
‘ಸಾಹಿತ್ಯ ಉತ್ಸವ’: ಜಗತ್ತಿನಿಂದ ಹೆಗ್ಗೋಡಿನೆಡೆಗೆ ನೀನಾಸಂ ಗುರಿ
ಬೆಂಗಳೂರು: ಸ್ಥಳೀಯರೇ ಕಟ್ಟಿ, ಅವರಿಂದಲೇ ಜೀವಿಸುತ್ತಿರುವ, ವಿಸ್ತಾರಗೊಳ್ಳುತ್ತಿರುವ ಸಂಸ್ಥೆ ನೀನಾಸಂ... ಜಗತ್ತನ್ನೇ ತನ್ನ ಒಡಲೊಳಗೆ ಸೇರಿಸಿಕೊಳ್ಳುವ, ಅದರೊಂದಿಗೆ ಅನುಸಂಧಾನಕ್ಕೆ ಇಳಿಯುವ ಹೆಗ್ಗೋಡು... 77 ವರ್ಷ ಪೂರೈಸಿರುವ ಸಂಸ್ಥೆಯೊಂದರ ಮುಂದಿರುವ ಸವಾಲು, ಯುವಕರ, ಸ್ಥಳೀಯರ ಪಾಲ್ಗೊಳ್ಳುವಿಕೆ... ಚರ್ಚೆ ಸಾಗಿದ್ದು ಹೀಗೆ
ಬುಕ್ ಬ್ರಹ್ಮ ಸಂಸ್ಥೆ ಆಯೋಜಿಸಿರುವ ‘ಸಾಹಿತ್ಯ ಉತ್ಸವ’ದಲ್ಲಿ ‘ಹೆಗ್ಗೋಡಿನಿಂದ ಜಗತ್ತಿನೆಡೆಗೆ: ಗ್ರಾಮವೊಂದನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ನೋಡುವ ಹೊಸ ಕಲ್ಪನೆ’ ಗೋಷ್ಠಿಯಲ್ಲಿ ಚಿಂತಕ ಅಕ್ಷರ ಕೆ.ವಿ., ವಿಮರ್ಶಕ ಟಿ.ಪಿ. ಅಶೋಕ ಮತ್ತು ನಟಿ ಪ್ರಜ್ಞಾ ನೀಲಗುಂದ್ ಶಾಂತಿನಾಥ ಭಾಗವಹಿಸಿದ್ದರು. ಎಂ.ಎಸ್. ಶ್ರೀರಾಮ್, ಗೋಷ್ಠಿ ನಿರ್ವಹಿಸಿದರು.
‘ಎನ್‌ಎಸ್‌ಡಿ, ರಂಗಾಯಣ ರೀತಿಯಲ್ಲಿ ನೀನಾಸಂ ಅನ್ನು ಸರ್ಕಾರ ಹುಟ್ಟುಹಾಕಿಲ್ಲ. ಸ್ಥಳೀಯರೇ ಕಟ್ಟಿ, ಅವರ ಭಾಗವಹಿಸುವಿಕೆ ಮತ್ತು ಸಹಕಾರದಿಂದಲೇ ಇಷ್ಟೊಂದು ಸುದೀರ್ಘ ಸಮಯದವರೆಗೆ ಸಂಸ್ಥೆ ಮುಂದುವರಿದಿದೆ ಮತ್ತು ಮುಂದುವರಿಯುತ್ತಲೇ ಇದೆ. ಈ ಶಕ್ತಿ ರಾಜ್ಯದ ಬೇರೆ ಯಾವ ಸಂಸ್ಥೆಗೂ ಇಲ್ಲ’ ಎಂದು ಟಿ.ಪಿ. ಅಶೋಕ ಹೇಳಿದರು.
ಸ್ಥಳೀಯರು ಮತ್ತು ಜಗತ್ತು: ಪ್ರಶ್ನೆ–ಉತ್ತರ ‘
ಸಂಸ್ಥೆಯು ಸ್ಥಳೀಯರಿಗಾಗಿ ಎಂದು ನೀವು ಕೇಳಿದ್ದೀರಿ. ನೀವು ಜಗತ್ತನ್ನು ಹೆಗ್ಗೋಡಿಗೆ ತರುತ್ತಿದ್ದೀರಿ ಎಂದಿರಿ. ನಿಮ್ಮ ವಿದ್ಯಾರ್ಥಿಗಳು ಹೊರಗಿನವರು ಸಂಸ್ಕೃತಿ ಶಿಬಿರದಲ್ಲಿ ನೋಂದಾಯಿಸಿಕೊಳ್ಳುವವರು ಹೊರಗಿನವರು. ಅದು ಹೇಗೆ ಸ್ಥಳೀಯರ ಒಳಗೊಳ್ಳುವಿಕೆಯಾಯಿತು’ ಎಂಬ ಪ್ರಶ್ನೆಯನ್ನು ಶ್ರೀರಾಮ್ ಮುಂದಿಟ್ಟರು.
‘ಜಗತ್ತಿನ ವಿಚಾರಗಳು ಹೆಗ್ಗೋಡಿಗೆ ತರುವ ಪ್ರಕ್ರಿಯೆಯಲ್ಲಿ ಸ್ಥಳೀಯರು ಕೂಡ ಬೆಳವಣಿಗೆಯಾಗಬೇಕು. ಇಲ್ಲವಾದಲ್ಲಿ ಒಬ್ಬರು ಹೇಳುವವರು ಇನ್ನೊಬ್ಬರು ಕೇಳುವವರು ಎಂದಾಗುತ್ತದೆ. ಹೊರಗಿನವರನ್ನು ಒಳಗೊಳ್ಳುತ್ತಾ ಸ್ಥಳೀಯರು ಗ್ಲೋಬಲ್ ಆಗಬೇಕು. ಇದನ್ನು ನಾವು ಮಾಡಿದ್ದೇವೆ. ಜಗತ್ತಿನ ಬೇರೆ ಊರಿನವರೂ ವಿಡಿಯೊ ಮೂಲಕ ನಮ್ಮ ಊರನ್ನು ತಲುಪುತ್ತಿದ್ದಾರೆ’ ಎಂದರು ಅಕ್ಷರ.
‘ಯುವಜರನ್ನು ತೊಡಗಿಸಿಕೊಳ್ಳುವ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸುವತ್ತ ನಿಮ್ಮ ಯೋಜನೆಗಳೇನು’ ಎಂದು ಶ್ರೀರಾಮ್ ಪ್ರಶ್ನಿಸಿದರು. ಅಕ್ಷರ ಅವರು ಉತ್ತರಿಸಿ ‘ಇಂಥ ಹೊಸ ವಾಸ್ತವಗಳ (ಡಿಜಿಟಲ್) ಬಗ್ಗೆ ಕೆಲಸ ಮಾಡುವ ಅಗತ್ಯ ಖಂಡಿತ ಇದೆ. ನಮಗೆ ಮಿತಿಗಳಿವೆ. ಸರ್ಕಾರದಿಂದ ಅಥವಾ ಸಿಎಸ್‌ಆರ್‌ನಿಂದ ನಮಗೆ ಬರುವ ಅನುದಾನ ಕಡಿಮೆ. ಮಾನವ ಸಂಪನ್ಮೂಲವೂ ಕಡಿಮೆ ಇದೆ. ನಮ್ಮಲ್ಲಿಯೇ ಕಲಿತವರು ಮುಂದಿನ ಪೀಳಿಗೆಯು ಈ ಎಲ್ಲ ಸವಾಲುಗಳನ್ನು ಎದುರಿಸಬೇಕು’ ಎಂದರು.