
ಬಳ್ಳಾರಿ | ರಸಗೊಬ್ಬರಗಳಿಂದ ಅಂತರ್ಜಲ ಕಲುಷಿತ
ಬಳ್ಳಾರಿ: ಕೃಷಿಯಲ್ಲಿ ಮಿತಿಮೀರಿದ ರಸಗೊಬ್ಬರ ಬಳಕೆಯಿಂದಾಗಿ ಬಳ್ಳಾರಿ ಜಿಲ್ಲೆಯ ಅಂತರ್ಜಲದಲ್ಲಿ ನೈಟ್ರೇಟ್ ಮತ್ತು ಫ್ಲೂರೈಡ್ ಅಂಶ ನಿಗದಿತ ಮಿತಿ ಮೀರಿರುವುದು ಕೇಂದ್ರ ಅಂತರ್ಜಲ ಮಂಡಳಿಯ (ಸಿಜಿಡಬ್ಲ್ಯುಬಿ) ಸಮೀಕ್ಷೆಯಿಂದ ದೃಢಪಟ್ಟಿದೆ.
ಕೇಂದ್ರ ರಸಗೊಬ್ಬರ ಇಲಾಖೆ ಪೂರೈಸಿರುವ ಮಾಹಿತಿಯಿಂದ ಈ ಸಂಗತಿ ಬೆಳಕಿಗೆ ಬಂದಿದೆ. ನೈಟ್ರೇಟ್ ಮತ್ತು ಫ್ಲೋರೈಡ್‌ಯುಕ್ತ ನೀರಿನ ಸೇವನೆಯು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಈ ವರದಿಯು ಆತಂಕಕ್ಕೆ ಕಾರಣವಾಗಿದೆ.
ವರದಿಯಲ್ಲೇನಿದೆ: ವಾರ್ಷಿಕ ಅಂತರ್ಜಲ ಗುಣಮಟ್ಟ ವರದಿ–2025ರ ಪ್ರಕಾರ, ಬಳ್ಳಾರಿ ಜಿಲ್ಲೆಯಿಂದ ಸಂಗ್ರಹಿಸಲಾದ ಒಟ್ಟು 4 ಅಂತರ್ಜಲ ಮಾದರಿಗಳ ಪೈಕಿ ಒಂದು ಮಾದರಿಯಲ್ಲಿ ನೈಟ್ರೇಟ್ ಪ್ರಮಾಣ ಬಿಐಎಸ್ (ಭಾರತೀಯ ಮಾನದಂಡ ಸಂಸ್ಥೆ) ನಿಗದಿಪಡಿಸಿದ ಗರಿಷ್ಠ ಮಿತಿ 45 ಮಿ.ಗ್ರಾಂ/ಲೀ ಮೀರಿದೆ. ಅಂದರೆ, ಒಟ್ಟಾರೆ ಸಂಗ್ರಹಿತ ಮಾದರಿಯಲ್ಲಿ ಶೇ. 25ರಷ್ಟರಲ್ಲಿ ನೈಟ್ರೇಟ್ ಕಂಡು ಬಂದಿದೆ.
ಇನ್ನು ಎರಡು ಮಾದರಿಗಳಲ್ಲಿ ಫ್ಲೂರೈಡ್ ಅಂಶ ನಿಗದಿತ 1.5 ಮಿ.ಗ್ರಾಂ/ಲೀ ಮಿತಿಯನ್ನು ಮೀರಿತ್ತು. ಇದು ಒಟ್ಟಾರೆ ಸಂಗ್ರಹಿತ ಮಾದರಿಯ ಶೇ 50ರಷ್ಟು ಎಂದು ವರದಿ ಹೇಳಿದೆ.
ವಿದ್ಯುತ್ ವಾಹಕತೆ (ಎಲೆಕ್ಟ್ರಿಕಲ್ ಕಂಡಕ್ಟಿವಿಟಿ) ವಿಚಾರದಲ್ಲಿ ಯಾವುದೇ ಮಾದರಿ ಮಿತಿ ಮೀರಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಾದರಿಗಳ ಸಂಖ್ಯೆ ಚಿಕ್ಕದಾಗಿದ್ದರೂ, ಫ್ಲೂರೈಡ್ ಮಾಲಿನ್ಯದ ಪ್ರಮಾಣ (ಶೇ.50) ರಾಜ್ಯದ ಹಲವು ಜಿಲ್ಲೆಗಳಿಗಿಂತ ಹೆಚ್ಚಾಗಿರುವುದು ಗಮನಾರ್ಹ.
ಸಾರಜನಕಯುಕ್ತ ರಸಗೊಬ್ಬರಗಳ (ವಿಶೇಷವಾಗಿ ಯೂರಿಯಾ) ಅಸಮತೋಲಿತ ಮತ್ತು ಅತಿಯಾದ ಬಳಕೆಯಿಂದ ಮಣ್ಣಿನ ಆಮ್ಲೀಯತೆ, ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಸಮಸ್ಯೆ ಉಂಟಾಗುತ್ತಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಡೆಸಿದ ದೀರ್ಘಕಾಲೀನ ಅಧ್ಯಯನಗಳೂ ಹೆಚ್ಚು ರಸಗೊಬ್ಬರ ಬಳಸುವ ಪ್ರದೇಶಗಳಲ್ಲಿ ಅಂತರ್ಜಲ ನೈಟ್ರೇಟ್ ಮಟ್ಟ ಹೆಚ್ಚುತ್ತಿರುವುದನ್ನು ದೃಢಪಡಿಸಿವೆ.
ಸಾವಯವ ಪರಿಕರ ಹಂಚಿಕೆಗೆ ಗುರಿ: ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ರಸಗೊಬ್ಬರ ಬಳಕೆ ಸಮತೋಲನಗೊಳಿಸುವ ನಿಟ್ಟಿನಲ್ಲಿ 2026–27ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಗೆ ಗುರಿ ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ಕೃಷಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ತಿಳಿಸಿದೆ ಎನ್ನಲಾಗಿದೆ.
1,524.51 ಹೆಕ್ಟೇರ್‌ಗೆ ಹಸಿರೆಲೆ ಗೊಬ್ಬರ ಬೀಜ(ಬೆಲೆ ₹43.93 ಲಕ್ಷ), 2,108 ಹೆಕ್ಟೇರ್‌ಗೆ ಸೂಕ್ಷ್ಮ ಪೋಷಕಾಂಶ ಮತ್ತು ಮಣ್ಣು ಸುಧಾರಣಾ ವಸ್ತುಗಳು (₹46.70 ಲಕ್ಷ), 260.40 ಹೆಕ್ಟೇರ್‌ಗೆ
ಇತರೆ ಸಾವಯವ ಪರಿಕರಗಳನ್ನು (₹6.51 ಲಕ್ಷ) ಬಳಕೆ ಮಾಡಲು ಗುರಿ ನೀಡಲಾಗಿದೆ.
ಇದಲ್ಲದೆ, ರಾಜ್ಯದಾದ್ಯಂತ 'ಖೇತ್ ಬಚಾವೋ ಆಂದೋಲನ'ದ ಮೂಲಕ ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ (ಎನ್‌ಎಂಎನ್‌ಎಫ್) ರಾಜ್ಯದ 1,272 ಕ್ಲಸ್ಟರ್‌ಗಳಲ್ಲಿ ನೈಸರ್ಗಿಕ/ಸಾವಯವ ಕೃಷಿಯನ್ನು ಉತ್ತೇಜಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ.
ಸಾವಯ ಕೃಷಿಯೇ ಇದಕ್ಕೆಲ್ಲ ಪರಿಹಾರ: ಈ ಸಮಸ್ಯೆಗೆ ಸಾವಯವ ಕೃಷಿಯೇ ಪರಿಹಾರ. ಆದರೆ, ಈ ಕೃಷಿಗೆ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಸಾವಯವ ಕೃಷಿಕ ಎಂದು ಪ್ರಮಾಣ ಪತ್ರ ಪಡೆಯಲು ₹12 ಸಾವಿರ ಹಣ ಕೊಡಬೇಕಾಗಿ ಬಂದಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಸಾವಯವ ರೈತರು ಆಗ್ರಹಿಸಿದ್ದಾರೆ. ಜತೆಗೆ ಸಾವಯವ ಕೃಷಿಕರಿಗೆ ಸಬ್ಸಿಡಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.