
ಬಸವಕಲ್ಯಾಣ ತಾಲ್ಲೂಕಿನಲ್ಲಿ ಭೀಕರ ಬರ: ಮಳೆ ಕೊರತೆಯಿಂದ ಬೆಳೆ ಒಣಗುವ ಭೀತಿ
ಬಸವಕಲ್ಯಾಣ: ಜಿಲ್ಲೆಯಲ್ಲಿನ ಒಣಬೇಸಾಯದ ಏಕೈಕ ತಾಲ್ಲೂಕು ಆಗಿರುವ ಬಸವಕಲ್ಯಾಣದಲ್ಲಿ ಮಳೆ ಅತ್ಯಲ್ಪ ಪ್ರಮಾಣದಲ್ಲಿ ಸುರಿದಿರುವುದರಿಂದ ಭೀಕರ ಬರ ಎದುರಾಗಿದೆ.
ಮಳೆ ಕೊರತಯಿಂದ ತಾಲ್ಲೂಕಿನ ಬಹುತೇಕ ನಾಲೆಗಳಲ್ಲಿ ಒಮ್ಮೆಯೂ ನೀರು ಹರಿದಿಲ್ಲ. ಕೆರೆ, ಬಾವಿಗಳಲ್ಲಿ ಮೊದಲಿನ ನೀರು ಬಿಟ್ಟರೆ ಹೊಸ ನೀರು ಬಂದಿಲ್ಲ. ಜನರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಆಗುವ ಸಾಧ್ಯತೆ ಇದೆ.
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ, ಮಂಠಾಳ, ಮುಡಬಿ, ರಾಜೇಶ್ವರ ಹೋಬಳಿಗಳ ವ್ಯಾಪ್ತಿಯಲ್ಲಿ ಮಳೆ ತೀರ ಕಡಿಮೆ ಸುರಿದಿದೆ. ಆದ್ದರಿಂದ ಈ ಭಾಗದಲ್ಲಿನ ಬೆಳೆಗಳು ಒಣಗುವ ಹಂತದಲ್ಲಿವೆ.
ಬಸವಕಲ್ಯಾಣ ನಗರ ಹಾಗೂ ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ವರ್ಷಾಧಾರೆ ಸ್ವಲ್ಪ ಅಧಿಕವಾಗಿದ್ದರೂ ಬೆಳೆಗಳು ಜೀವ ಹಿಡಿದುಕೊಳ್ಳುವುದಕ್ಕಷ್ಟೆ ಅನುಕೂಲವಾಗಿದೆ. ಕಾಯಿ ಕಟ್ಟುವುದಕ್ಕೆ ಶಕ್ತಿ ಸಾಲದೆ ಇಳುವರಿ ತೀರ ಕಡಿಮೆ ಆಗುವುದು ನಿಶ್ಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಇಡೀ ತಾಲ್ಲೂಕಿನಲ್ಲಿ ಮುಂಗಾರು ಮಳೆ ತಿಂಗಳಪರ್ಯಂತ ಸುರಿಯಲೇ ಇಲ್ಲ. ಬಳಿಕವೂ ಸಮರ್ಪಕ ಮಳೆ ಆಗಲಿಲ್ಲ. ಹೀಗಾಗಿ ಬಿತ್ತನೆಯೇ ಆಗುತ್ತಿರಲಿಲ್ಲ. ಆದರೂ, ಈ ವರ್ಷ ಎಲ್ಲ ರೈತರು ಬೀಜ ಮತ್ತು ಗೊಬ್ಬರವನ್ನು ಮಳೆಗಾಲ ಆರಂಭ ಆಗುವ ಮೊದಲ ವಾರದಲ್ಲೇ ಖರೀದಿಸಿದ್ದರಿಂದ ಅದನ್ನು ಮನೆಯಲ್ಲಿ ಇಟ್ಟಾದರೂ ಏನು ಮಾಡುವುದು ಎಂದು ಎಲ್ಲರೂ ಬಿತ್ತನೆ ಕೈಗೊಂಡರು. ಆದರೆ, ಬೆಳೆಗಳು ಒಣಗುತ್ತಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದೆ.
ಸೋಯಾ, ಅವರೆ ಅತ್ಯಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ತೊಗರಿ, ಸಜ್ಜೆ, ಹೆಸರು, ಉದ್ದು ಕೂಡ ಕೆಲವರು ಬಿತ್ತಿದ್ದಾರೆ. ಎಲ್ಲ ಬೆಳೆಗಳೂ ಒಣಗುವ ಹಂತದಲ್ಲಿವೆ. ಕೆಲ ರೈತರು ಬಾವಿ ಮತ್ತು ಕೊಳವೆಬಾವಿಗಳ ನೀರು ಹೊಲಗಳಿಗೆ ಹರಿಸಿದ್ದಾರಾದರೂ ಅವುಗಳ ಬೆಳವಣಿಗೆ ಉತ್ತಮವಾಗಿಲ್ಲ.
ಆಗಾಗ ಜಿಟಿಜಿಟಿ ಮಳೆ ಸುರಿದಿದ್ದರಿಂದ ಕೆಲವೆಡೆ ಹಸಿರು ಕಂಡರೂ ಬೆಳೆಗಳ ಕಾಯಿಗಳು ಗಟ್ಟಿಯಾಗುವ ಭರವಸೆ ಇಲ್ಲ. ಆದ್ದರಿಂದ ರೈತವರ್ಗದಲ್ಲಿ ನಿರಾಶೆಯ ಛಾಯೆ ಆವರಿಸಿದ್ದು, ಇಂಥವರು ಹಾಗೂ ಕೂಲಿ ಕಾರ್ಮಿಕರು ಗುಳೆ ಹೊರಡುವ ಸಿದ್ಧತೆಯಲ್ಲಿ ಇರುವುದು ಕಂಡು ಬಂದಿದೆ.
ತಾಲ್ಲೂಕಿನಲ್ಲಿಲ್ಲ ದೊಡ್ಡ ನದಿ, ನಾಲೆಗಳು
ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ ಇದ್ದರೂ ಬರಿ ಎರಡು ಗ್ರಾಮದವರಿಗೆ ಅದರ ನೀರು ದೊರಕುತ್ತದೆ. ಉಳಿದಂತೆ ಬಹುತೇಕ ಮಳೆ ಆಶ್ರಿತ ಬೇಸಾಯವಿದೆ. ಇನ್ನೊಂದೆಡೆ ಈ ಸಲ ಬರಗಾಲವಿರುವುದರಿಂದ ಮೇವು ಸಹ ಬೆಳೆದಿಲ್ಲ. ಹೀಗಾಗಿ ಜಾನುವಾರುಗಳು ಸಹ ಸಂಕಷ್ಟದಲ್ಲಿವೆ. ಸಂಬಂಧಿತರು ಈಗಲೇ ಎಚ್ಚೆತ್ತುಕೊಂಡು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಹಾಗೂ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-33-900820746