
ಹಾರೋಹಳ್ಳಿ: ಎಲ್ಲೆಡೆ ಕಾರ್ಖಾನೆ ತ್ಯಾಜ್ಯ
ಹಾರೋಹಳ್ಳಿ: ಪಟ್ಟಣದ ಸುತ್ತಮುತ್ತ ಎಲ್ಲೆಂದರಲ್ಲಿ ಕಾರ್ಖಾನೆಗಳ ತ್ಯಾಜ್ಯದ ರಾಶಿ ಬಿದ್ದಿದ್ದು, ದುರ್ವಾಸನೆಯಿಂದಾಗಿ ರಸ್ತೆ, ಬಡಾವಣೆಗಳು ಗಬ್ಬು ನಾರುತ್ತಿವೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಅಪಾರ ಪ್ರಮಾಣದ ಕೈಗಾರಿಕಾ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನು ನಿಯಮಾನುಸಾರ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು, ಖಾಲಿ ಜಾಗ, ರಸ್ತೆ ಬದಿ, ಹೆದ್ದಾರಿ ಪಕ್ಕ, ಕೆರೆಗಳ ಸಮೀಪ ರಾತ್ರಿ ವೇಳೆ ಸುರಿಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅಧಿಕಾರಿಗಳು, ಸಾರ್ವಜನಿಕರ ಗಮನಕ್ಕೆ ಬಾರದಂತೆ ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ತ್ಯಾಜ್ಯವನ್ನು ತಂದು ನಿರ್ಜನ ಪ್ರದೇಶಗಳಲ್ಲಿ ಸುರಿಯಲಾಗುತ್ತಿದೆ. ಬೆಳಿಗ್ಗೆ ನೋಡಿದಾಗ ದೊಡ್ಡ ಪ್ರಮಾಣದ ತ್ಯಾಜ್ಯದ ರಾಶಿಗಳು ಕಂಡುಬರುತ್ತಿವೆ. ಹಗಲಿನಲ್ಲಿ ಇಲ್ಲದ ತ್ಯಾಜ್ಯ ಬೆಳಗಾಗುವುದರ ಒಳಗೆ ದೊಡ್ಡ ಬೆಟ್ಟದಂತೆ ಕಾಣಿಸುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ದುರ್ವಾಸನೆ: ತ್ಯಾಜ್ಯ ರಾಶಿಗಳಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಬ್ಬು ವಾಸನೆ ಹರಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಗಾಳಿ ಬೀಸುವ ಸಮಯದಲ್ಲಿ ದುರ್ವಾಸನೆ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆರೆಗೂ ಕಂಟಕ: ಕೆರೆಗಳ ಸುತ್ತಮುತ್ತ ತ್ಯಾಜ್ಯ ಸುರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿವೆ. ಕೈಗಾರಿಕಾ ತ್ಯಾಜ್ಯ ಮಳೆ ನೀರಿನೊಂದಿಗೆ ಬೆರೆತು ಕೆರೆಗಳಿಗೆ ಸೇರುತ್ತಿದೆ. ಇದರಿಂದ ಜಲಮೂಲಗಳು ಕಲುಷಿತವಾಗುವ ಭೀತಿ ಎದುರಾಗಿದೆ. ಪರಿಸರದ ಮೇಲೆ ದೀರ್ಘಕಾಲಿಕ ಪರಿಣಾಮ ಉಂಟಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಸಕ್ಕೆ ಬೆಂಕಿ: ಕೆಲವೆಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದು, ದಟ್ಟ ಹೊಗೆ ಆವರಿಸುತ್ತಿದೆ. ಇದರಿಂದ ವಾಯುಮಾಲಿನ್ಯ ಉಂಟಾಗಿದ್ದು, ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ವಾತಾವರಣವೂ ಕಲುಷಿತವಾಗುತ್ತಿದೆ.
ಕ್ರಮಕ್ಕೆ ಒತ್ತಾಯ: ಕೈಗಾರಿಕಾ ಪ್ರದೇಶ ಹಾಗೂ ಹಾರೋಹಳ್ಳಿ ಪಟ್ಟಣದ ಸುತ್ತಮುತ್ತ ತ್ಯಾಜ್ಯ ಸುರಿಯುತ್ತಿರುವ ಸ್ಥಳಗಳನ್ನು ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು. ರಾತ್ರಿ ವೇಳೆ ತ್ಯಾಜ್ಯ ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸಬೇಕು. ನಿಯಮ ಬಾಹಿರವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಖಾನೆಗಳನ್ನು ಗುರುತಿಸಿ, ಪರಿಸರ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯೂ ಮುಖ್ಯ. ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.