
ಕಲಬುರಗಿ: ಸ್ಥಳೀಯರಿಗೆ ರಸ್ತೆ ಕಾಮಗಾರಿ ‘ಸಂಕಷ್ಟ’
ಕಲಬುರಗಿ: ಅಗೆದ ರಸ್ತೆಯಲ್ಲಿ ನಿಂತಿರುವ ಚರಂಡಿ ನೀರು, ಮೂಗು ಮುಚ್ಚಿಕೊಂಡು ದಿನ ಕಳೆಯುತ್ತಿರುವ ಜನರು, ಸಾಂಕ್ರಾಮಿಕ ರೋಗಗಳ ಭೀತಿ, ಜೀವ ಭಯದಲ್ಲಿ ಬೈಕ್ ಓಡಿಸುವ ಸವಾರರು... ಹೀಗೆ ಹಲವು ಸಮಸ್ಯೆಗಳಿಂದ ನಗರದ ಪಿ ಆಂಡ್ ಟಿ ಕಾಲೊನಿ ಜನ ನರಳುತ್ತಿದ್ದಾರೆ.
ನಗರದ ವಾರ್ಡ್ ನಂ.54ರಲ್ಲಿನ ಗಾಣದೇವತೆ ದೇವಸ್ಥಾನದಿಂದ ಪಿ ಅಂಡ್ ಟಿ ಕಾಲೊನಿವರೆಗೆ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಯು ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಅಗೆದು ಹಾಕಲಾದ ರಸ್ತೆ ಈಗ ಸ್ಥಳೀಯ ನಿವಾಸಿಗಳ ಪಾಲಿಗೆ ನಿತ್ಯ ನರಕವನ್ನು ಸೃಷ್ಟಿಸಿದೆ.
ಕಳೆದ ಜೂನ್ ತಿಂಗಳಿನಲ್ಲಿ ರಸ್ತೆ ನಿರ್ಮಾಣಕ್ಕಾಗಿ ಪಾಲಿಕೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸದೆ ರಸ್ತೆಯನ್ನು ಅಗೆದು ಹಾಕಿದ್ದಾರೆ. ಇದರಿಂದಾಗಿ ಒಳಚರಂಡಿ ಪೈಪ್‌ಲೈನ್ ಹಾನಿಗೊಳಗಾಗಿದ್ದು, ಚರಂಡಿ ನೀರು ನೇರವಾಗಿ ರಸ್ತೆಯ ಮೇಲೆ ಹರಿಯುತ್ತಿದೆ.
ನಿಂತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕುಡಿಯುವ ನೀರಿನಲ್ಲಿಯೂ ಕಲುಷಿತ ನೀರು ಬರುತ್ತಿದೆ. ಇಡೀ ಕಾಲೊನಿಯಲ್ಲಿ ದುರ್ನಾತ ಬೀರುತ್ತಿದೆ. ಮನೆಗಳ ಬಾಗಿಲು–ಕಿಟಕಿಗಳನ್ನು ತೆರೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿ ನಿವಾಸಿಗಳು ದಿನ ದೂಡುತ್ತಿದ್ದಾರೆ. ಬೈಕ್ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ನಿಂತಿರುವ ಕಲುಷಿತ ನೀರಿನಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಡೆಂಗಿ, ಮಲೇರಿಯಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ವೃದ್ಧರು ಮತ್ತು ಮಕ್ಕಳ ಆರೋಗ್ಯದ ಮೇಲು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬಡಾವಣೆಯ ಕೆಲ ನಿವಾಸಿಗಳು ಕಳವಳ ವ್ಯಕ್ತಪಡಿಸಿದರು.
ರಸ್ತೆಯುದ್ದಕ್ಕೂ ತಗ್ಗು ದಿನ್ನೆಗಳು ನಿರ್ಮಾಣವಾಗಿದ್ದು, ಕೆಸರು ತುಂಬಿಕೊಂಡಿದೆ. ಒಂದೆಡೆ ರಸ್ತೆ ಅಗೆದಿರುವ ಕಾರಣ, ರಸ್ತೆ ಕಿರಿದಾಗಿದ್ದು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿದೆ. ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ಪಾದಚಾರಿಗಳು ನಿತ್ಯ ಪರದಾಡುವಂತಾಗಿದೆ’ ಎನ್ನುತ್ತಾರೆ ಸ್ಥಳೀಯರು.
ನಿರ್ಲಕ್ಷ್ಯ: ಸಾರ್ವಜನಿಕರ ಅಸಮಾಧಾನ
‘ರಸ್ತೆ ಅಭಿವೃದ್ಧಿ ಮಾಡುತ್ತಿರುವುದು ಸಂತೋಷದ ವಿಷಯ. ಆದರೆ, ರಸ್ತೆ ಅಗೆದು ಹೀಗೆ ಬಿಟ್ಟಿರುವುದು ಎಷ್ಟು ಸರಿ. ದಿನಪೂರ್ತಿ ಮುಗು ಮುಚ್ಚಿಕೊಂಡೇ ಬದುಕಬೇಕಾದ ಸ್ಥಿತಿ ಬಂದಿದೆ. ರಸ್ತೆ ಇಲ್ಲದಿದ್ದಾಗಲೇ ಚನ್ನಾಗಿದ್ದೆವು, ಯಾಕಾದ್ರು ರಸ್ತೆ ಕಾಮಗಾರಿಗಾಗಿ ಅಗೆದರೋ ಎನ್ನುವಂತಾಗಿದೆ’ ಎಂದು ನಿವಾಸಿ ಪ್ರತಿಭಾ ದೇಶಮುಖ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.
‘ಕಾಮಗಾರಿ ಆರಂಭಿಸುವ ಮೊದಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದ್ದ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಹಾರಿಕೆ ಉತ್ತರ ನೀಡಿ ಸುಮ್ಮನಾಗುತ್ತಾರೆ. ಬಡಾವಣೆ ನಿವಾಸಿಗಳು ಮಾತ್ರ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ’
‘ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನಿಂತಿರುವ ಕಲುಷಿತ ನೀರನ್ನು ತೆರವುಗೊಳಿಸಬೇಕು, ಹಾನಿಗೊಳಗಾದ ಯುಜಿಡಿ ಲೈನ್ ದುರಸ್ತಿಪಡಿಸಿ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಗೆ ನೀಡಿದರು.