ಬಸವಕಲ್ಯಾಣ ತಾಲ್ಲೂಕಿನಲ್ಲಿ ಭೀಕರ ಬರ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಭೀಕರ ಬರ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಭೀಕರ ಬರ

ಬೀದರ್‌: ರಾಜ್ಯ ಸರ್ಕಾರವು ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಿದೆ.

ಜಿಲ್ಲೆಯ ಬೀದರ್‌, ಬಸವಕಲ್ಯಾಣ, ಹುಮನಾಬಾದ್‌ ಹಾಗೂ ಚಿಟಗುಪ್ಪ ತಾಲ್ಲೂಕುಗಳನ್ನು ಹೆಸರಿಸಿದೆ. ಜೂನ್‌ನಿಂದ ಇದುವರೆಗೆ ಸುರಿದ ಮಳೆ ಪ್ರಮಾಣ ಆಧರಿಸಿ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.

ಜೂನ್‌ನಿಂದ ಇದುವರೆಗೆ ಜಿಲ್ಲೆಯಲ್ಲಿ ಶೇ 37ರಷ್ಟು ಮಳೆ ಕೊರತೆಯಾದರೆ, ಆಗಸ್ಟ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ 58ರಷ್ಟು ಕೊರತೆ ಮಳೆಯಾಗಿದೆ. ಆದರೆ, ತೀವ್ರ ಬರಪೀಡಿತ ಎಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಶೇ 50ಕ್ಕಿಂತ ಅಧಿಕ ಪ್ರಮಾಣದಲ್ಲಿ ಕೊರತೆ ಮಳೆಯಾಗಿದೆ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ನಿಯಮ ಅನ್ವಯ ಆಗುವುದರಿಂದ ಅದನ್ನು ಆಧರಿಸಿ ಈ ತೀರ್ಮಾನಕ್ಕೆ ಬಂದಿದೆ.

ಸರ್ಕಾರದ ಈ ನಿರ್ಧಾರವು ಈ ನಾಲ್ಕು ತಾಲ್ಲೂಕುಗಳ ರೈತರಿಗೆ ಖುಷಿ ತಂದಿದೆ. ಆದರೆ, ಇನ್ನುಳಿದ ನಾಲ್ಕು ತಾಲ್ಲೂಕುಗಳಾದ ಹುಲಸೂರ, ಭಾಲ್ಕಿ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ರೈತರಿಗೆ ಬೇಸರ ತರಿಸಿದೆ.

‘ಎಲ್ಲಾ ಸಂದರ್ಭಗಳಲ್ಲೂ ನೂರಕ್ಕೆ ನೂರರಷ್ಟು ನಿಯಮಗಳನ್ವಯ ಬರ ಘೋಷಿಸುವುದು ಸೂಕ್ತವಲ್ಲ. ಈ ಸಲ ಜೂನ್‌ ಆರಂಭದಿಂದಲೂ ಸಮರ್ಪಕ ಮಳೆಯಾಗಿಲ್ಲ. ರೈತರು ಅತಂತ್ರದಲ್ಲೇ ಕಾಲ ಕಳೆಯುತ್ತಿದ್ದಾರೆ. ಜಿಲ್ಲೆಯ ಯಾವ ಭಾಗದಲ್ಲೂ ಪೂರ್ಣ ಪ್ರಮಾಣದಲ್ಲಿ ಉತ್ತಮ ಬೆಳೆ ಇಲ್ಲ. ರೈತರ ಹಿತ ಗಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ಎಂಟೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ರೈತರಿಗೆ ಪರಿಹಾರ ಒದಗಿಸಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ್‌ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ.

‘ಬರಗಾಲ ಘೋಷಿಸುವುದರಿಂದ ರೈತರಿಗಷ್ಟೇ ಅಲ್ಲ, ಆ ಭಾಗದಲ್ಲಿ ವಾಸಿಸುವ ಜನರಿಗೂ ಅನುಕೂಲವಾಗುತ್ತದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹೀಗೆ ಪ್ರತಿಯೊಂದು ವ್ಯವಸ್ಥೆ ಮಾಡಬೇಕಾಗುತ್ತದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯ ಪರಿಸ್ಥಿತಿ ಇದೆ. ಆದಕಾರಣ ಇಡೀ ಜಿಲ್ಲೆ ಬರಪೀಡಿತ ಘೋಷಿಸುವುದು ಸೂಕ್ತ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ ಅಭಿಪ್ರಾಯ ಪಟ್ಟಿದ್ದಾರೆ.

‘ಎಂಟೂ ತಾಲ್ಲೂಕು ಘೋಷಿಸಿ’

‘ಬೀದರ್ ಜಿಲ್ಲೆಯ ಎಂಟೂ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಬೇಕು. ಬೀದರ್, ಬಸವಕಲ್ಯಾಣ, ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕುಗಳನ್ನು ಮೊದಲ ಹಂತದ ಪಟ್ಟಿಯಲ್ಲಿ ಸರ್ಕಾರ ಬರ ಪೀಡಿತ ಎಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಉಳಿದ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವುದು ನ್ಯಾಯ ಸಮ್ಮತವಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದ್ದಾರೆ.

‘ಔರಾದ್, ಭಾಲ್ಕಿ, ಹುಲಸೂರು ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಮಳೆ ಇಲ್ಲದೆ ಉದ್ದು, ಹೆಸರು, ಸೋಯಾಬಿನ್ ಹಾಗೂ ತೊಗರಿ ಬೆಳೆಗಳು ಹಾಳಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸ್ಪಂದಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಚಿಟಗುಪ್ಪ ತಾಲ್ಲೂಕು ಬರಪೀಡಿತ ಎಂದು ಘೋಷಿಸಿರುವುದು ಸ್ವಾಗತಾರ್ಹ. ಸರ್ಕಾರದ ನಿರ್ಧಾರ ಖುಷಿ ತಂದಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದು ಯುವ ಮುಖಂಡ ಚೇತನ್‌ ಸೊರಳ್ಳಿ ತಿಳಿಸಿದ್ದಾರೆ.

ಬರ ಘೋಷಣೆ; ಯಾವೆಲ್ಲ ತಾಲ್ಲೂಕು

ಸರ್ಕಾರ ಯಾವ ರೀತಿ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ. ಅವರ ಹೇಗೆ ತೀರ್ಮಾನಿಸಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಶೀಘ್ರದಲ್ಲೇ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ತಯಾರಿಸಲಾಗುವುದು ಶ್ರೀಮಂತ ಬಿರಾದಾರ, ಜಿಲ್ಲಾಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-33-207365270

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ