ಎಸ್‌ಐಆರ್‌: ಮಹಿಳೆಯರದ್ದೇ ಪ್ರಾಬಲ್ಯ

ಎಸ್‌ಐಆರ್‌: ಮಹಿಳೆಯರದ್ದೇ ಪ್ರಾಬಲ್ಯ

ಎಸ್‌ಐಆರ್‌: ಮಹಿಳೆಯರದ್ದೇ ಪ್ರಾಬಲ್ಯ

ಬೆಂಗಳೂರು: ಶಾಲಾ–ಕಾಲೇಜುಗಳ ಪರೀಕ್ಷಾ ಫಲಿತಾಂಶದಲ್ಲಿ ಬಾಲಕಿಯರು–ಯುವತಿಯರೇ ಮೇಲುಗೈ ಸಾಧಿಸುವಂತೆ, ನಗರದ ಮತದಾರರ ಪಟ್ಟಿಯಲ್ಲೂ ಮಹಿಳೆಯರು ಮೊದಲ ಬಾರಿಗೆ ಪುರುಷರನ್ನು ಮೀರಿಸಿದ್ದಾರೆ.

2025ರ ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು ಮೂರು ಲಕ್ಷ ಪುರುಷ ಮತದಾರರು ಮಹಿಳಾ ಮತದಾರರಿಗಿಂತ ಹೆಚ್ಚಿದ್ದರು. 2026ರ ಆಗಸ್ಟ್‌ 24ರಂದು ಪ್ರಕಟವಾಗಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕರಡು ಪಟ್ಟಿ ಪ್ರಕಾರ, ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಸುಮಾರು ಒಂದೂವರೆ ಲಕ್ಷದಷ್ಟು ಹೆಚ್ಚಿದ್ದಾರೆ.

2026ರ ಜೂನ್ 16ರ ಪ್ರಕಾರ ನಗರದಲ್ಲಿ ಒಟ್ಟಾರೆ 1.03 ಕೋಟಿ ಮತದಾರರಿದ್ದರು. ಎಸ್‌ಐಆರ್‌ ನಂತರ ಶೇ 45.13ರಷ್ಟು ಮತದಾರರು ಪಟ್ಟಿಯಲ್ಲಿ ಉಳಿದಿಲ್ಲ. 28 ವಿಧಾನಸಭೆ ಕ್ಷೇತ್ರಗಳಲ್ಲಿ 85 ವರ್ಷ ಮೀರಿದ 40,307 ಮತದಾರರಿದ್ದರೆ, 100 ವರ್ಷ ದಾಟಿದ 829 ಮತದಾರರಿದ್ದಾರೆ. ಎನ್‌ಆರ್‌ಐ ಮತದಾರರ ಸಂಖ್ಯೆ 442.

18ರಿಂದ 19 ವರ್ಷದೊಳಗಿನ ಯುವ ಮತದಾರರ ಸಂಖ್ಯೆ 34,791ರಷ್ಟಿದ್ದು, ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಇವರ ಸಂಖ್ಯೆ (3,089) ಅತಿ ಹೆಚ್ಚಿದೆ. ಬೆಂಗಳೂರು ದಕ್ಷಿಣದಲ್ಲಿ 2,697, ಮಹದೇವಪುರದಲ್ಲಿ 2,624, ಬ್ಯಾಟರಾಯನಪುರದಲ್ಲಿ 2,313, ಯಲಹಂಕದಲ್ಲಿ 2,191, ಆನೇಕಲ್‌ನಲ್ಲಿ 2,050, ಕೆ.ಆರ್. ಪುರದಲ್ಲಿ2,044 ಯುವ ಮತದಾರರಿದ್ದಾರೆ. ಅತಿಹೆಚ್ಚು ಯುವ ಮತದಾರರು ನಗರದಂಚಿನ ಕ್ಷೇತ್ರಗಳಲ್ಲೇ ಇದ್ದಾರೆ.

ಐದು ಕ್ಷೇತ್ರಗಳಲ್ಲಿ ಶೇ 50ಕ್ಕಿಂತ ಹೆಚ್ಚು ಕಡಿತ:

2026ರ ಜೂನ್‌ 16ರ ಮತದಾರರ ಪಟ್ಟಿಗೆ ಹೋಲಿಸಿದರೆ ಬೊಮ್ಮನಹಳ್ಳಿ, ದಾಸರಹಳ್ಳಿ, ಬಿಟಿಎಂ ಲೇಔಟ್‌, ವಿಜಯನಗರ, ಸಿ.ವಿ. ರಾಮನ್‌ ನಗರದಲ್ಲಿ ಶೇ 50ಕ್ಕಿಂತ ಹೆಚ್ಚು ಮತದಾರರು ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ಇಲ್ಲ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಅಂದಿನ ಮತದಾರರ ಸಂಖ್ಯೆಗನುಗುಣವಾಗಿ ಶೇ 47.50ರಷ್ಟು ಮತದಾನವಾಗಿತ್ತು. ದಾಸರಹಳ್ಳಿಯಲ್ಲಿ ಶೇ 50.26, ಬಿಟಿಎಂ ಲೇಔಟ್‌ನಲ್ಲಿ 49.16, ವಿಜಯನಗರದಲ್ಲಿ 51.97 ಹಾಗೂ ಸಿ.ವಿ. ರಾಮನ್‌ನಗರದಲ್ಲಿ 47.69ರಷ್ಟು ಮತದಾನವಾಗಿತ್ತು.

ಎಸ್ಐಆರ್‌ ಕರಡು ಪಟ್ಟಿಯಂತೆ ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರ, ಗಾಂಧಿನಗರ, ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಅತಿಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ, ಮಹದೇವಪುರ, ಯಶವಂತಪುರ, ಬ್ಯಾಟರಾಯನಪುರ, ಯಲಹಂಕ ವಿಧಾನಸಭೆ ಕ್ಷೇತ್ರಗಳಿವೆ.

28 ವಿಧಾನಸಭೆ ಕ್ಷೇತ್ರಗಳಲ್ಲಿದ್ದ 8,972 ಮತಗಟ್ಟೆಗಳನ್ನು ಪುನರ್‌ ವಿಂಗಡಣೆ ಮಾಡಿ 9,008 ಮತಗಟ್ಟೆಗಳನ್ನು ರಚಿಸಲಾಗಿದೆ.  24.06 ಲಕ್ಷ ಮತದಾರರಿಗೆ ನೋಟಿಸ್‌ ಜಾರಿ ಮಾಡಿದ್ದು, ಅವರು ಅರ್ಹ ದಾಖಲೆಗಳೊಂದಿಗೆ ಮತದಾರರ ನೋಂದಣಾಧಿಕಾರಿ ಸೂಚಿಸಿರುವ ಸಮಯಕ್ಕೆ ವಿಚಾರಣೆಗೆ ಹಾಜರಾಗಬೇಕು. ಯಾವುದೇ ಗೊಂದಲವಿದ್ದರೆ, ಆಕ್ಷೇಪಣೆ ಸಲ್ಲಿಸಬೇಕಾದರೆ 1950, 1800 4255 1950ಗೆ ಕರೆ ಮಾಡಬಹುದು. ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲು ಹಾಗೂ ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಎಸ್‌ಐಆ‌ರ್ ಕರಡು ಪಟ್ಟಿಯಿಂದ ನಗರದಲ್ಲಿ ಶೇ 45ರಷ್ಟು ಮತದಾರರು ಕಡಿಮೆಯಾಗಿರುವುದು ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳನ್ನು ಪುನ‌ರ್ ರಚಿಸುವ ಒತ್ತಾಯಕ್ಕೆ ಮತ್ತಷ್ಟು ಬಲ ನೀಡಿದೆ. 'ತಲಾ 11 ಲಕ್ಷ ಮತದಾರರ ಐದು ನಗರ ಪಾಲಿಕೆಗಳು ಬೇಡ, ಎರಡೇ ಸಾಕು' ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ. ಎಸ್‌ಐಆರ್ ಕರಡು ಪಟ್ಟಿಯ ಅನ್ವಯ, ಈಗಿರುವ ಐದು ನಗರ ಪಾಲಿಕೆಗಳ ಹಲವು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ 10 ಸಾವಿರಕ್ಕಿಂತಲೂ ಕಡಿಮೆಯಾಗುತ್ತದೆ. ಹೀಗಾಗಿ, ಕಾಂಗ್ರೆಸ್‌ನ ಕೆಲವು ಶಾಸಕರೂ ಎರಡು ಪಾಲಿಕೆ ಮಾಡಬೇಕೆಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಗ್ಯಾರಂಟಿಗಳು ನಮ್ಮ ಮತದಾರರಿಗೆ ಮಾತ್ರ ಸಿಗಬೇಕು' ಎಂದು ಡಿ.ಕೆ. ಶಿವಕುಮಾರ್ ಅವರು ಹಲವು ಬಾರಿ ಹೇಳಿದ್ದಾರೆ. 'ಈಗ, ಐದು ಪಾಲಿಕೆಗಳನ್ನು ಜನಸಂಖ್ಯೆ ಆಧಾರಿತವಾಗಿ ರಚಿಸಲಾಗಿದೆ. ಮತದಾರರ ಸಂಖ್ಯೆಗನುಗುಣವಾಗಿ ರಚಿಸಿದರೆ, ಈಗಿನ ಜಿಬಿಎ ವ್ಯಾಪ್ತಿಯಲ್ಲಿ ಎರಡು ಪಾಲಿಕೆಗಳೇ ಸಾಕು' ಎಂದು ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ವಲಸಿಗರೇ ಹೆಚ್ಚು : ರಾಮಲಿಂಗಾರೆಡ್ಡಿ

'ಹಿಂದಿನ ವಿಧಾನಸಭೆ, ಪಾಲಿಕೆ, ಲೋಕಸಭೆ ಚುನಾವಣೆಗಳನ್ನೇ ಉದಾಹರಣೆಗೆ ತೆಗೆದುಕೊಂಡರೆ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ 50ರ ಆಸುಪಾಸಿನಲ್ಲೇ ಇದೆ. ನಗರದಲ್ಲಿ ಹೊರ ರಾಜ್ಯಗಳಿಂದ ಬಂದಿರುವವರ ಪ್ರಮಾಣ ಹೆಚ್ಚಿದೆ. ಕೆಲಸಕ್ಕಾಗಿ ಇಲ್ಲಿಗೆ ಬಂದು ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮತ್ತೆ ಬೇರೆಡೆ ಹೋಗುತ್ತಾರೆ. ಎರಡೂ ಕಡೆ ಮತದಾರರ ಪಟ್ಟಿಯಲ್ಲಿ ಅವರ ಹೆಸರಿರುತ್ತದೆ. ಇನ್ನು ಕೇರಳ, ತಮಿಳುನಾಡು, ಆಂಧ್ರಪ್ರದೇಶದವರು ಇಲ್ಲಿ ನೆಲಸಿದ್ದರೂ ಮತವನ್ನು ಅವರ ಊರುಗಳಿಗೇ ಹೋಗಿ ಹಾಕುತ್ತಾರೆ. ಹೀಗಾಗಿ, ಬಿಟಿಎಂ ಲೇಔಟ್ ಕ್ಷೇತ್ರ ಸೇರಿದಂತೆ ನಗರದಲ್ಲಿ ಎಸ್‌ಐಆ‌ರ್ ಕರಡು ಪಟ್ಟಿಯಲ್ಲಿ ಇಲ್ಲಿನ ಮತದಾರರಷ್ಟೇ ಉಳಿದುಕೊಂಡಿದ್ದಾರೆ. ಆದರೆ, ಆಕ್ಷೇಪಣಾ ಅವಧಿಯಲ್ಲಿ ನೈಜವಾಗಿ ಇಲ್ಲೇ ಇರುವ ನಾಗರಿಕರು ದಾಖಲೆ ಹೊಂದಿದ್ದರೆ ಅವರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬೇಕು' ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ