
ಚಿತ್ರದುರ್ಗ: ಕ್ರೀಡಾ ಇಲಾಖೆಯ ಹೊರಗುತ್ತಿಗೆ ನೌಕರರಿಗೆ 7 ತಿಂಗಳಿಂದ ವೇತನವಿಲ್ಲ
ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ 7 ತಿಂಗಳಿಂದಲೂ ವೇತನ ಬಾರದ ಕಾರಣ ಅವರು ಸಂಕಷ್ಟದಲ್ಲೇ ದಿನ ದೂಡುವಂತಾಗಿದೆ.
ಜಿಲ್ಲಾ ಕ್ರೀಡಾಂಗಣ, ತಾಲ್ಲೂಕು ಕ್ರೀಡಾಂಗಣ, ಈಜುಕೊಳ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡಲು 30ಕ್ಕೂ ಹೆಚ್ಚು ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಚೇರಿ ಸಿಬ್ಬಂದಿ, ಕ್ರೀಡಾಂಗಣ ನಿರ್ವಹಣೆ, ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ವಿವಿಧ ಕ್ರೀಡೆಗಳ ಕೋಚ್‌ಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಆರ್‌ಕೆ ಏಜೆನ್ಸಿ ಮೂಲಕ ಇವರ ನೇಮಕಾತಿ ಮಾಡಿಕೊಂಡು ವೇತನ ನಿಗದಿ ಮಾಡಲಾಗಿದೆ.
ಜಿಲ್ಲಾ ಕೇಂದ್ರ ಹಾಗೂ ಹೊಸದುರ್ಗದಲ್ಲಿರುವ ಈಜುಕೊಳದ ಕೋಚ್‌ಗಳು ಹಿರಿಯೂರು, ಚಳ್ಳಕೆರೆ ತಾಲ್ಲೂಕು ಕ್ರೀಡಾಂಗಣಗಳಲ್ಲೂ ಕೆಲಸ ಮಾಡುತ್ತಾರೆ. ಜೊತೆಗೆ ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಸಿಬ್ಬಂದಿಯೂ ಸೇರಿದ್ದಾರೆ. ಇವರೆಲ್ಲರೂ 7 ತಿಂಗಳುಗಳಿಂದಲೂ ವೇತನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಧಿಕಾರಿಗಳು ‘ಮುಂದಿನ ತಿಂಗಳು ನೋಡೋಣ’ ಎನ್ನುವ ಸಬೂಬು ಹೇಳುತ್ತಾ ದಿನ ದೂಡುತ್ತಿದ್ದು, ನೌಕರರು ನಿತ್ಯದ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ.
ಬಹುತೇಕ ಇವರೆಲ್ಲರೂ ಜೀವನ ನಿರ್ವಹಣೆಗೆ ವೇತನವನ್ನೇ ಅವಲಂಬಿಸಿದ್ದಾರೆ. ಮನೆ ಬಾಡಿಗೆ ಕಟ್ಟಲು, ಮನೆಗೆ ಬೇಕಿರುವ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು, ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಂಬಳವೇ ಆಧಾರವಾಗಿದೆ. ಆದರೆ, ಈಚೆಗೆ ವೇತನ ಮುಂದಕ್ಕೆ ಹೋಗುತ್ತಲೇ ಇದ್ದು, ಸಾಲದಲ್ಲಿ ಜೀವಿಸುವಂತಾಗಿದೆ. ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಇವರು ಒತ್ತಡದಿಂದ ಒದ್ದಾಡುತ್ತಿದ್ದಾರೆ.
‘ಕಚೇರಿಗೆ ಹೋಗಿ ವೇತನ ಕೇಳಿದರೆ ಮೇಲಾಧಿಕಾರಿಗಳು ಹಾರಿಕೆಯ ಉತ್ತರ ಕೊಡುತ್ತಾರೆ. ಧ್ವನಿ ಹೆಚ್ಚಿಸಿ ಕೇಳಿದರೆ ಕೆಲಸ ಬಿಟ್ಟು ಹೋಗಿ ಎಂದು ಬೆದರಿಕೆ ಹಾಕುತ್ತಾರೆ. ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ. ಇಂದಲ್ಲ ನಾಳೆ ಸಂಬಳ ಬಂದೇ ಬರುತ್ತದೆ ಎಂದು ಕಾಯುತ್ತಿದ್ದೇವೆ’ ಎಂದು ಕ್ರೀಡಾಂಗಣದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ನೋವಿನಿಂದ ನುಡಿದರು.
ಜಿಲ್ಲಾ ಕ್ರೀಡಾಂಗಣ ಸಮಿತಿಯಿಂದ ನೀಡುವ ವೇತನವನ್ನು ಇಲಾಖೆಯಿಂದ ನೇರವಾಗಿ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ತೊಂದರೆಯಾಗಿಲ್ಲ. ಇಲ್ಲಿ ಬೆರಳೆಣಿಕೆಷ್ವು ನೌಕರರು ಮಾತ್ರ ಇದ್ದಾರೆ. ಆದರೆ, ಹೊರೆಗುತ್ತಿಗೆ ಆಧಾರದಲ್ಲಿ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ಇವರಿಗೆ ವೇತನ ನೀಡುವುದು ತಮಗೆ ಸಂಬಂಧವೇ ಇಲ್ಲ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿರುವುದು ನೌಕರರಲ್ಲಿ ಬೇಸರ ಮೂಡಿಸಿದೆ.
ಇಲಾಖೆಯು ನಿಗದಿತವಾಗಿ ಏಜೆನ್ಸಿಗೆ ಹಣ ಬಿಡುಗಡೆ ಮಾಡದ ಕಾರಣ ನೌಕರರಿಗೆ ವೇತನ ನೀಡಲು ಸಾಧ್ಯವಾಗಿಲ್ಲ. ಅಧಿಕಾರಿಗಳು ‘ಸರ್ಕಾರದಿಂದ ಅನುದಾನ ಬಂದಿಲ್ಲ’ ಎಂಬ ಸಿದ್ಧ ಉತ್ತರ ನೀಡುತ್ತಿರುವುದು ನೌಕರರಲ್ಲಿ ನೋವುಂಟು ಮಾಡಿದೆ.
ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ. ವಾಲಿಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬ್ಯಾಸ್ಕೆಟ್ ಬಾಲ್, ಜಿಮ್ ಮುಂತಾದ ಸೌಲಭ್ಯಗಳು ಕ್ರೀಡಾಂಗಣದಲ್ಲಿದ್ದು, ಎಲ್ಲವನ್ನೂ ನಿರ್ವಹಣೆ ಮಾಡುವವರು ಹೊರಗುತ್ತಿಗೆ ನೌಕರರೇ ಆಗಿದ್ದಾರೆ. ಅವರ ಜೀವನ ನಿರ್ವಹಣೆಗೆ ವೇತನವನ್ನೇ ನೀಡದ ಕಾರಣ ನೌಕರರು ಕೆಲಸ ಮಾಡುವ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕ್ರೀಡಾಪ್ರೇಮಿಗಳು ಹೇಳುತ್ತಾರೆ.
ಕಡಿಮೆ ಖರ್ಚು ಮಾಡಿ, ವೇತನ ಕೊಡಿ...
ಇಲಾಖೆಯು ಪ್ರತಿ ವರ್ಷ ಜಿಲ್ಲೆಗಳಿಗೆ ₹ 70 ಲಕ್ಷ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೆ, ಈಚೆಗೆ ಈ ಅನುದಾನವನ್ನು ₹ 30 ಲಕ್ಷಕ್ಕೆ ಇಳಿಸಲಾಗಿದ್ದು, ಗುತ್ತಿಗೆ ನೌಕರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಧಿಕಾರಿಗಳು ಅನಾವಶ್ಯಕವಾಗಿ ಬೇರೆ–ಬೇರೆ ಉದ್ದೇಶಗಳಿಗೆ ನೀರಿನಂತೆ ಹಣ ಖರ್ಚು ಮಾಡುತ್ತಾರೆ. ವೇತನಕ್ಕಾಗಿ ಏಜೆನ್ಸಿಗೆ ಹಣ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ನೌಕರರು ಆರೋಪಿಸುತ್ತಾರೆ.
‘ನೌಕರರಿಗೆ ವೇತನ ಬಿಡುಗಡೆ ಮಾಡದ ಕಾರಣ ಅವರು ಸಂಕಷ್ಟದಲ್ಲಿದ್ದಾರೆ. ನಮ್ಮ ಬಳಿ ನೋವಿನಿಂದ ಈ ವಿಷಯ ಹೇಳಿಕೊಳ್ಳುತ್ತಾರೆ. ಕ್ರೀಡಾ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ವೇತನ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಕ್ರೀಡಾಪ್ರೇಮಿಯೊಬ್ಬರು ಒತ್ತಾಯಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-44-827798712