ಬೆಂಗಳೂರು | ಔಷಧ ಅಂಗಡಿ ಮಾಲೀಕ ಸೊಹೇಲ್ ಕೊಲೆ ಪ್ರಕರಣ: ಆರು ಮಂದಿ ಸೆರೆ

ಬೆಂಗಳೂರು | ಔಷಧ ಅಂಗಡಿ ಮಾಲೀಕ ಸೊಹೇಲ್ ಕೊಲೆ ಪ್ರಕರಣ: ಆರು ಮಂದಿ ಸೆರೆ

ಬೆಂಗಳೂರು | ಔಷಧ ಅಂಗಡಿ ಮಾಲೀಕ ಸೊಹೇಲ್ ಕೊಲೆ ಪ್ರಕರಣ: ಆರು ಮಂದಿ ಸೆರೆ

ಬೆಂಗಳೂರು: ಮಡಿವಾಳ ಮುಖ್ಯರಸ್ತೆಯಲ್ಲಿ ಔಷಧ ಅಂಗಡಿ ಮಾಲೀಕ ಸೊಹೇಲ್‌ ಎಂಬುವರನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದ ಆರೋಪದಲ್ಲಿ ಆರು ಮಂದಿಯನ್ನು ಆಗ್ನೇಯ ವಿಭಾಗದ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಡೇಪಾಳ್ಯ ನಿವಾಸಿಗಳಾದ ಆದಿಲ್ ಅಕ್ಮಲ್ (35), ಯಾಸೀನ್ ಷರೀಫ್ (33), ಅಬ್ರಾಸ್‌ ಷರೀಫ್ (34), ಶ್ಯಾನ್, ಸೈಯದ್ ಇರ್ಫಾನ್, ಶಫೀವುಲ್ಲಾ ಬಂಧಿತರು.

ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಬಂಧಿತರ ಪೈಕಿ ಆದಿಲ್ ಅಕ್ಮಲ್ ಎಂಬಾತ ಬಂಡೆಪಾಳ್ಯ ಠಾಣೆಯ ರೌಡಿಶೀಟರ್. ಉಳಿದ ಆರೋಪಿಗಳ ಅಪರಾಧ ಹಿನ್ನೆಲೆ ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಮಂಗಮ್ಮನಪಾಳ್ಯ ನಿವಾಸಿಯಾಗಿದ್ದ ಸೊಹೇಲ್‌ ಅವರು ಶನಿವಾರ ರಾತ್ರಿ 9.30ರ ಸುಮಾರಿಗೆ ತಮ್ಮ ಔಷಧ ಅಂಗಡಿಗೆ ಬೀಗ ಹಾಕಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಆಗ ಮೂರು ಬೈಕ್‌ನಲ್ಲಿ ಆರು ಆರೋಪಿಗಳು ಹಿಂಬಾಲಿಸಿಕೊಂಡು ಬಂದಿದ್ದರು. ಮಡಿವಾಳ ಅಂಡರ್‌ಪಾಸ್‌ ಬಳಿ ವಾಹನ ದಟ್ಟಣೆಯಲ್ಲಿ ಸೊಹೇಲ್‌ ಬೈಕ್‌ ನಿಲ್ಲಿಸಿದಾಗ, ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದರು. ತಲ್ವಾರ್‌, ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದರು. ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ಸಾಕ್ಷ್ಯಾಧಾರ ಆಧರಿಸಿ, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಕಳೆದ ಜನವರಿಯಲ್ಲಿ ಕೋರಮಂಗಲ ಪೊಲೀಸ್ ಠಾಣೆಯ ರೌಡಿಶೀಟರ್ ಶಬ್ಬೀರ್ ಅಲಿಯಾಸ್ ಸೈಯದ್‌ ಶಬ್ಬೀರ್ ಕೊಲೆ ನಡೆದಿತ್ತು. ಆ ಕೊಲೆಗೆ ಪ್ರತೀಕಾರವಾಗಿ ಸೊಹೇಲ್ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಸೈಯದ್ ಶಬ್ಬೀರ್‌ಗೆ ಅಪರಾಧ ಹಿನ್ನೆಲೆ ಇತ್ತು. ಕೋರಮಂಗಲ, ಪರಪ್ಪನ ಅಗ್ರಹಾರ, ಕೋಣನಕುಂಟೆ, ಬಂಡೇಪಾಳ್ಯ ಹಾಗೂ ಆಗುಂಬೆ, ಸಾಗರ, ಹಿರೀಸಾವೆ, ಚನ್ನರಾಯಪಟ್ಟಣ ಸೇರಿ ಹಲವು ಠಾಣೆಗಳಲ್ಲಿ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಶಬ್ಬೀರ್ ಜ.12ರ ರಾತ್ರಿ ಸ್ನೇಹಿತರೊಂದಿಗೆ ಆಟೊದಲ್ಲಿ ಮಂಗಮ್ಮನಪಾಳ್ಯಕ್ಕೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ತಂಡವು ಆಟೊ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣದ ಸಂಬಂಧ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಶಬ್ಬೀರ್‌ ಕೊಲೆಗೆ ಸೊಹೇಲ್‌ ಹಣಕಾಸು ನೆರವು ನೀಡಿದ್ದರು ಎನ್ನಲಾಗಿದೆ. ಆ ವಿಚಾರವು ಶಬ್ಬೀರ್ ಆಪ್ತ ಸ್ನೇಹಿತ ಆದಿಲ್‌ ಅಕ್ಮಲ್‌ಗೆ ತಿಳಿದಿತ್ತು. ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಆದಿಲ್‌ ಸಹಚರರು ಹೊಂಚು ಹಾಕಿದ್ದರು ಎಂದು ಮೂಲಗಳು ಹೇಳಿವೆ.

ಮುಂಬೈಗೆ ಪರಾರಿಯಾಗಲು ಯೋಜನೆ:

ಕೃತ್ಯ ಎಸಗಿದ ಮೇಲೆ ಆರೋಪಿಗಳು ಮುಂಬೈಗೆ ತೆರಳಿ ತಲೆಮರೆಸಿಕೊಳ್ಳಲು ಸಂಚು ರೂಪಿಸಿದ್ದರು. ಆ ಮಾಹಿತಿ ಆಧರಿಸಿ ತ್ವರಿತ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ