‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ದಲ್ಲಿ ಗೊಬ್ಬರ ತಯಾರಿಕೆ; ಆಸಕ್ತರಿಗೆ ಮಾರ್ಗದರ್ಶನ

‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ದಲ್ಲಿ ಗೊಬ್ಬರ ತಯಾರಿಕೆ; ಆಸಕ್ತರಿಗೆ ಮಾರ್ಗದರ್ಶನ

‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ದಲ್ಲಿ ಗೊಬ್ಬರ ತಯಾರಿಕೆ; ಆಸಕ್ತರಿಗೆ ಮಾರ್ಗದರ್ಶನ

ದಾವಣಗೆರೆ: ನಗರದ ಜೆ.‌ಎಚ್. ಪಟೇಲ್ ಬಡಾವಣೆಯಲ್ಲಿರುವ ‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ವು ಸಾವಯವ ಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ತ್ಯಾಜ್ಯ ನಿರ್ವಹಣೆಯಲ್ಲಿ ಸುಸ್ಥಿರ ಮಾದರಿಯೊಂದನ್ನು ರೂಪಿಸಿದೆ.

ಇಲ್ಲಿ ನಿರ್ಮಿಸಿರುವ ಎರೆಹುಳ ಗೊಬ್ಬರ ಹಾಗೂ ಕಾಂಪೋಸ್ಟ್ ತಯಾರಿಕೆ ಮಾದರಿ ಘಟಕದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ. ಉದ್ಯಾನದಲ್ಲಿ ಸಹಜವಾಗಿ ದೊರೆಯುವ ಮರದ ಎಲೆಗಳು, ಹುಲ್ಲು, ಕಸಕಡ್ಡಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸಮೀಪದ ಮನೆಗಳಿಂದ ಸಂಗ್ರಹಿಸಿದ ಅಡುಗೆಮನೆಯ ತ್ಯಾಜ್ಯವನ್ನೂ ಬಳಕೆ ಮಾಡಿಕೊಂಡು ಉತ್ಪಾದನೆ ಮಾಡಲಾಗುತ್ತಿದೆ ಎಂದು ಇಲ್ಲಿನ ಸಿಬ್ಬಂದಿ ನಾಗರಾಜ್ ಹಾಗೂ ಮನೋಜ್ ಮಾಹಿತಿ ನೀಡಿದರು.

ಉದ್ಯಾನದೊಳಗೆ ಅಡಿಯಿಡುತ್ತಿದ್ದಂತೆಯೇ ಕಾಂಪೋಸ್ಟ್ ಘಟಕ ಎದುರಾಗುತ್ತದೆ. ಚಾವಣಿಯ ನೆರಳಿನಲ್ಲಿ ನಾಲ್ಕು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ತ್ಯಾಜ್ಯವನ್ನು ಸುರಿದು, ವಾಸನೆ ಬಾರದಂತೆ ಪುಡಿಯನ್ನು ಚೆಲ್ಲಲಾಗುತ್ತದೆ. 90 ದಿನಗಳಲ್ಲಿ ಗೊಬ್ಬರ ಸಿದ್ಧವಾಗುತ್ತದೆ. ನಂತರ ಅದನ್ನು ನೆರಳಿನಲ್ಲಿ ಒಣಗಿಸಿ ಚೀಲಗಳಿಗೆ ತುಂಬಿಸಿಡಲಾಗುತ್ತದೆ.

‘ಪಾಲಿಕೆಯ ಕಸ ಸಂಗ್ರಹಣೆ ವಾಹಗಳಿಗೆ ನಗರದ ನಾಗರಿಕರು ವಿಂಗಡಿಸಿಕೊಡುವ ತರಕಾರಿ, ಹಣ್ಣಿನ ಸಿಪ್ಪೆ ಸೇರಿದಂತೆ ಹಸಿ ಕಸವನ್ನು ಇಲ್ಲಿ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ದಿನ ನಾಲ್ಕು ಚೀಲಗಳಷ್ಟು ತ್ಯಾಜ್ಯವನ್ನು ಕಾಂಪೋಸ್ಟ್ ಘಟಕಕ್ಕೆ ಹಾಕಲಾಗುತ್ತಿದೆ. ಈಗ 5 ಕ್ವಿಂಟಲ್‌ನಷ್ಟು ಗೊಬ್ಬರ ಸಿದ್ಧವಾಗಿದ್ದು, ಸಮೀಪದಲ್ಲಿರುವ ಉದ್ಯಾನಗಳಿಗೆ ಬಳಸಿಕೊಳ್ಳುವ ಉದ್ದೇಶವಿದೆ’ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ದೇಶದಲ್ಲಿವೆ 3 ಸ್ವಚ್ಛ ಗೃಹ ಕಲಿಕಾ ಕೇಂದ್ರ: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ದೇಶದಲ್ಲಿ ಮೂರು ‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ.

ಆಂಧ್ರ ಪ್ರದೇಶದ ಸಿದ್ದಿಪೇಟೆ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ ಹಾಗೂ ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸುಸ್ಥಿರ ಮಾದರಿಗಳು ಯಶಸ್ವಿಯಾಗಿದ್ದು, ಇವುಗಳ ಪ್ರೇರಣೆಯಿಂದ ಇತರ ಕಡೆಗಳಲ್ಲೂ ಸ್ಥಾಪಿಸುವ ಉದ್ದೇಶವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಾತ್ಯಕ್ಷಿಕೆ , ಸ್ವಚ್ಛತೆಯ ಪಾಠ ಹೇಳುವ ತಾಣ

ಮಹಾನಗರ ಪಾಲಿಕೆ ಅಭಿವೃದ್ಧಿಪಡಿಸಿರುವ ಈ ಉದ್ಯಾನದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ ನಿರ್ಮಿಸಲಾಗಿದೆ. ಇದು ನಗರದ ನಾಗರಿಕರು, ಸಂಘ–ಸಂಸ್ಥೆಗಳ ಸಿಬ್ಬಂದಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಪಾಠ ಹೇಳುವ ತಾಣವಾಗಿದೆ.

ಇಬ್ಬರು, ನಾಲ್ಕು ಜನ ಅಥವಾ ಹೆಚ್ಚು ಜನರು ವಾಸಿಸುವ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪಾದನೆಯಾಗುವ ಕಸಕ್ಕೆ ಯಾವ ಮಾದರಿಯ ಕಾಂಪೋಸ್ಟ್ ತಯಾರಿಕಾ ಘಟಕ ನಿರ್ಮಿಸಬೇಕು ಎಂಬುದನ್ನು ಮಾದರಿಗಳ ಸಮೇತ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇವು ಎಲ್ಲಿ ದೊರೆಯುತ್ತವೆ ಎಂಬ ಮಾಹಿತಿಯನ್ನೂ ನೀಡಲಾಗುತ್ತಿದ್ದು, ಆಸಕ್ತರು ನೇರವಾಗಿ ಅವರಿಂದ ಖರೀದಿಸಬಹುದು ಎಂದು ಪಾಲಿಕೆಯ ಪರಿಸರ ವಿಭಾಗದ ಎಂಜಿನಿಯರ್ ಬಸವಣ್ಣ ತಿಳಿಸಿದರು.

ನಗರವೂ ಸೇರಿದಂತೆ ದೂರದ ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ನಿರಂತರವಾಗಿ ಭೇಟಿ ನೀಡಿ ಸ್ವಚ್ಛತೆ ನಿರ್ವಹಣೆ, ತ್ಯಾಜ್ಯ ವಿಲೇವಾರಿಯ ಮಾಹಿತಿ ಪಡೆಯುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-43-1338454272

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ