
ಬತ್ತಿದ ಇಳೆಯ ಬೆಳೆಗೆ ಜೀವಕಳೆ ತಂದ ಮಳೆ: ಸೇಡಂನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ
ಸೇಡಂ: ತಾಲ್ಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆ ಬಿತ್ತಿದ ಬೆಳೆಗಳಿಗೆ ಜೀವಕಳೆ ತಂದಿದೆ.
ಮುಂಗಾರು ಮಳೆ ಸಕಾಲಕ್ಕೆ ಬಾರದಿರುವುದರಿಂದ ಬಾಡುವ ಹಂತದಲ್ಲಿದ್ದ ತೊಗರಿ, ಹೆಸರು ಮತ್ತು ಉದ್ದಿನ ಬೆಳೆಗಳಿಗೆ ಆಸರೆಯಾದಂತಾಗಿದ್ದು, ಜೀವಕಳೆ ಪಡೆದುಕೊಂಡಿವೆ. ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮೇ ಕೊನೆ ವಾರ ಬಿತ್ತಿದ ಬೆಳೆಗಳು ಚೆನ್ನಾಗಿ ಬೆಳೆದಿದ್ದವು. ತದನಂತರ ಮಳೆ ಬಾರದ ಕಾರಣ ಬಾಡುವ ಹಂತದಲ್ಲಿದ್ದವು.
ಜುಲೈ 29ರಂದು ಸೇಡಂ 40 ಮಿ.ಮೀ, ಆಡಕಿ 24.3 ಮಿ.ಮೀ, ಮುಧೋಳ 42 ಮಿ.ಮೀ, ಕೋಡ್ಲಾ 36.8 ಮಿ.ಮೀ ಮತ್ತು ಕೋಲ್ಕುಂದಾ 30.4 ಮಿ.ಮೀ ಮಳೆಯಾಗಿತ್ತು. ನಂತರ ಆಗಸ್ಟ್ 2ರಂದು ಸೇಡಂ 38.1 ಮಿ.ಮೀ, ಆಡಕಿ 13.3 ಮಿ.ಮೀ, ಮುಧೋಳ 38.01 ಮಿ.ಮೀ, ಕೋಡ್ಲಾ 61.1 ಮಿ.ಮೀ ಹಾಗೂ ಕೋಲ್ಕುಂದಾ 36.3 ಮಿ.ಮೀ ಮಳೆಯಾಗಿದೆ. ಆಗಸ್ಟ್ 3ರಂದು ಸೇಡಂ 7 ಮಿ.ಮೀ, ಆಡಕಿ 12.4 ಮಿ.ಮೀ, ಮುಧೋಳ 48.2 ಮಿ.ಮೀ, ಕೋಡ್ಲಾ 7 ಮಿ.ಮೀ ಹಾಗೂ ಕೋಲ್ಕುಂದಾ 08.06 ಮಿ.ಮೀ ಮಳೆಯಾಗಿದೆ. ಹೀಗಾಗಿ ತಾಲ್ಲೂಕಿನಾದ್ಯಂತ ಬಹುತೇಕ ಎಲ್ಲಾ ಕಡೆಗಳಲ್ಲಿ ಮಳೆಯಾಗಿದೆ ಎನ್ನುತ್ತವೆ ಹವಾಮಾನ ಇಲಾಖೆಯ ಮೂಲಗಳು.
‘ಮುಂಗಾರಿನ ಹೆಸರು ಮತ್ತು ಉದ್ದು ಬಿತ್ತನೆಯ ದಿನಗಳು ಈಗಾಗಲೇ ಮುಗಿದಿವೆ. ಇನ್ನು ತೊಗರಿ ಮಾತ್ರ ಬಿತ್ತಬಹುದು. ಕೆಲವೆಡೆ ರೈತರು ಈಗ ತೊಗರಿ ಬಿತ್ತನೆಯಲ್ಲಿ ತೊಡಗುತ್ತಿರುವುದು ಕಂಡು ಬರುತ್ತಿದೆ. ಬಿತ್ತಿದ ನಂತರ ಚೆನ್ನಾಗಿ ಮಳೆ ಬಂದರೆ ತೊಗರಿ ಬೆಳೆ ಚೆನ್ನಾಗಿ ಇಳುವರಿ ಕಟ್ಟಲಿದೆ. ಇಲ್ಲದಿದ್ದರೆ ತೊಗರಿ ಬೆಳೆ ಉತ್ತಮ ಇಳುವರಿ ಬರುವುದು ಕಷ್ಟ. ಈ ಹಿಂದಿನ ಪುಷ್ಯ ಮಳೆ ಕಪ್ಪೆ ಮೇಲಿತ್ತು. ಅದು ಚೆನ್ನಾಗಿ ಬಂದಿದ್ದರೆ ಮುಂಗಾರು ಬೆಳೆಗಳು ಉತ್ತಮವಾಗಿ ಬೆಳೆದು ರಾರಾಜಿಸುತ್ತಿದ್ದವು. ಆದರೆ ಈಗ ಆಶ್ಲೇಷಾ ಮಳೆ ಆ.3ರಿಂದ ಪ್ರಾರಂಭಗೊಂಡಿದ್ದು ಆನೆಯ ಮೇಲಿದೆ. ಆನೆಯ ಮೇಲಿನ ಮಳೆ ಚೆನ್ನಾಗಿ ಸುರಿಯಬಹುದು’ ಎನ್ನುತ್ತಾರೆ ರೈತ ಶರಣಪ್ಪ ಕೋಡ್ಲಾ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-31-562298599