ್ಲಿ ವಿದ್ಯಾರ್ಥಿಗಳು ಜೋತುಬಿದ್ದು ಸಂಚರಿಸುತ್ತಿದ್ದರೂ, ಸಾರಿಗೆ ಸಂಸ್ಥೆ ಅಧಿಕಾರಿಗಳು ಹೆಚ್ಚುವರಿ ಬಸ್ ಬಿಡುವ ಗೋಜಿಗೆ ಹೋಗಿಲ್ಲ.
‘ನಿತ್ಯ ಬಸ್‌ನಲ್ಲಿ ನಿಲ್ಲಲು ಜಾಗ ಇರುವುದಿಲ್ಲ. ಬಾಗಿಲಿನಲ್ಲೇ ನಿಂತು ಶಾಲೆಗೆ ಹೋಗಬೇಕಾಗುತ್ತದೆ. ಭಯದಲ್ಲೇ ಪ್ರಯಾಣಿಸುತ್ತಿದ್ದೇವೆ’ ಎಂದು ವಿದ್ಯಾರ್ಥಿ ಅಕ್ಷಯ ಪಾಟೀಲ ಸಮಸ್ಯೆ ಹೇಳಿಕೊಂಡರು.
‘ಬಸ್‌ಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವುದರಿಂದ ತೊಂದರೆಯಾಗುತ್ತಿದೆ. ಸುರಕ್ಷಿತವಾಗಿ ಪ್ರಯಾಣಿಸಲು ಆಗುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್ ಬಿಡಬೇಕು’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಮಾಯಕ್ಕಾ ಮಂಡಾಲೆ ಆಗ್ರಹಿಸಿದರು.
‘ರಾಯಬಾಗದಿಂದ ಹಾರೂಗೇರಿ, ಸಂಕೇಶ್ವರ, ಮೊರಬ, ಗೋಕಾಕ, ಚಿಕ್ಕೋಡಿ ಹಾಗೂ ಚಿಂಚಲಿ ಮಾರ್ಗಗಳಲ್ಲಿ ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲತೆಗೆ ಪೂರಕವಾಗಿ, ಹೆಚ್ಚುವರಿ ಬಸ್ ಬಿಡಬೇಕು. ವಿದ್ಯಾರ್ಥಿಗಳಿಗೆ ಸುರಕ್ಷಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ರಾಕೇಶ ಅವಳೆ ಎಚ್ಚರಿಕೆ ಕೊಟ್ಟಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-21-440026639