ಚಿಕ್ಕಮಗಳೂರು: ಬಿಸಿಲು ಮಳೆಯಾಟ; ಕಾಫಿಗೆ ರೋಗದ ಕಾಟ

ಚಿಕ್ಕಮಗಳೂರು: ಬಿಸಿಲು ಮಳೆಯಾಟ; ಕಾಫಿಗೆ ರೋಗದ ಕಾಟ

ಚಿಕ್ಕಮಗಳೂರು: ಬಿಸಿಲು ಮಳೆಯಾಟ; ಕಾಫಿಗೆ ರೋಗದ ಕಾಟ

ಚಿಕ್ಕಮಗಳೂರು: ಜೂನ್ ಮತ್ತು ಜುಲೈನಲ್ಲಿ ನಿರಂತರವಾಗಿ ಮಳೆ ಸುರಿಯುವ ಬದಲು ಬಿಸಿಲಿನ ನಡುವೆ ಆಗಾಗ ಬಂದ ಮಳೆಯಿಂದ ಕಾಫಿ ಬೆಳೆ ಹಲವು ರೀತಿಯ ತೊಂದರೆಗೆ ಸಿಲಕಿದ್ದು, ಬೆಳೆಗಾರರು ಪರದಾಡುವಂತಾಗಿದೆ.

ಸಾಮಾನ್ಯವಾಗಿ ಮಾರ್ಚ್‌ ಅಥವಾ ಏಪ್ರಿಲ್ ತಿಂಗಳಿನಲ್ಲಿ ಮೊದಲ ಮಳೆ ಬೀಳುತ್ತಿತ್ತು. ಮಳೆ ಬಿದ್ದ ಕೂಡಲೇ ಕಾಫಿ ಗಿಡದಲ್ಲಿ ಹೂವು ಬಿಡಲಾರಂಭಿಸುತ್ತಿತ್ತು. ಆದರೆ, ಈ ಬಾರಿ ಹಲವೆಡೆ ಜನವರಿ ಮತ್ತು ಫೆಬ್ರುವರಿಯಲ್ಲೇ ಮಳೆ ಬಿದ್ದಿದ್ದರಿಂದ ಬೇಗನೆ ಹೂವು ಅರಳಿದವು. ಆ ಗಿಡಗಳಲ್ಲಿ ಈಗ ಕಾಫಿ ಕಾಯಿ ಹಣ್ಣಾಗಿ ಉದುರುತ್ತಿವೆ.

ಇನ್ನು ಜೂನ್‌ನಲ್ಲಿ ಆರಂಭವಾಗಿದ್ದ ಮುಂಗಾರು ಮಳೆ ಕೂಡ ಕೈಕೊಟ್ಟಿತು. ನಿರಂತರವಾಗಿ ಮಳೆ ಸುರಿದು ಶೀತದ ವಾತಾವರಣ ಇದ್ದಿದ್ದರೆ ಕಾಫಿ ಕಾಯಿ ಬಲಿತು ಹಣ್ಣಾಗಲು ಸಮಯ ಬೇಕಾಗುತ್ತಿತ್ತು. ಅದರೆ, ಈ ವರ್ಷ ಮಳೆ ಬಂದ ನಿಂತ ಕೂಡಲೇ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಕಾಪಿ ಹಣ್ಣಾಗುತ್ತಿದ್ದು, ಗಾಳಿಯ ರಭಸಕ್ಕೆ ಉದುರಿ ನೆಲ ಕಚ್ಚುತ್ತಿದೆ.

ಮಳೆ ಮತ್ತು ಬಿಸಿಲು ಒಟ್ಟಿಗೆ ಬರುತ್ತಿದ್ದು, ಕಾಫಿ ಗೊಂಚಲುಗಳ ಸಹಿತ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ರೀತಿ ಹಾಳಾಗಿರುವ ಕಾಫಿ ಗಿಡಗಳೂ ಬಹುತೇಕ ಎಲ್ಲಾ ತೋಟಗಳಲ್ಲಿ ಕಾಣಿಸುತ್ತಿವೆ. ಇದೇ ರೀತಿಯಾದರೆ ಈ ವರ್ಷ ಕಾಫಿ ಫಸಲು ಕೈಸೇರುವುದು ಕಷ್ಟ ಎಂದು ಬೆಳೆಗಾರರು ಹೇಳುತ್ತಾರೆ. ಜೋರು ಮಳೆ ಬರದಿದ್ದರೂ ಸಣ್ಣದಾಗಿ ಮಳೆ ಇತ್ತು. ಇದರಿಂದಾಗಿಯೂ ಭೂಮಿಯಲ್ಲಿ ನೀರು ಚೆನ್ನಾಗಿ ಇಂಗಿದೆ. ಇದರಿಂದಲೂ ಕಾಫಿ ಮೂರು ತಿಂಗಳು ಮೊದಲೇ ಹಣ್ಣಾಯಿತು. ಈಗ ಶೀತಕ್ಕೆ ನೆಲಕ್ಕೆ ಉದುರುತ್ತಿದ್ದು, ಫಸಲು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮೂಡಿಗೆರೆ ತಾಲ್ಲೂಕಿನ ಅತ್ತಿಗೆರೆ ಗ್ರಾಮದ ಬೆಳೆಗಾರ ಸತೀಶ್ ಹೇಳುತ್ತಾರೆ. ಜಾಗತಿಕ ತಾಪಮಾನದಿಂದ ಮಳೆ ಏರುಪೇರಾಗುತ್ತಿದೆ. ಇದರ ಪರಿಣಾಮವಾಗಿ ಕಾಫಿ ಬೆಳೆ ಕಷ್ಟಕ್ಕೆ ಸಿಲುಕುತ್ತಿದೆ ಎಂಬುದು ಬೆಳೆಗಾರರ ಅಭಿಪ್ರಾಯ.

ಮಳೆ ಕಡಿಮೆಯಾಗಿ ಬಿಸಿಲು ಬಂದ ಕೂಡಲೇ ಉಷ್ಣಾಂಶ ಹೆಚ್ಚಾಗಿ ಹಣ್ಣಾಗುತ್ತಿದೆ. ಒಮ್ಮೆ ಶೀತ ಮತ್ತೊಮ್ಮೆ ಉಷ್ಣಾಂಶ ಕಾಣಿಸಿಕೊಳ್ಳುತ್ತಿರುವುದರಿಂದ ಕಾಫಿ ಫಸಲು ಉಳಿಸುವುದು ಬೆಳೆಗಾರರಿಗೆ ಸವಾಲಾಗಿದೆ ಎಂದು ಹೇಳುತ್ತಾರೆ.

ಕೊಳೆರೋಗ ವಿಪರೀತ: ಬೆಳೆಗಾರರಿಗೆ ಸಂಕಷ್ಟ

ಗುಡ್ಡಗಾಡು ಪ್ರದೇಶದ ಕಾಫಿ ತೋಟಗಳಲ್ಲಿ ಫಸಲೇ ಇಲ್ಲವಾಗುತ್ತಿದೆ. ಕೊಳೆರೋಗ ವಿಪರೀತವಾಗಿ ಕಾಡುತ್ತಿದ್ದು, ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳಿದರು.

ಜೂನ್ ಮತ್ತು ಜುಲೈನಲ್ಲಿ ಸಾಮಾನ್ಯವಾಗಿ ಮಳೆ ಇರುತ್ತದೆ. ಆದರೆ, ಈ ಬಾರಿ ಮಳೆ ಬಿಡುವು ನೀಡಿ ಬಿಸಿಲಿನ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಈಗ ಕಳೆದ ವಾರ ಏಕಾಏಕಿ ನಿಂತರ ಮಳೆ ಸುರಿಯಿತು. ವಾತಾವರಣ ಬದಲಾಗಿದ್ದರಿಂದ ಕಾಫಿ ಗಿಡದಲ್ಲಿ ಕಾಯಿಲೆ ಜಾಸ್ತಿಯಾಗುತ್ತಿದೆ ಎಂದರು.

ಜೋರು ಮಳೆಯಾದ ಕೂಡಲೇ ಕಾಫಿ ಉದುರಲು ಆರಂಭಿಸಿದೆ. ವಾಡಿಕೆಗಿಂತ ಕಡಿಮೆ ಮಳೆ ಇದ್ದರೂ ಕಾಫಿ ಹಣ್ಣು ಉದುರಲು ಆರಂಭಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಇನ್ನು ಗುಡ್ಡಗಾಡು ಪ್ರದೇಶದ ತೋಟಗಳಿಗೆ ಮಂಜಿನ ಹಾವಳಿಯೇ ಜಾಸ್ತಿ. ಮಂಜಿನ ನಡುವೆ ಶೀತ ಹೆಚ್ಚಾಗಿಯೂ ಕಾಫಿಗೆ ಕೊಳೆ ರೋಗ ಹೆಚ್ಚಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಿಯಂತ್ರಣಕ್ಕೆ ಬಾರದ ಕೊಳೆರೋಗ

ಮಳೆಯಿಂದಾಗಿ ಶೃಂಗೇರಿ, ಕೊಟ್ಟಿಗೆಹಾರ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಫಿ ಗಿಡದಲ್ಲೇ ಕಪ್ಪಾಗಿ ಕೊಳೆರೋಗ ಕಾಣಿಸಿಕೊಂಡಿದೆ ಎಂದು ಬಾಳೆಹೊನ್ನೂರು ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್. ಸುಂದರೇಶ್ ಹೇಳಿದರು. ಶೃಂಗೇರಿ ಬಳಿ ಕಾಫಿ ಸಂಶೋಧನಾ ಕೇಂದ್ರ ಸಲಹೆ ಮಾಡಿದ ಎಲ್ಲಾ ಔಷಧಿಗಳನ್ನು ಸ್ಪ್ರೇ ಮಾಡಿದರೂ ಕೊಳೆರೋಗ ನಿಯಂತ್ರಣಕ್ಕೆ ಬಂದಿಲ್ಲ. ಅಲ್ಲಿ ಕೊಳೆಯ ಜೊತೆಗೆ ಕಾಫಿ ಗಿಡದ ಎಲೆಗಳೂ ಉದುರಿ ಹೋಗಿವೆ. ಬಾಳೆಹೊನ್ನೂರು ಸುತ್ತಮುತ್ತ ಮಳೆಯಿಂದಾಗಿ ಯಾವುದೇ ಅನಾನುಕೂಲ ಕಂಡು ಬಂದಿಲ್ಲ ಎಂದರು.

ಕಳಸ ತಾಲೂಕಿನಲ್ಲಿ ಈ ವರ್ಷ ಮಳೆ ಕಡಿಮೆ ಇದ್ದರೂ ಕಾಫಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಶೇ 50ಕ್ಕಿಂತ ಕಡಿಮೆ ಆದಾಗ ಬೆಳೆಗಾರರು ಈ ವರ್ಷ ಕಾಫಿ ಫಸಲು ಬಂಪರ್ ಎಂದು ಊಹಿಸಿದ್ದರು. ಆದರೆ, ಆಗಸ್ಟ್ ಮೊದಲ ವಾರ ಒಂದೇ ಸಮನೆ ಸುರಿದ ಮಳೆ ಕಾಫಿ ಗಿಡಕ್ಕೆ ಕೊಳೆರೋಗ ತಂದಿದೆ. ಇದರಿಂದ ಈಗಾಗಲೇ ಬಹುತೇಕ ತೋಟಗಳಲ್ಲಿ ಶೇ 15ರಿಂದ 20ರಷ್ಟು ಫಸಲು ನಷ್ಟವಾಗಿದೆ. ಕಾಫಿ ಫಸಲು ಉಳಿಸಿಕೊಳ್ಳಲು ಬೆಳೆಗಾರರು ಗೊಬ್ಬರ ಹಾಕಿ ಮತ್ತು ಔಷಧಿ ಸಿಂಪರಣೆ ಕೆಲಸ ಮಾಡುತ್ತಿದ್ದಾರೆ. ಕಾಫಿ ಬೆಲೆ ಉತ್ತಮವಾಗಿದ್ದು, ಹವಾಮಾನ ವೈಪರೀತ್ಯದ ನಡುವೆ ಫಸಲು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಅಕಾಲಿಕವಾಗಿ ಕಾಫಿ ಹಣ್ಣಾಗುತ್ತಿರುವುದು ಕೊಯ್ಲು ಮಾಡಿ ಒಣಗಿಸಲು ಇದು ಸಕಾಲವಲ್ಲ. ಆದ್ದರಿಂದ ಫಸಲು ಕೈಸೇರುವುದು ಕಷ್ಟ ಎಂದು ಬೆಳೆಗಾರರು ಹೇಳುತ್ತಾರೆ.

ಈಗ ಕಾಫಿ ಕೊಯ್ಲಿಗೆ ಕಾರ್ಮಿಕರು ಸಿಗುವುದಿಲ್ಲ. ಸಿಕ್ಕರೂ ಮಳೆಯಲ್ಲಿ ಕೊಯ್ಲು ಮಾಡುವುದು ಕಷ್ಟ. ನಂತರ ಹಣ್ಣು ತಂದು ಒಣಗಿಸಲು ಆಗುವುದಿಲ್ಲ. ಒಣಗದಿದ್ದರೆ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುತ್ತವೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಾರೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಣ್ಣು ಕೊಯ್ದರೆ ಬಿಸಿಲಿನಲ್ಲಿ ಸುಲಭವಾಗಿ ಒಣಗಿಸಲು ಅವಕಾಶ ಇದೆ. ಈಗ ಮಳೆಗಾಲದಲ್ಲಿ ಕಾಫಿ ಹಣ್ಣು ಒಣಗಿಸಲು ಯಂತ್ರಗಳು ಸಾಮಾನ್ಯ ಬೆಳೆಗಾರರ ಬಳಿ ಇಲ್ಲ. ಆದ್ದರಿಂದ ಕಾಫಿ ಹಣ್ಣು ಮಣ್ಣು ಪಾಲಾಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳುತ್ತಾರೆ.

ಪೂರಕ ಮಾಹಿತಿ: ರವಿ ಕೆಳಂಗಡಿ, ಸತೀಶ್ ಜೈನ್

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ