‘ಆಳಿಗೆ ಕೊಡಾಕೂ ನಮ್ಮ ಕಡೆ ರೊಕ್ಕ ಇಲ್ರಿ’: ರೈತರಿಗೆ ವರುಣ ತಂದಿಟ್ಟ ಸಂಕಷ್ಟ

‘ಆಳಿಗೆ ಕೊಡಾಕೂ ನಮ್ಮ ಕಡೆ ರೊಕ್ಕ ಇಲ್ರಿ’: ರೈತರಿಗೆ ವರುಣ ತಂದಿಟ್ಟ ಸಂಕಷ್ಟ

‘ಆಳಿಗೆ ಕೊಡಾಕೂ ನಮ್ಮ ಕಡೆ ರೊಕ್ಕ ಇಲ್ರಿ’: ರೈತರಿಗೆ ವರುಣ ತಂದಿಟ್ಟ ಸಂಕಷ್ಟ

ಚಿಪ್ಪಲಕಟ್ಟಿ(ರಾಮದುರ್ಗ): ‘ನಾಲ್ಕ ಎಕರೆದಾಗ ಹೆಸರು, ತೊಗರಿ ಬೆಳದೇವ್ರಿ. ಮಳಿ ಕೈಕೊಟ್ಟಿದ್ದಕ್ಕ ಎಲ್ಲಾ ಬೆಳಿ ಒಣಗಿಹೋಗ್ಯಾವು. ಹಾಕಿದ ಬಂಡವಾಳ ಕೈಗೆ ಬರೂದ ಬಿಡ್ರಿ, ಹೊಲದಾಗ ಕೆಲಸಾ ಮಾಡಿದ ಆಳಿಗೆ ಕೊಡಾಕೂ ನಮ್ಮ ಕಡೆ ರೊಕ್ಕ ಇಲ್ರಿ...’

ವರುಣನ ಮುನಿಸಿನಿಂದಾಗಿ ಒಣಗಿದ ಹೆಸರು, ತೊಗರಿ ಬೆಳೆ ಮಧ್ಯೆ ಸೋಮವಾರ ಕುಳಿತಿದ್ದ ರೈತ ಲಕ್ಷ್ಮಣ ವರಗನ್ನವರ ‘ಪ್ರಜಾವಾಣಿ’ ಮುಂದೆ ಬೇಸರ ಹೊರಹಾಕಿದ್ದು ಹೀಗೆ.

ನಾಲ್ಕು ಎಕರೆಯಲ್ಲಿ ಕೃಷಿ ಮಾಡಲು ಅವರು ₹25 ಸಾವಿರಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಆದರೆ, ಮಳೆ ಅಭಾವದಿಂದ ಬೆಳೆ ಕೈಕೊಟ್ಟಿದ್ದಕ್ಕೆ ಕಂಗಾಲಾಗಿದ್ದಾರೆ.

‘ಈ ಸಲ ನಮ್ಮ ಹೊಲದಾಗ ಒಂದ ಕ್ವಿಂಟಲ್‌ ಬೆಳಿ ಬಂದ್ರೂ ಹೆಚ್ಚರಿ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ನಾವು ಹೆಸರು ಬೆಳಿಗಿ ಮಾಡಿದ ಖರ್ಚ ನೋಡಿದ್ರ, ರೂಪಾಯಿದಾಗ ನಾ‌ಲ್ಕಾಣೆ ಬೆಳಿನೂ ಬಂದಿಲ್ರಿ’ ಎಂದು ರೈತ ಮಹಿಳೆ ಸವಿತಾ ಹೇಳುತ್ತಾರೆ.

ಇದು ಈ ರೈತರ ಸಂಕಷ್ಟವಷ್ಟೇ ಅಲ್ಲ; ರಾಮದುರ್ಗ ತಾಲ್ಲೂಕಿನ ಬಹುತೇಕ ರೈತರ ಸ್ಥಿತಿ.

ರಾಮದುರ್ಗ ತಾಲ್ಲೂಕಿನಲ್ಲಿ 59 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದರಲ್ಲೂ ಹೆಸರು ಬೆಳೆ ಹೆಚ್ಚಾಗಿ (24 ಸಾವಿರ) ಬೆಳೆಯಲಾಗಿದೆ. ನಂತರದ ಸ್ಥಾನಗಳಲ್ಲಿ ಗೋವಿನಜೋಳ, ಕಬ್ಬು, ಸೂರ್ಯಕಾಂತಿ, ತೊಗರಿ, ಉದ್ದು, ಹುರುಳಿ, ಶೇಂಗಾ, ಸಜ್ಜೆ ಬೆಳೆಗಳಿವೆ. 

ಈ ಸಲ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 14.9 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. 17.6 ಸೆಂ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ 18ರಷ್ಟು ಹೆಚ್ಚೇ ಮಳೆ ಸುರಿದಿದೆ. ಆದರೆ, ಆಯ್ದ ಕೆಲವೇ ದಿನಗಳಲ್ಲಿ ಧಾರಾಕಾರ ಮಳೆ ಸುರಿದಿದೆಯೇ ಹೊರತು, ನಿರಂತರವಾಗಿ ಮಳೆಯಾಗಿಲ್ಲ. ಅದರಲ್ಲೂ ಮುಖ್ಯವಾಗಿ ಬೆಳೆ ಬೆಳವಣಿಗೆ ಹಂತದಲ್ಲಿ ವರುಣ ಕೈಹಿಡಿದಿಲ್ಲ.

ಪ್ರತಿವರ್ಷ ಹೆಸರು ಬೆಳೆಯ ಒಂದು ಗಿಡದಲ್ಲಿ 30ರಿಂದ 40 ಕಾಯಿಗಳಿರುತ್ತಿದ್ದವು. ಈ ಬಾರಿ ಒಂದು ಗಿಡದಲ್ಲಿ ನಾಲ್ಕೈದು ಕಾಯಿಯಾಗಿವೆ. ಅದರಲ್ಲೂ ಎರಡ್ಮೂರು ಕಾಯಿಗಳಲ್ಲಿ ಮಾತ್ರ ಕಾಳು ಕಟ್ಟಿವೆ. ಗೋವಿನಜೋಳವೂ ನಿರೀಕ್ಷೆಯಂತೆ ಬೆಳೆದಿಲ್ಲ. ಈ ಬಾರಿ ಮೂರ್ನಾಲ್ಕು ಅಡಿ ಬೆಳೆ ಇರುವಾಗಲೇ ಹುಡಿ ಹಾಯುತ್ತಿದೆ. ನೀರಿನ ಕೊರತೆಯಿಂದ ಕಬ್ಬಿನ ಬೆಳೆಯೂ ಒಣಗುತ್ತಿದೆ. ಇನ್ನೂಳಿದ ಬೆಳೆಗಳ ಇಳುವರಿ ಕುಂಠಿತವಾಗಿದೆ. 

‘ಶೇ 60ರಷ್ಟು ಇಳುವರಿ ಕುಂಠಿತ’

‘ರಾಮದುರ್ಗ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗಿಲ್ಲ. ಇದರಿಂದಾಗಿ ತೇವಾಂಶ ಕೊರತೆ ಹೆಚ್ಚಾಗಿ ವಿವಿಧ ಬೆಳೆಗಳ ಶೇ 60ರಷ್ಟು ಇಳುವರಿ ಕುಂಠಿತವಾಗಿದೆ. ಅದರಲ್ಲೂ ಹೆಸರು ಬೆಳೆಯ ಗಿಡಗಳಲ್ಲಿ ನಾಲ್ಕೈದು ಕಾಯಿಗಳಷ್ಟೇ ಬೆಳೆದಿವೆ. ಅಷ್ಟಿಷ್ಟು ಬೆಳೆದಿರುವ ಬೆಳೆಗಳನ್ನೇ ಉಳಿಸಿಕೊಳ್ಳುವ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ’ ಎಂದು ಕೃಷಿ ಇಲಾಖೆ ರಾಮದುರ್ಗ ಸಹಾಯಕ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ‘ಪ್ರಜಾವಾಣಿ’ಗೆ ತಿಳಿಸಿದರು. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ