ಬಾರಕೂರಿನ ಮೂಲ ಮಠದಲ್ಲಿ ಕಳೆಗಟ್ಟಿದ ಚಾತುರ್ಮಾಸ್ಯದ ಧಾರ್ಮಿಕ ವಾತಾವರಣ

ಬಾರಕೂರಿನ ಮೂಲ ಮಠದಲ್ಲಿ ಕಳೆಗಟ್ಟಿದ ಚಾತುರ್ಮಾಸ್ಯದ ಧಾರ್ಮಿಕ ವಾತಾವರಣ

ಬಾರಕೂರಿನ ಮೂಲ ಮಠದಲ್ಲಿ ಕಳೆಗಟ್ಟಿದ ಚಾತುರ್ಮಾಸ್ಯದ ಧಾರ್ಮಿಕ ವಾತಾವರಣ

ಬ್ರಹ್ಮಾವರ: ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದರು ಈ ಬಾರಿ ಬಾರಕೂರಿನ ಮೂಲ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿದ್ದು, ಮೂಲ ಮಠದಲ್ಲಿ ಧಾರ್ಮಿಕ ವಾತಾವರಣ ಕಳೆಗಟ್ಟಿದೆ.

ಮಠದ ದಿವ್ಯ ಪರಂಪರೆ ಹಾಗೂ ಬ್ರಹ್ಮಸೂತ್ರ ಭಾಷ್ಯ ರಚನೆಯ ಮಹತ್ವವನ್ನು ಶ್ರೀಗಳು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಮಠದ ಹಿನ್ನೆಲೆಯನ್ನು ಸ್ಮರಿಸಿದ ಶ್ರೀಗಳು, ‘ಈ ಮಠದ ಪರಂಪರೆಯು ಸೃಷ್ಟಿಕರ್ತ ಶ್ರೀಮನ್ನಾರಾಯಣನಿಂದಲೇ ಪ್ರವರ್ತಿತವಾದ ಅನಾದಿ ಕಾಲದ ಸದ್ವೈಷ್ಣವ ಧಾರೆ. ಸನಕಾದಿಗಳು, ದೂರ್ವಾಸರು ಹಾಗೂ ಶ್ರೀಪ್ರಾಜ್ಞತೀರ್ಥರಂತಹ ಜ್ಞಾನಿ ಶ್ರೇಷ್ಠರು ಕಾಲಕಾಲಕ್ಕೆ ಸಜ್ಜನರನ್ನು ಉದ್ಧರಿಸುತ್ತಾ ಬಂದರು. ಈ ಪವಿತ್ರ ಹಾದಿಯಲ್ಲಿ ಬಂದ ಅಚ್ಯುತಪ್ರಜ್ಞರ ಶಿಷ್ಯರಾಗಿ ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು ಅವತರಿಸಿದರು. ಮಧ್ವರ ನೆಚ್ಚಿನ ಶಿಷ್ಯರಾಗಿ ಆ ಪರಂಪರೆಯನ್ನು ಮುನ್ನಡೆಸಿದವರು ಶ್ರೀ ಸತ್ಯತೀರ್ಥರು’ ಎಂದು ಹೇಳಿದರು.

ಬದರೀ ಕ್ಷೇತ್ರದಲ್ಲಿ ನಡೆದ ಐತಿಹಾಸಿಕ ಘಟನೆಯನ್ನು ಮೆಲುಕು ಹಾಕಿದ ಶ್ರೀಗಳು, ‘ಶ್ರೀಮದಾಚಾರ್ಯರು ಹಿಮಾಲಯದ ಅನಂತಮಠದಲ್ಲಿ ಕಠಿಣ ಕಾಷ್ಠ ಮೌನವ್ರತ ಹಾಗೂ ಪೂರ್ಣ ಉಪವಾಸದೊಂದಿಗೆ ಶ್ರೀಹರಿಯನ್ನು ಧ್ಯಾನಿಸಿದರು. ಶ್ರೀಹರಿ ಮತ್ತು ವೇದವ್ಯಾಸರ ದಿವ್ಯ ದರ್ಶನ ಪಡೆದು, ಅವರ ಆಜ್ಞೆಯಂತೆ ಬ್ರಹ್ಮಸೂತ್ರ ಭಾಷ್ಯವನ್ನು ರಚಿಸಿದರು. ಆ ದಿವ್ಯ ಭಾಷ್ಯವನ್ನು ಪ್ರಥಮವಾಗಿ ಗ್ರಂಥರೂಪದಲ್ಲಿ ಲೇಖನ ಮಾಡಿದ ಶ್ರೇಯಸ್ಸು ಶ್ರೀ ಸತ್ಯತೀರ್ಥರಿಗೆ ಸಲ್ಲುತ್ತದೆ’ ಎಂದರು.

‘ಸತ್ಯತೀರ್ಥರ ಲೇಖನ ಮಹತ್ವಾಕಾಂಕ್ಷೆಯನ್ನು ಸಾರುವ ದಿವ್ಯ ಶ್ಲೋಕದ ಸಾರದ ಪ್ರಕಾರ ಗಂಗಾ ತೀರದಲ್ಲಿ ಶ್ರೀಹರಿಯ ಭವ್ಯ ಮಂದಿರವನ್ನು ನಿರ್ಮಿಸಿದರೆ ಲಭಿಸುವಷ್ಟೇ ಮಹಾಪುಣ್ಯವು, ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಒಂದೇ ಒಂದು ಅಕ್ಷರವನ್ನು ಬರೆಯುವವನಿಗೆ ಸಿಗುತ್ತದೆ. ಅಂತಹ ಮಹಾನ್ ಗ್ರಂಥವನ್ನು ಸಮಗ್ರವಾಗಿ ಬರೆದವರು ಸತ್ಯತೀರ್ಥರು’ ಎಂದು ಅಭಿಪ್ರಾಯಪಟ್ಟರು.

‘ಸತ್ಯತೀರ್ಥರ ನಂತರ ಮಠದ ಪರಂಪರೆಯನ್ನು ಸತ್ಯವ್ರತತೀರ್ಥರು, ವಿಶ್ವಾಧೀಶತೀರ್ಥರು, ವಿದ್ಯಾಧೀಶತೀರ್ಥರು ಹಾಗೂ ವಿಶ್ವಮೂರ್ತಿತೀರ್ಥರು ಮುನ್ನಡೆಸಿದರು. ತದನಂತರ ಈ ಮಹಾನ್ ಪರಂಪರೆಯು ‘ಶ್ರೀ ಭಂಡಾರಕೇರಿ ಮಠ’ ಹಾಗೂ ‘ಶ್ರೀ ಭೀಮನಕಟ್ಟೆ ಮಠ’ ಎಂದು ಎರಡು ಪ್ರಸಿದ್ಧ ಕವಲುಗಳಾಗಿ ಬೆಳೆಯಿತು’ ಎಂದರು.

‘ಪೂರ್ವದಲ್ಲಿ ಕ್ಷೇತ್ರದೇವತೆಯಾದ ಗೋಪಿನಾಥ ದೇವರ ವಿಗ್ರಹ ಇರಲಿಲ್ಲ. ಒಮ್ಮೆ ಗದಾಧರ ತೀರ್ಥರಿಗೆ ಮೂಲ ಮಠದದಲ್ಲಿ ಭೂಗತವಾಗಿರುವ ಗೋಪಿನಾಥ ದೇವರ ವಿಗ್ರಹವನ್ನು ಪುನಃಪ್ರತಿಷ್ಠೆ ಮಾಡಿಸಬೇಕೆಂಬ ಸೂಚನೆ ಬಂತು. ಈ ಕಾರಣಕ್ಕೆ ಗದಾಧರ ತೀರ್ಥರು ಕ್ಷೇತ್ರದೇವತೆಯಾದ ಗೋಪಿನಾಥ ದೇವರನ್ನು ಪ್ರತಿಷ್ಠಾಪಿಸಿದರು. ಈ ಹಿಂದೆ ಗೋಪಿನಾಥ ದೇವರ ಭಾರ್ಯಾ ಪ್ರತಿಮೆ ಇರಲಿಲ್ಲ. ರುಕ್ಮಿಣೀ ಸತ್ಯಭಾಮಾ ಸಹಿತ ಗೋಪಿನಾಥ ದೇವರ ವಿಗ್ರಹವನ್ನು ಅದಮಾರು ಮಠದ ವೇದನಿಧಿ ತೀರ್ಥರು ಸೇವೆಯನ್ನು ನೀಡಿದರು. ಗದಾಧರ ತೀರ್ಥರಿಗೂ ಮತ್ತು ವೇದನಿಧಿ ತೀರ್ಥರಿಗೂ ವಿದ್ಯಾ ಸಂಬಂಧವಿತ್ತು ಈ ಕಾರಣಕ್ಕೆ ಗದಾಧರ ತೀರ್ಥರ ಗೌರವಾರ್ಥವಾಗಿ ವೇದನಿಧಿ ತೀರ್ಥರು ಈ ವಿಗ್ರಹವನ್ನು ಸಮರ್ಪಿಸಿದ್ದಾರೆ’ ಎಂದರು.

ರಾಜವಂದ್ಯ ತೀರ್ಥ ಬಗ್ಗೆ ಮಾತನಾಡಿದ ಶ್ರೀಗಳು, ‘ಕಾಗಿನೆಲೆ ಆದಿಕೇಶವ ಧ್ವಜ ಸ್ಥಂಭದ ಪಕ್ಕದಲ್ಲೇ ಅವರ ವೃಂದಾವನವಿದೆ. ಮಹಾ ತಪಸ್ವಿಗಳು ಅವರು. ದೇವಸ್ಥಾನದ ಧ್ವಜಸ್ಥಂಭದ ಪಕ್ಕದಲ್ಲಿ ವೃಂದಾವನವಿರುವುದು ಸೂಕ್ತವಲ್ಲ ಎಂದು ವಿವಾದ ಹುಟ್ಟಿ ವೃಂದಾವನವನ್ನು ಸ್ಥಳಾಂತರ ಮಾಡಬೇಕು ಎಂದು ಹೊರಟಾಗ. ವೃಂದಾವನ ಸೇರಿ 6 ತಿಂಗಳಾದರೂ ವೃಂದಾವನದಲ್ಲಿದ್ದ ಅವರ ದೇಹ ಸ್ವಲ್ಪವೂ ಹಾನಿಯಾಗಿರಲಿಲ್ಲ. ಅವರ ತಪಃಶಕ್ತಿಯನ್ನು ಕಂಡು ಅದೇ ಸ್ಥಳದಲ್ಲೇ ವೃಂದಾವನವನ್ನು ಉಳಿಸಿಕೊಳ್ಳಲಾಯಿತು’ ಎಂದು ವಿವರಿಸಿದರು.

‘ವಾದಿರಾಜ ಗುರು ಸಾರ್ವಭೌಮರ ಸಹೋದರರಾದ ಸುರೋತ್ತಮತೀರ್ಥರು ಭಂಡಾರಕೇರಿ ಮಠದ ಪೀಠವನ್ನು ಅಲಂಕರಿಸಿ, ವಾದಿರಾಜರ ‘ಯುಕ್ತಿಮಲ್ಲಿಕಾ’ ಮುಂತಾದ ಪ್ರಸಿದ್ಧ ಗ್ರಂಥಗಳಿಗೆ ವ್ಯಾಖ್ಯಾನ ಬರೆದರು. ಅವರ ಶಿಷ್ಯರಾದ ವಿಶ್ವೋತ್ತಮತೀರ್ಥರು ಜಯತೀರ್ಥರ ‘ಶ್ರೀಮನ್ನ್ಯಾಯಸುಧಾ’ ಗ್ರಂಥಕ್ಕೆ ಅಪೂರ್ವ ಟಿಪ್ಪಣಿ ರಚಿಸಿದರು. ಈ ಪರಂಪರೆಯಲ್ಲಿ ಬಂದ ಶತಮಾನದ ಶಕಪುರುಷ ವಿದ್ಯಾಮಾನ್ಯತೀರ್ಥ ಶ್ರೀಪಾದರು ಮಠದ ಕೀರ್ತಿಯನ್ನು ವಿಶ್ವವ್ಯಾಪಿಗೊಳಿಸಿದರು’ ಎಂದು ಶ್ರೀಗಳು ಸ್ಮರಿಸಿದರು.

ಕೀರ್ತಿಶೇಷ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಭಂಡಾರಕೇರಿ ಮಠದಲ್ಲೇ ಎಂಟು ವರ್ಷಗಳ ಕಾಲ ವೇದಾಧ್ಯಯನ ನಡೆಸಿ ಸರ್ವಜ್ಞ ಪೀಠಾರೋಹಣ ಮಾಡಿದ್ದರು.

ಮೂಲ ಮಠದಲ್ಲಿ ಚಾತುರ್ಮಾಸ್ಯ

ಚಾತುರ್ಮಾಸ್ಯದ ಅಂಗವಾಗಿ ಮತ್ತು ವಿದ್ಯಾಮಾನ್ಯ ತೀರ್ಥರ ಸತ್ಯತೀರ್ಥ ಪೀಠಾರೋಹಣದ ಶತಮಾನೋತ್ಸವದ ಪ್ರಯುಕ್ತ ಮೂಲ ಮಠದಲ್ಲಿ ನಿತ್ಯವೂ ವಿಶೇಷ ಪೂಜೆ, ಜಪ-ತಪ ಹಾಗೂ ಶಾಸ್ತ್ರ ವಿಚಾರ ವಿನಿಮಯಗಳು ನಡೆಯುತ್ತಿವೆ.

ವಿದ್ವಾಂಸರಿಂದ ನಾಲ್ಕೂ ವೇದಗಳ ಪಾರಾಯಣ ಮತ್ತು ಜಪ, ಭಾಗವತ ಪ್ರವಚನ, ಮಹಾಭಾರತದ ಆಖ್ಯಾನಗಳ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಬಾರ್ಕೂರು ಕಲ್ಚಪ್ರದಿಂದ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀಗಳು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-28-1957753443

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ