ಕೂಡ್ಲಿಗಿ: ಜೋಳದ ಬೆಳೆಗೆ ಹುಳುಬಾಧೆ, ರೈತರಿಗೆ ಸಂಕಷ್ಟ

ಕೂಡ್ಲಿಗಿ: ಜೋಳದ ಬೆಳೆಗೆ ಹುಳುಬಾಧೆ, ರೈತರಿಗೆ ಸಂಕಷ್ಟ

ಕೂಡ್ಲಿಗಿ: ಜೋಳದ ಬೆಳೆಗೆ ಹುಳುಬಾಧೆ, ರೈತರಿಗೆ ಸಂಕಷ್ಟ

ಕೂಡ್ಲಿಗಿ: ತಾಲ್ಲೂಕಿನಲ್ಲಿ ಬಿತ್ತನೆ ಮಾಡಿರುವ ಹೈಬ್ರಿಡ್ ಜೋಳದ (ಊಟದ ಜೋಳ) ತೆನೆಗಳಲ್ಲಿನ ಕಾಳುಗಳನ್ನು ಹುಳು ತಿನ್ನುತ್ತಿದ್ದು, ಬರದಿಂದ ಕಂಗೆಟ್ಟಿರುವ ರೈತರನ್ನು ಮತ್ತೊಂದು ಸಂಕಷ್ಟಕ್ಕೆ ತಂದು ನಿಲ್ಲಿಸಿದೆ.

ಬರಗಾಲ, ಅಕಾಲಿಕ ಹವಾಮಾನ ವೈಪರೀತ್ಯಗಳ ನಡುವೆಯೂ ಸಾಲ ಮಾಡಿ ಬೀಜ, ಗೊಬ್ಬರ ತಂದು ರೈತರು ಬಿತ್ತನೆ ಮಾಡಿದ್ದಾರೆ. ಮಳೆ ಅಭಾವದಿಂದ ಈಗಾಗಲೇ ಖುಷ್ಕಿ ಭೂಮಿಯಲ್ಲಿನ ಬಹುತೇಕ ಜೋಳವೆಲ್ಲ ನಾಶವಾಗಿದೆ. ಆದರೆ ಕೆಲ ರೈತರು ಕೊಳವೆ ಬಾವಿಯಲ್ಲಿ ಸಿಗುವ ಅಲ್ಪ ಸ್ವಲ್ಪ ನೀರನ್ನು ಬಳಸಿಕೊಂಡು ರಕ್ಷಿಸಿಕೊಂಡಿರುವ ಜೋಳ ಉತ್ತಮ ಫಸಲು ಕೊಡುವ ಹಂತದಲ್ಲಿದ್ದು, ಕಾಳು ಕಟ್ಟುತ್ತಿವೆ. ಆಗಲೇ ತೆನೆಯಲ್ಲಿನ ಹಾಲುಗಾಳನ್ನು ಹುಳುಗಳು ತಿಂದು ಹಾಕುತ್ತಿವೆ.

ಪ್ರತಿ ತೆನೆಯಲ್ಲಿ ನಾಲ್ಕೈದು ಹುಳುಗಳು ಕಂಡು ಬರುತ್ತಿದ್ದು, ತೆನೆಯಒಳಗಡೆ ಸೇರಿಕೊಂಡಿರುವ ಹಸಿರು ಹಾಗೂ ಕಂದು ಮಿಶ್ರಿತ ಬಣ್ಣದ (ಹೆಲಿಕೋವರ್ಪಾ ಆರ್ಮಿಗೆರಾ) ಹುಳುಗಳು ಇಡೀ ತೆನೆಯನ್ನೇ ತಿಂದು ಹಾಕುತ್ತಿವೆ. ಇದರಿಂದ ಬಿಳಿ ಸೀಮೆ ಸುಣ್ಣದಂತಹ ಪುಡಿ ತೆನೆಯಲ್ಲಿ ಕಾಣಿಸುತ್ತಿದೆ. ಇದರಿಂದ ಕಾಳು ಜಳ್ಳಾಗುವ ಆತಂಕ ಎದುರಾಗಿದ್ದು, ಬಿತ್ತಿದ ಫಸಲು ಕೈಗೆ ಸೇರಿತು ಎನ್ನುವಾಗಲೇ ಈ ರೀತಿ ಹುಳುಗಳು ತಿಂದು ಹಾಕುತ್ತಿರುವುದರಿಂದ ರೈತರನ್ನು ಮತ್ತೊಷ್ಟು ಚಿಂತೆಗೀಡು ಮಾಡಿದೆ.

ಐದರಿಂದ ಆರು ಅಡಿ ಜೋಳದ ದಂಟುಗಳು ಬೆಳೆದಿವೆ. ಇದರಿಂದ ಔಷಧಿ ಸಿಂಪರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಡ್ರೋಣ್ ಮೂಲಕ ಸಿಂಪರಣೆ ಮಾಡಬೇಕು ಎಂದರೆ ದುಬಾರಿಯಾಗುತ್ತಿದೆ. ಈ ಹುಳುಗಳ ಹತೋಟಿಗೆ ಇದೀಗ ರೈತರು ಕೃಷಿ ಅಧಿಕಾರಿಗಳು ಅಥವಾ ಕೃಷಿ ವಿಜ್ಞಾನಿಗಳ ಮೊರೆ ಹೋಗಿದ್ದಾರೆ.

ಮಳೆ ನಂಬಿ ಬಿತ್ತಿದ್ದ ಬೇರೆ ಬೆಳೆ ಎಲ್ಲಾ ಒಣಗಿ ಹೋಗಿದೆ. ಆದರೆ ಕೊಳವೆ ಬಾವಿಯಲ್ಲಿನ ನೀರನ್ನು ಹಾಯಿಸಿ ಊಟದ ಜೋಳವನ್ನು ಬೆಳೆದಿದ್ದೆವು. ಆದರೆ ಈಗ ಕಾಳು ಕಟ್ಟಿರುವ ತೆನೆಯನ್ನು ಹುಳುಗಳು ತಿನ್ನುತ್ತಿವೆ. ಬೀಜ, ಗೊಬ್ಬರಕ್ಕಾಗಿ ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಎಂದು ತಿಳಿಯದಾಗಿದೆ ಎಂದು ರೈತರಾದ ಬಣಕಾರ ಶಿವಣ್ಣ ಹಾಗೂ ಜೋಗಯ್ಯನವರ ಅಂಜಿನಪ್ಪ ತಮ್ಮ ನೋವನ್ನು ತೋಡಿಕೊಂಡರು.

ತಕ್ಷಣಕ್ಕೆ ಪರಿಹಾರ ಇಲ್ಲ?

ಇದು ಯಾವ ರೀತಿಯ ಹುಳು, ನಿಯಂತ್ರಣ ಅಥವಾ ಹತೋಟಿ ಹೇಗೆ ಎಂದು ಕೃಷಿ ಅಧಿಕಾರಿಗಳನ್ನು ಕೇಳಿದರೆ ತಕ್ಷಣಕ್ಕೆ ಅವರಲ್ಲೂ ಉತ್ತರ ಇಲ್ಲ. ಕೃಷಿ ವಿಜ್ಞಾನಿಗಳನ್ನು ಕೇಳಿ ಸೂಕ್ತ ಪರಿಹಾರದ ದಾರಿ ತೋರಿಸುತ್ತೇವೆ ಎಂದು ಅವರು ಹೇಳುತ್ತಿದ್ದಾರೆ ಎಂದು ಹಲವು ಕೃಷಿಕರು ಹೇಳಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-25-196892327

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ