
ನೀರಿನ ಸದ್ಬಳಕೆ: ಬರದ ಛಾಯೆಯಲ್ಲೂ ವಾಣಿಜ್ಯ ಬೆಳೆ ಬೆಳೆದ ಗುಡಿಬಂಡೆಯ ರೈತ
ಗುಡಿಬಂಡೆ: ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದರೂ, ಇರುವ ಜಮೀನಿನಲ್ಲಿ ವಿವಿಧ ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆದು ಮಾದರಿಯಾಗಿದ್ದಾರೆ ತಾಲ್ಲೂಕಿನ ಮಾಚಹಳ್ಳಿಯ ರೈತ ಆದಿನಾರಾಯಣಪ್ಪ.
ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ಮಳೆಗಾಗಿ ತಾಲ್ಲೂಕಿನ ರೈತರು ಆಕಾಶ ನೋಡುತ್ತಾ ಕುಳಿತಿರುವಾಗ ಆದಿನಾರಾಯಣಪ್ಪ ಅವರು ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ವಿವಿಧ ರೀತಿಯ ಬೆಳೆ ಬೆಳೆಯುತ್ತಿದ್ದಾರೆ.
ದಾಳಿಂಬೆ, ಆಲೂಗಡ್ಡೆ, ನೆಲಗಡಲೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಬೆಳೆಯನ್ನು ರಕ್ಷಿಸಲು ಸೋಲಾರ್ ತಂತಿಯನ್ನು ಅಳವಡಿಸಿದ್ದಾರೆ.
ಸಾವಯುವ ಕೃಷಿ ಪದ್ಧತಿ: ರೈತ ಆದಿನಾರಾಯಣಪ್ಪ ಅವರು ಆರೋಗ್ಯಕರ ಬೆಳೆ ಬೆಳೆಯುವ ಉದ್ದೇಶದಿಂದ ರಾಸಾಯನಿಕ, ಔಷಧ ಹಾಗೂ ರಸಗೊಬ್ಬರ ಬಳಸದೆ ಕೊಟ್ಟಿಗೆ ಗೊಬ್ಬರ, ಕಾಂಪೊಸ್ಟ್ ಬಳಸಿ ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಜೊತೆಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.
ಇರುವ ನಾಲ್ಕು ಎಕರೆ ಜಮೀನನ್ನು ವಿವಿಧ ಭಾಗಗಳಾಗಿ ಮಾಡಿಕೊಂಡು ಒಂದು ಎಕರೆ ರಾಗಿ, ಟೊಮೆಟೊ, ಅರ್ಧ ಎಕರೆಯಲ್ಲಿ ಜೋಳ, ಹೂ, ಇನ್ನೂ ಅರ್ಧ ಎಕರೆ ಕೊತ್ತಂಬರಿ, ಪಾಲಾಕ್ ಸೊಪ್ಪು, ಉಳಿದರಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳಡಿಸಿಕೊಂಡು ಸಮೃದ್ಧವಾಗಿ ಬೆಳೆ ಬೆಳೆದಿದ್ದಾರೆ.
ಇಷ್ಟೇ ಅಲ್ಲದೆ ದಿನ ನಿತ್ಯದ ಮನೆಗೆ ಬೇಕಾಗಿರುವ ತರಕಾರಿ, ಸೊಪ್ಪು ಹಾಗೂ ಹಣ್ಣನ್ನು ಬೆಳೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಕೃಷಿಯಲ್ಲಿ ತಮ್ಮ ಕುಟುಂಬದವರು ಹಾಗೂ ಕೂಲಿಯವರ ಸಹಕಾರದಿಂದ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-16-1539621927