
ಮಹದೇವಪ್ಪಗೆ ಸಚಿವ ಸ್ಥಾನ ನೀಡದೇ ಅನ್ಯಾಯ: ದಸಂಸ
ಬೆಂಗಳೂರು: ‘ಅನುಭವಿ ಹಾಗೂ ವೈಚಾರಿಕ ಪ್ರಜ್ಞೆಯ ರಾಜಕಾರಣಿ ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಒಕ್ಕೂಟ ದೂರಿದೆ.
ಸಮಾನತೆ, ಸಾಮಾಜಿಕ ನ್ಯಾಯ, ವೈಚಾರಿಕ ಪ್ರಜ್ಞೆಯ ಸೈದ್ಧಾಂತಿಕ ದಲಿತರಾಜಕೀಯ ನಾಯಕತ್ವವನ್ನು ಹೊಸಕಿಹಾಕುವ ‘ಚಾಳಿ’ಯನ್ನು ಕಾಂಗ್ರೆಸ್ ಅಭ್ಯಾಸ ಮಾಡಿಕೊಂಡಿದೆ ಎಂದು ಡಿಎಸ್‌ಎಸ್ ನಾಯಕರಾದ ಗುರುಪ್ರಸಾದ್ ಕೆರಗೋಡು, ಇಂದೂಧರ ಹೊನ್ನಾಪುರ, ವಿ.ನಾಗರಾಜ್, ಮಾವಳ್ಳಿಶಂಕರ್, ಎನ್. ಮುನಿಸ್ವಾಮಿ ಆರೋಪಿಸಿದ್ದಾರೆ.
ದಲಿತ ಸಾಂಸ್ಕೃತಿಕ ಹಾಗೂ ಸ್ವಾಭಿಮಾನಿ ನಾಯಕರಾಗಿದ್ದ ಬಿ.ಬಸವ ಲಿಂಗಪ್ಪ ಅವರನ್ನೂ ಕಡೆಗಣಿಸಿ ಕಾಂಗ್ರೆಸ್ ಅಪಮಾನ ಮಾಡಿತ್ತು. ಎನ್. ರಾಚಯ್ಯ, ಕೆ.ಎಚ್. ರಂಗನಾಥ್, ವಿ.ಶ್ರೀನಿವಾಸ್ ಪ್ರಸಾದ್ ಅವರನ್ನೂ ಕಡೆಗಣಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಇದ್ದ ಅವಕಾಶವನ್ನು ಕಾಂಗ್ರೆಸ್ ಹಾಳು ಮಾಡಿತ್ತು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ದಲಿತ ವಿರೋಧಿ ಧೋರಣೆ ಹೀಗೆಯೇ ಮುಂದುವರಿದರೆ, ಎಲ್ಲ ದಲಿತ ಮಂತ್ರಿಗಳು ಒಂದು ಹಂತದವರೆಗೆ ಬಂದಮೇಲೆ ಮುಖ್ಯಮಂತ್ರಿ ಸ್ಥಾನ ಕೇಳುತ್ತಾರೆ ಎಂದು ಅನಿಸಿದ ಕೂಡಲೇ ಕಡೆಗಣಿಸುವ ಸಾಧ್ಯತೆ ಇದೆ. ಈಗ ಮಹದೇವಪ್ಪಗೆ ಆಗಿರುವ ಸ್ಥಿತಿ ಹಾಲಿ ಸಚಿವರಿಗೆ ಆಗುವುದಿಲ್ಲ ಎಂದು ಹೇಳಲಾಗದು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 136 ಶಾಸಕರು ಆಯ್ಕೆಯಾಗಲು ಮಹದೇವಪ್ಪ ಕೂಡ ಪ್ರಮುಖ ಕಾರಣ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮರೆತಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮಹದೇವಪ್ಪ ಅವರನ್ನು ಕಡೆಗಣಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಲಿತ ಸಮುದಾಯದ ನಂಬಿಕೆಗೆ ದ್ರೋಹವೆಸಗಿದ್ದಾರೆ. ಇದರ ಪರಿಣಾಮವನ್ನು ಮುಂದೆ ಎದುರಿಸ ಬೇಕಾಗುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-51-1717290073