
ಕಟಪಾಡಿ ಸಂತೆ: ಮೂಲಸೌಕರ್ಯದ್ದೆ ಚಿಂತೆ
ಶಿರ್ವ: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪ್ರತಿ ಶನಿವಾರ ನಡೆಯುವ ವಾರದ ಸಂತೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿವಾರ ಸುಮಾರು ಐವತ್ತಕ್ಕೂ ಅಧಿಕ ವ್ಯಾಪಾರಸ್ಥರು ವ್ಯಾಪಾರ ವಹಿ ವಾಟು ನಡೆಸುತ್ತಿದ್ದು, ಗ್ರಾಹಕ ರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ತರಕಾರಿ, ಹಣ್ಣು- ಹಂಪಲು, ದಿನಸಿ ಸೇರಿ ವಿವಿಧ ರೀತಿಯ ವಸ್ತುಗಳ ಮಾರಾಟ ನಡೆಯುವ ಸಂತೆಯಲ್ಲಿ ಮಳೆಗಾಲದಲ್ಲಿ ವ್ಯಾಪಾರ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ದೂರದ ಊರುಗಳಿಂದ ವ್ಯಾಪಾರಸ್ಥರು, ಅದರಲ್ಲೂ ವಿಶೇಷವಾಗಿ ಮಹಿಳಾ ವ್ಯಾಪಾರಸ್ಥರು ಇಲ್ಲಿ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಲ್ಲಿ ಕುಡಿಯುವ ನೀರು, ಶೌಚಾಲಯ, ಮಳೆ- ಬಿಸಿಲಿನ ರಕ್ಷಣೆ, ವಾಹನ ನಿಲುಗಡೆ ಸೇರಿ ಅಗತ್ಯ ಸೌಲಭ್ಯಗಳು ಇಲ್ಲದಿರುವುದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಂತೆ ನಡೆಯುತ್ತಿತ್ತು. ಈಚೆಗೆ ಅದು ಶಿರ್ವ ರಸ್ತೆಯ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿ ಸೂಕ್ತ ಸ್ಥಳಾವಕಾಶ ಹಾಗೂ ಗ್ರಾಮ ಪಂಚಾಯಿತಿಗೆ ಉತ್ತಮ ಆದಾಯ ಇದ್ದರೂ ಸಂತೆಗೆ ಅಗತ್ಯವಾದ ಮೂಲಸೌಕರ್ಯ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬುದು ವ್ಯಾಪಾರಸ್ಥರಾದ ದೇವರಾಜ್ ಅವರ ಆರೋಪವಾಗಿದೆ.
ಪ್ರಸ್ತುತ ರಸ್ತೆಗೆ ಇಂಟರ್‌ಲಾಕ್ ಅಳವಡಿಸುವ ಕೆಲಸ ಮಾತ್ರ ನಡೆದಿದೆ. ಮಳೆ ಮತ್ತು ಬಿಸಿಲಿನ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿ ವ್ಯಾಪಾರ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಹಾಗಾಗಿ ವ್ಯಾಪಾರಿಗಳಿಗೆ ಅಗತ್ಯವಾದ ಚಪ್ಪರ, ತಗಡಿನ ಚಾವಣಿ ಅಥವಾ ಕಟ್ಟಡ ವ್ಯವಸ್ಥೆ ಆಗಬೇಕು ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಸಂತೆಯಿಂದ ಪ್ರತಿವರ್ಷ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ ಆದರೂ ಮೂಲಸೌಕರ್ಯ ಒದಗಿಸಲು ಮುಂದಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮೇಲ್ಚಾವಣಿ, ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.
ಸಂತೆಯು ರಸ್ತೆ ಸಮೀಪದಲ್ಲಿರುವುದರಿಂದ ವಾಹನ ನಿಲುಗಡೆಗೂ ಸೂಕ್ತ ವ್ಯವಸ್ಥೆ ಇಲ್ಲ. ಸ್ಥಳಾವಕಾಶದ ಕೊರತೆಯಿಂದ ಕೆಲ ವ್ಯಾಪಾರಸ್ಥರು ಸಂತೆಯ ನಿಗದಿತ ಪ್ರಾಂಗಣ ಬಿಟ್ಟು ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದರ ಜತೆಗೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಮೂಲಸೌಕರ್ಯ ಕಲ್ಪಿಸಲು ಆಗ್ರಹ
ಕಟಪಾಡಿ, ಮಟ್ಟು, ಶಿರ್ವ, ಪಾಂಗಳ, ಉದ್ಯಾವರ ಸೇರಿದಂತೆ ನಾಲ್ಕೂ ಕಡೆಯ ಗ್ರಾಮಸ್ಥರಿಗೆ ಅನುಕೂಲ ಆಗುವಂತೆ ಹಿರಿಯರು ಐತಿಹಾಸಿಕ ಕಟಪಾಡಿ ಸಂತೆ ನಡೆಸಿಕೊಂಡು ಬಂದಿದ್ದಾರೆ. ಆದರೆ ಶಾಶ್ವತ ವಾರದ ಸಂತೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಮುಂದಾಗುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನು ಲಯನ್ಸ್ ಸಂಸ್ಥೆ ಕಲ್ಪಿಸಿರುವುದನ್ನು ಹೊರತುಪಡಿಸಿದರೆ ಕಟ್ಟಡ, ಬೆಳಕು ಇತರ ಯಾವುದೇ ಪ್ರಮುಖ ಮೂಲಸೌಕರ್ಯಗಳು ಇಲ್ಲಿ ಲಭ್ಯವಿಲ್ಲ.
ಹೀಗಾಗಿ ಪ್ರತಿ ಶನಿವಾರ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲ ಆಗುವಂತೆ ಶೀಘ್ರವೇ ಸುಸಜ್ಜಿತ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಯಾನಂದ ಶೆಟ್ಟಿ ಆಗ್ರಹಿಸಿದ್ದಾರೆ.
ಚಾವಣಿ ನಿರ್ಮಾಣಕ್ಕೆ ಪ್ರಸ್ತಾವ
ಕಟಪಾಡಿ ವಾರದ ಸಂತೆಯ ಅಭಿವೃದ್ಧಿಯ ನಿಟ್ಟಿನಲ್ಲಿ, ವ್ಯಾಪಾರಸ್ಥರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸಂತೆಯ ಪ್ರದೇಶದಲ್ಲಿ ಚಾವಣಿ ಹೊಂದಿದ ಚಪ್ಪರ ನಿರ್ಮಿಸಲು ಸುಮಾರು ₹15 ಲಕ್ಷ ವೆಚ್ಚದ ಪ್ರಸ್ತಾವಯನ್ನು ಸಂಬಂಧಪಟ್ಟ ಇಲಾಖೆಗೆ ಹಾಗೂ ಶಾಸಕರ ಗಮನಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಮುಂದಿನ ಯೋಜನೆ ರೂಪಿಸಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರೆಯುವ ನಿರೀಕ್ಷೆಯಿದೆ ಎಂದು ಕಟಪಾಡಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಪ್ರಭಾ ವಿ.ಶೆಟ್ಟಿ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-28-315621870