ಹುಲಸೂರ ತಾಲ್ಲೂಕಿನಲ್ಲಿ ಬರದ ಛಾಯೆ: ಉದ್ಯೋಗ ಅರಸಿ ನಗರಗಳತ್ತ ಗುಳೆ

ಹುಲಸೂರ ತಾಲ್ಲೂಕಿನಲ್ಲಿ ಬರದ ಛಾಯೆ: ಉದ್ಯೋಗ ಅರಸಿ ನಗರಗಳತ್ತ ಗುಳೆ

ಹುಲಸೂರ ತಾಲ್ಲೂಕಿನಲ್ಲಿ ಬರದ ಛಾಯೆ: ಉದ್ಯೋಗ ಅರಸಿ ನಗರಗಳತ್ತ ಗುಳೆ

ಹುಲಸೂರ: ಮುಂಗಾರು ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳಿಳು ಕುಂಠಿತಗೊಂಡಿದ್ದು, ಜಾನುವಾರುಗಳ ಮೇವು, ಕುಡಿಯುವ ನೀರು ಹಾಗೂ ಉದ್ಯೋಗದ ಸಮಸ್ಯೆಯ ಆತಂಕ ಎದುರಾಗಿದೆ. ಆರಂಭದಲ್ಲಿ ಸುರಿದ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಇದೀಗ ತೇವಾಂಶದ ಕೊರತೆಯಿಂದ ಬೆಳೆಗಳು ಕಮರುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ಕೃಷಿ ಇಲಾಖೆಯ ಮಾಹಿತಿಯಂತೆ 2026ರ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 19,169 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಸೋಯಾಬಿನ್ 9,850, ತೊಗರಿ 5,370, ಕಬ್ಬು 1,200, ಸಜ್ಜೆ 615, ಜೋಳ 565, ಹೆಸರು 425, ಉದ್ದು 360 ಹಾಗೂ ಇತರೆ ಬೆಳೆಗಳನ್ನು 784 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಆದರೆ, ಮಳೆ ಕೊರತೆಯಿಂದ ಹೆಸರು, ಸೋಯಾಬಿನ್, ತೊಗರಿ, ಉದ್ದು, ಜೋಳ ಸೇರಿದಂತೆ ಹಲವು ಬೆಳೆಗಳು ಸಮರ್ಪಕವಾಗಿ ಬೆಳೆಯದೆ ಒಣಗುತ್ತಿವೆ.

ಸಾಯಗಾಂವ ಹೋಬಳಿಯ ಹಲವೆಡೆ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೂಲಿಗೆ ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ‘ಖರ್ಚು ಮಾಡಿದಷ್ಟೂ ಹಣ ಕೈಗೆ ಸಿಗದು’ ಎಂಬ ಚಿಂತೆ ಕಾಡುತ್ತಿದೆ.

ಮಳೆ ಕೊರತೆಯಿಂದ ಹಸಿರು ಮೇವು ಲಭ್ಯತೆಯ ಸಮಸ್ಯೆ ಎದುರಾಗಿದ್ದು, ಕಮರಿದ ಬೆಳೆಗಳನ್ನೇ ಜಾನುವಾರುಗಳಿಗೆ ಮೇವನ್ನಾಗಿ ನೀಡಲಾಗುತ್ತಿದೆ. ಹೊರಗಿನಿಂದ ಮೇವು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಮಳೆ ಮತ್ತಷ್ಟು ವಿಳಂಬವಾದರೆ ಮೇವಿನ ಬೆಲೆ ಏರಿಕೆ ಹಾಗೂ ಕೊರತೆ ತೀವ್ರಗೊಳ್ಳುವ ಸಾಧ್ಯತೆಯಿದೆ.

ಕೆರೆ, ಹಳ್ಳ–ಕೊಳ್ಳ ಹಾಗೂ ಕೃಷಿ ಹೊಂಡಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಅಂತರ್ಜಲ ಮರುಪೂರಣಕ್ಕೂ ಹೊಡೆತ ಬೀಳುವ ಆತಂಕವಿದೆ. ಕುಡಿಯುವ ನೀರಿಗೂ ಕೊಳವೆಬಾವಿಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕೊಳವೆಬಾವಿ ಹಾಗೂ ಅಗತ್ಯವಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಪರಿಸ್ಥಿತಿ ಎದುರಾಗಬಹುದು.

ಮಳೆ ಕೊರತೆಯಿಂದ ಕೃಷಿ ಕೆಲಸಗಳು ಕುಂಠಿತಗೊಂಡಿರುವುದರಿಂದ ಕೂಲಿ ಕಾರ್ಮಿಕರಿಗೂ ಕೆಲಸ ಸಿಗದಂತಾಗಿದೆ. ಗಡಿ ಗ್ರಾಮಗಳ ಕೆಲ ಕುಟುಂಬಗಳು ಉದ್ಯೋಗ ಅರಸಿ ಮುಂಬೈ, ಪುಣೆ, ಬೆಂಗಳೂರಿನತ್ತ ತೆರಳುತ್ತಿದ್ದಾರೆ. ಸ್ಥಳೀಯವಾಗಿ ವಿಬಿ ಜಿ ರಾಮ್‌ ಜಿಯಡಿ ಹೆಚ್ಚಿನ ಉದ್ಯೋಗ ಒದಗಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಟೊಮ್ಯಾಟೊ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೂ ಸಂಕಟ ಎದುರಾಗಿದೆ. ಕೆಲವು ರೈತರು ತೋಟ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರುಣಿಸುವಂತಾಗಿದೆ. ಮಳೆ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರ ಮುಂಚಿತವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿ ಪರಿಹಾರ, ಬೆಳೆ ವಿಮೆ, ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಒತ್ತಾಯ.

ಬರದ ಮುನ್ನೆಚ್ಚರಿಕೆಗೆ ತ್ವರಿತ ಕ್ರಮ ಅಗತ್ಯ

ಮುಂದಿನ ದಿನಗಳಲ್ಲಿ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ಅಗತ್ಯವಿರುವ ಕಡೆ ಮೇವು ಬ್ಯಾಂಕ್, ಗೋಶಾಲೆ ಆರಂಭಿಸುವುದು, ಕೆರೆ–ಕಟ್ಟೆಗಳ ಹೂಳು ತೆಗೆದು ಮಳೆನೀರು ಸಂಗ್ರಹಿಸುವುದು ಅಗತ್ಯವಾಗಿದೆ. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಸಿದ್ಧಪಡಿಸಬೇಕು.

ಜಲಮೂಲ, ಬೆಳೆ ರಕ್ಷಣೆಗೆ ಒತ್ತು

ಮಳೆ ಕೊರತೆಯಿಂದ ಮಾಂಜ್ರಾ ನದಿಯಲ್ಲಿ ನೀರು ಇಲ್ಲದೆ ಬರಡಾಗಿದ್ದು, ಕೆರೆ–ಕಟ್ಟೆ ಹಾಗೂ ಕೃಷಿ ಹೊಂಡಗಳಲ್ಲೂ ನೀರು ಕಡಿಮೆಯಾಗಿದೆ. ಕೆರೆಗಳ ಹೂಳು ತೆರವು ಮಾಡಿ ಪುನಶ್ಚೇತನಗೊಳಿಸಿ, ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು.

ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಜಾಗೃತಿ ಮೂಡಿಸಬೇಕು. ಮುಂದಿನ ಹಂಗಾಮಿನಲ್ಲಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯ, ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಿಗೆ ಆದ್ಯತೆ ನೀಡಬೇಕು.

ರೈತರಿಗೆ ಪರಿಹಾರದ ಆಸರೆ ಬೇಕು

ಬೆಳೆ ಹಾನಿ ಸಮೀಕ್ಷೆ ನಡೆಸಿ ಹುಲಸೂರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಅರ್ಹ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಶೀಘ್ರ ಒದಗಿಸುವ ಜತೆಗೆ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಅಥವಾ ಮರುಪಾವತಿಗೆ ಕಾಲಾವಕಾಶ ನೀಡಬೇಕು. ಕೃಷಿ ಕೂಲಿ ಕಾರ್ಮಿಕರು ಹಾಗೂ ಸಣ್ಣ ರೈತರಿಗೆ ನರೇಗಾ ಮೂಲಕ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗ ಕಲ್ಪಿಸಬೇಕು. ಕೆರೆಗಳ ಪುನಶ್ಚೇತನ ಮತ್ತು ಮಾಂಜ್ರಾ ನದಿ ಸೇರಿದಂತೆ ಜಲಮೂಲಗಳ ಸಂರಕ್ಷಣೆಗೆ ದೀರ್ಘಕಾಲೀನ ಯೋಜನೆ ರೂಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-33-106652270

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ