
ಕೊಪ್ಪಳ: ಬಾಯಿಮಾತು ನಂಬಿ ಹಣ ಕೊಟ್ಟವರಿಗೆ ಸಂಕಷ್ಟ
ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಅಕ್ರಮವಾಗಿ ವರ್ಗಾವಣೆಯಾಗಿರುವ ಕೋಟ್ಯಂತರ ರೂಪಾಯಿ ಹಣದ ಪ್ರಕರಣ ಬಹಿರಂಗ ವಾಗುತ್ತಿದ್ದಂತೆಯೇ ಆರೋಪಿ ಕೆಲಸಕ್ಕೆ ಸೇರಿದ ವರ್ಷದಿಂದಲೇ ಅಡಿಟ್ ಆರಂಭಿಸಲಾಗಿದೆ. ಆದರೆ ಸರೋಜಮ್ಮ ಬಡಾವಣೆಯಲ್ಲಿ ನಿವೇಶನ ಪಡೆದುಕೊಳ್ಳುವ ಆಸೆ ಹೊತ್ತಿರುವ ಜನರಲ್ಲಿಯೂ ಈ ಘಟನೆಯಿಂದ ಆತಂಕ ಶುರುವಾಗಿದೆ.
ಆದರೆ, ಪ್ರಾಧಿಕಾರದಿಂದ ಅಧಿಕೃತವಾಗಿ ನಿವೇಶನ ಮಂಜೂರಾತಿ ಪತ್ರ ಪಡೆದುಕೊಂಡು ಹಣ ಪಾವತಿಸಿದವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಕರಣದ ಆರೋಪಿಯಾಗಿರುವ ಲೆಕ್ಕಾಧಿಕಾರಿ ಮತ್ತು ಇಎಸ್‌ಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದ್ರಕುಮಾರ ಮಾತಿಗೆ ನಂಬಿಕೊಂಡು ಹಣ ಕೊಟ್ಟವರಿಗೆ ಹಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ರವೀಂದ್ರ ಬ್ಯಾಂಕ್ ಖಾತೆ ಕೊಟ್ಟು ಪಡೆದುಕೊಂಡ ಹಣವೆಲ್ಲವೂ ಖಾತೆಯಿಂದ ತೆಗೆದುಕೊಂಡಿದ್ದಾನೆ. ಅವರ ಸಂಬಂಧಿಕರ ಖಾತೆಗೂ ಹಣ ವರ್ಗಾವಣೆಯಾಗಿದೆ.
2010ರಿಂದ ಅಡಿಟ್: ರವೀಂದ್ರ ಪ್ರಾಧಿಕಾರಕ್ಕೆ ಕೆಲಸಕ್ಕೆ ಸೇರಿದ 2010ರಿಂದಲೇ ಅಡಿಟ್ ನಡೆಯುತ್ತಿದ್ದು ಹತ್ತು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ವಂಚನೆಯಾದ ಹಣವೆಷ್ಟು ಎನ್ನುವುದು ನಿಖರವಾಗಿ ಗೊತ್ತಾಗಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಪತ್ರದಿಂದ ಬಹಿರಂಗ: ಗಂಗಾವತಿಯ ಬನಶಂಕರಿ ಎಂಬುವರು ಹಣ ತುಂಬಿದರೂ ಪ್ರಾಧಿಕಾರದವರು ನಿವೇಶನ ನೀಡದ ಕಾರಣ ಈ ಕುರಿತು ವಿಚಾರಿಸಿದಾಗ ವಂಚನೆ ಬಹಿರಂಗವಾಗಿದೆ.
ಈ ಕುರಿತು ಪ್ರಾಧಿಕಾರಕ್ಕೆ ಲಿಖಿತ ದೂರು ಸಲ್ಲಿಸಿರುವ ಬನಶಂಕರಿ, ‘ರವೀಂದ್ರ ಎಂಬುವರು ಸರೋಜಮ್ಮ ಬಡಾವಣೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಇದನ್ನು ಯಾರಿಗೂ ಹೇಳದೆ ಆಯುಕ್ತರ ಹೆಸರಿನಲ್ಲಿ ಹಣ ತುಂಬುವಂತೆ ಹೇಳಿದರು. ಗಂಗಾವತಿಯ ಗ್ರಾಮೀಣ ಬ್ಯಾಂಕ್‌ನಿಂದ ₹7.80 ಲಕ್ಷ ಆರ್‌ಟಿಜಿಎಸ್ ಮೂಲಕ ಪಾವತಿಸಲಾಗಿದೆ. ನನ್ನ ಹಣ ವಾಪಸ್ ಕೊಡಿ, ಇಲ್ಲವಾದರೆ ನಿವೇಶನ ಕೊಡಿ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ‘ಪ್ರಕರಣ ನನ್ನ ಅವಧಿಯಲ್ಲಿ ನಡೆದಿಲ್ಲ. ಗಂಗಾವತಿಯ ಮಹಿಳೆ ದೂರುಕೊಟ್ಟ ಬಳಿಕ ಪ್ರಕರಣ ಬಹಿರಂಗವಾಗಿದೆ. ಸರೋಜಮ್ಮ ಬಡಾವಣೆಯ ಎಷ್ಟು ನಿವೇಶನಗಳು ಪ್ರಾಧಿಕಾರದಿಂದ ಗ್ರಾಹಕರಿಗೆ ನೋಂದಣಿಯಾಗಿ ಫಾರ್ಮ್ ನಂಬರ್–3 ಬಂದಿವೆ ಎನ್ನುವ ಮಾಹಿತಿ ನೀಡುವಂತೆ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಅಡಿಟ್ ಪೂರ್ಣಗೊಂಡ ಬಳಿಕ ಹಣದ ಬಗ್ಗೆಯೂ ನಿಖರತೆ ಸಿಗಲಿದೆ’ ಎಂದು ಹೇಳಿದರು.
ಭಿಕ್ಷೆ ಬೇಡಿ ಪ್ರತಿಭಟನೆ
ಕೊಪ್ಪಳ: ಪ್ರಾಧಿಕಾರದಲ್ಲಿ ವಂಚನೆ ಆರೋಪ ಕೇಳಿಬಂದಿದ್ದು ಇದರ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಗರದ ಬಸವೇಶ್ವರ ವೃತ್ತದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ತನಕ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯ ಮಾರ್ಗದುದ್ದಕ್ಕೂ ಭಿಕ್ಷೆ ಬೇಡುತ್ತ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳಿಗೆ, ಭ್ರಷ್ಟ ರಾಜಕಾರಣಿಗಳಿಗೆ ಹಣ ಸಂಗ್ರಹಿಸಲಾಯಿತು. ಸಂಘಟನೆಯ ಕಾರ್ಯಕರ್ತರು ಪ್ರಾಧಿಕಾರದ ಒಳನುಗ್ಗಲು ಯತ್ನಿಸಿದಾಗ ಪೊಲೀಸ ರೊಂದಿಗೆ ಮಾತಿನ ಚಕಮಕಿ ನಡೆಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು ಹಾಗೂ ಇತರರು ಮಾತನಾಡಿ, ‘ಕೊಪ್ಪಳ ಜಿಲ್ಲೆ ಭ್ರಷ್ಟ ಅಧಿಕಾರಿಗಳ ತಾಣವಾಗಿದೆ. ಅನೇಕರು ಬಹಳ ವರ್ಷದಿಂದ ಇಲ್ಲೇ ವಾಸವಾಗಿದ್ದು ರತ್ನಗಂಬಳಿ ಹಾಸಿ ಠಿಕಾಣಿ ಹೂಡಿದ್ದಾರೆ’ ಎಂದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಗೌರವಾಧ್ಯಕ್ಷ ಜಿ.ಎಸ್. ಗೋನಾಳ, ರಾಜಾ ಹುಸೇನ, ಶಿವಕುಮಾರ ಏಣಗಿ, ಹನುಮಗೌಡ, ನಾಗರಾಜ ನೀಲಗಿರಿ, ಮಾರುತಿ ಬನ್ನಿಕೊಪ್ಪ, ಪ್ರವೀಣಗೌಡ, ಆನಂದ ಮಡಿವಾಳರ, ಶಕೀಲ್ ಅಹ್ಮದ್, ಪತ್ರಯ್ಯ ಹೀರೆಮಠ, ಶಿವು ನೀಲಗಿರಿ, ಹುಚ್ಚಪ್ಪ ಹಳ್ಳಿಕೇರಿ, ಮಹಿಳಾ ಘಟಕದ ಅನ್ನಮ್ಮ, ಅಮರಮ್ಮ, ಪ್ರೇಮವ್ವ, ಲಲಿತಮ್ಮ, ರಾಜಮ್ಮ ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-35-843779583