
ಬಿಡದಿ ಟೌನ್‌ಶಿಪ್: ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಪಾದಯಾತ್ರೆ ಎಂದ ಎಚ್‌ಡಿಕೆ
ರಾಮನಗರ: ‘ಫಲವತ್ತಾದ ಭೂಮಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ವಿರೋಧಿಸಿ ನಾವು ಹಮ್ಮಿಕೊಂಡಿರುವ ಈ ಪಾದಯಾತ್ರೆಯು ಬ್ರಹ್ಮಾಂಡ ಭ್ರಷ್ಟಾಚಾರದ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವುದಕ್ಕೆ ಅಡಿಪಾಯವಾಗಲಿದೆ. ಸರ್ಕಾರದ ಪಾಲಿಗೆ ಇದೇ ಮರಣಶಾಸನವಾಗಲಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಯೋಜನೆ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಪಕ್ಷದಿಂದ ಹಮ್ಮಿಕೊಂಡಿರುವ 3 ದಿನಗಳ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ನನಗೆ ರಾಜಕೀಯವಾಗಿ ಜನ್ಮ ನೀಡಿದ ಜಿಲ್ಲೆಯಲ್ಲಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಭೂಮಿ ಕಿತ್ತುಕೊಳ್ಳುವುದನ್ನು ನಾನು ಬಿಡುವುದಿಲ್ಲ’ ಎಂದರು.
‘2006-07ರಲ್ಲಿ ನಾನು ಸಿ.ಎಂ ಆಗಿದ್ದಾಗ ಮತ್ತು ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಡದಿ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿಲ್ಲ. ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಕೊಡುತ್ತೇವೆ ಎಂದಿದ್ದಾರೆ. ಜನರ ಭೂಮಿ ಲೂಟಿ ಹೊಡೆದಿರುವವ ಈ ಮಾತನ್ನು ನಂಬಬೇಕೇ?’ ಎಂದು ವ್ಯಂಗ್ಯವಾಡಿದರು.
‘ನೈಸ್ (ಬಿಎಂಐಸಿ) ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು 30 ವರ್ಷವಾದರೂ ಭೂಮಿ ಕಳೆದುಕೊಂಡವರಿಗೆ ಪರಿಹಾರ ಮತ್ತು ನಿವೇಶನ ಕೊಟ್ಟಿಲ್ಲ. ಟೌನ್‌ಶಿಪ್‌ಗೆ ಗುಂಟೆ ಲೆಕ್ಕದಲ್ಲಿ ಪರಿಹಾರ ಕೊಟ್ಟು ಗಿಮಿಕ್ ಮಾಡುತ್ತಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಟೌನ್‌ಶಿಪ್ ಯೋಜನೆ ಹಾಗೂ ನೈಸ್ ಯೋಜನೆಗಳು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಹೇಳಿದರು.
ಸರ್ಕಾರಕ್ಕೆ ಕೊನೆ ಮೊಳೆ: ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ‘ಪಾದಯಾತ್ರೆಯು ಕಾಂಗ್ರೆಸ್ ಸರ್ಕಾರದ ಶವಪೆಟ್ಟಿಗೆಗೆ ಕೊನೆ ಮೊಳೆಯಾಗಿದೆ. ಕಾಂಗ್ರೆಸ್ ಇನ್ನಾದರೂ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಶಿವಕುಮಾರ್ ಅಧಿಕಾರದ ಮದವನ್ನು ಮುಂದಿನ ಚುನಾವಣೆಯಲ್ಲಿ ಜನ ಇಳಿಸಲಿದ್ದಾರೆ. ಯೋಜನೆ ವಿರುದ್ಧ ನಾವು ವಿಧಾನಸಭೆ ಅಧಿವೇಶನದಲ್ಲಿ ಹೋರಾಡುತ್ತೇವೆ’ ಎಂದರು.
ಮಾಜಿ ಶಾಸಕ ಎ. ಮಂಜುನಾಥ್ ಮಾತನಾಡಿ, ‘ಈ ಪಾದಯಾತ್ರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶವಯಾತ್ರೆಯಾಗಲಿದೆ. ಇಲ್ಲಿನ ಶಾಸಕರೂ ಆದ ಸಚಿವ ಬಾಲಕೃಷ್ಣ ಬೈರಮಂಗಲಕ್ಕೆ ಬಂದು 516 ದಿನಗಳಾಗಿವೆ. ಅವರಿಗೆ ಮತ ಕೊಟ್ಟು ಗೆಲ್ಲಿಸಿದ ಪಾಪಕ್ಕೆ ರೈತರು ಪ್ರಾಯಶ್ಚಿತ್ತ ಪಾದಯಾತ್ರೆ ಮಾಡಬೇಕಿದೆ. ಯೋಜನೆಯನ್ನು ಆರಂಭದಲ್ಲೇ ರೈತರು ಮತ್ತು ಕಾಂಗ್ರೆಸ್ ವಿರೋಧಿಸಿದ್ದರಿಂದ ಕುಮಾರಸ್ವಾಮಿ ಅವರು ಕೈ ಬಿಟ್ಟರು. ಆ ನೈತಿಕ ಬಲದಿಂದಲೇ ಇಂದು ಈ ಹೋರಾಟಕ್ಕೆ ನಿಂತಿದ್ದಾರೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಪಾದಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ರಾಜ್ಯದ ವಿವಿಧ ಭಾಗಗಳಿಂದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬಸ್ಸು ಸೇರಿದಂತೆ ವಾಹನಗಳಲ್ಲಿ ಮಹಿಳೆಯರಾದಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೈರಮಂಗಲದತ್ತ ಬಂದರು. ಬೈರಮಂಗಲದಲ್ಲಿ ಉಪಾಹಾರ ಹಾಗೂ ಮಾರ್ಗಮಧ್ಯೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚನ ಜನರಿಂದಾಗಿ ಬಿಡದಿ ಕೈಗಾರಿಕಾ ಪ್ರದೇಶದಿಂದಲೇ ಸಂಚಾರ ದಟ್ಟಣೆ ಶುರುವಾಗಿತ್ತು. ಪೊಲೀಸರು ವಾಹನಗಳ ಸಂಚಾರ ಮಾರ್ಗ ಬದಲಿಸಿ, ಅಲ್ಲಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ದಟ್ಟಣೆ ತಪ್ಪಿಸಿದರು. ಪಾದಯಾತ್ರೆ ಮುಗಿಯುವರೆಗೆ ಮಾರ್ಗದುದ್ದಕ್ಕೂ ದಟ್ಟಣೆಯಿಂದಾಗಿ ಜನ ತೊಂದರೆ ಅನುಭವಿಸಿದರು.
ಬಾಲಕೃಷ್ಣ ವಿರುದ್ಧ ಎಚ್‌ಡಿಕೆ ಕಿಡಿ
‘ಇಂದು ಸಚಿವರಾಗಿರುವ ನನ್ನ ಹಳೆಯ ಸ್ನೇಹಿತ ಬಾಲಕೃಷ್ಣ ಹೆಂಡದ ಅಂಗಡಿಯಲ್ಲಿ ಕುಳಿತವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ನಾನು ಮತ್ತು ಅಶೋಕ ಕಾಣದ ಮಂತ್ರಿಗಿರಿಯನ್ನು ಅವರು ಕಂಡಂತಿದ್ದಾರೆ. ಮಾತನಾಡುವುದಕ್ಕೆ ಮುಂಚೆ ವಿಷಯ ತಿಳಿದುಕೊಳ್ಳಬೇಕು. ಹಿಂದೆ ನೇಮಿಸಿದ್ದ ಸತ್ಯಶೋಧನ ಸಮಿತಿಯಲ್ಲಿದ್ದ ಇದೇ ಬಾಲಕೃಷ್ಣ ಸಹ ವರದಿಗೆ ಸಹಿ ಹಾಕಿದ್ದರು. ಒಮ್ಮೆ ಬಿಜೆಪಿಯಲ್ಲಿ, ನಂತರ ಜೆಡಿಎಸ್‌ನಲ್ಲಿ 3 ಸಲ ಹಾಗೂ ಈಗ ಕಾಂಗ್ರೆಸ್‌ನಲ್ಲಿ ಒಮ್ಮೆ ಗೆದ್ದಿರುವ ಅವರಿಗೆ ನಮ್ಮ ಮಾತನಾಡುವ ಯೋಗ್ಯತೆ ಇಲ್ಲ’ ಎಂದು ಕುಮಾರಸ್ವಾಮಿ ಕಿಡಿಕಾರಿದರು.
₹3 ಕೋಟಿ ಪರಿಹಾರದ ಗೊಂದಲ!
‘ಪಾದಯಾತ್ರೆ ಬೆನ್ನಲ್ಲೇ ವಿಡಿಯೊ ಹರಿಬಿಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೂಮಿ ಕೊಟ್ಟವರಿಗೆ ₹3 ಕೋಟಿ ಪರಿಹಾರ ಕೊಡುತ್ತೇವೆ’ ಎಂದು ಪ್ರಸ್ತಾಪಿಸಿರುವುದು ಗೊಂದಲ ಸೃಷ್ಟಿಸಿದೆ. ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಎಚ್.ಡಿ. ಕುಮಾರಸ್ವಾಮಿ, ‘ಇದುರೆಗೂ ಎಕರೆಗೆ ₹2 ಕೋಟಿ ಕೊಡುವುದಾಗಿ ಹೇಳುತ್ತಿದ್ದವರು, ಬೆಳಿಗ್ಗೆ ವಿಡಿಯೊ ಮಾಡಿ ಒಂದು ಎಕರೆಗೆ ₹3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ರೈತರು ಮರುಳಾಗಬೇಡಿ. ಈ ಶಿವಕುಮಾರ್ ನಿಮಗೆ ಮೋಸ ಮಾಡುತ್ತಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.
ಸಿ.ಎಂ ಮಾತು ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜು ಗಾಣಕಲ್, ‘ಭೂ ಸ್ವಾಧೀನಕ್ಕೆ ಪ್ರತಿ ಎಕರೆಗೆ ಈಗಾಗಲೇ ಕನಿಷ್ಠ₹2.07 ಕೋಟಿಯಿಂದ ಗರಿಷ್ಠ ₹2.55 ಕೋಟಿ ಪರಿಹಾರ ನಿಗದಿಯಾಗಿದೆ. ಗರಿಷ್ಠ ನಿಗದಿಯಾಗಿರುವ ಬೈರಮಂಗಲ ಸೇರಿದಂತೆ ಕೆಲವೆಡೆ ಜಮೀನಿನಲ್ಲಿರುವ ಮರಮಾಲ್ಕಿ, ಬೆಳೆ ಸೇರಿದಂತೆ ಇತರ ಮೌಲ್ಯಯುತ ಆಸ್ತಿಗಳ ಜೆಎಂಸಿ ಮಾಡಿದಾಗ ಎಲ್ಲಾ ಸೇರಿ ರೈತರಿಗೆ ಸುಮಾರು ₹3 ಕೋಟಿವರೆಗೆ ಪರಿಹಾರ ಸಿಗಲಿದೆ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ’ ಎಂದು ಸ್ಪಷ್ಟನೆ ನೀಡಿದರು.
ಎರಡನೇ ದಿನದ ಪಾದಯಾತ್ರೆಗೆ ಬಿಡದಿಯ ಬಿಜಿಎಸ್ ವೃತ್ತದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಬೈರಮಂಗಲ ಕ್ರಾಸ್, ಬಿಲ್ಲಕೆಂಪನಹಳ್ಳಿ ಗೇಟ್, ಈಗಲ್ಟನ್ ಕ್ರಾಸ್, ಲಕ್ಷ್ಮೀಸಾಗರ, ಆಂಜನೇಯಸ್ವಾಮಿ ದೇವಸ್ಥಾನ, ಮಂಚನಾಯಕನಹಳ್ಳಿ, ಶೇಷಗಿರಿಹಳ್ಳಿ ಟೋಲ್ ಪ್ಲಾಜಾ (ಊಟದ ವಿರಾಮ), ಕಣಿಮಿಣಿಕೆ ಟೋಲ್ ಪ್ಲಾಜಾ, ಕುಂಬಳಗೂಡು, ರಾಮೋಹಳ್ಳಿ ಕ್ರಾಸ್, ಅಂಚೆಪಾಳ್ಯ, ಚಲ್ಲಘಟ್ಟ ಹಾದು ನೈಸ್ ರಸ್ತೆ ಜಂಕ್ಷನ್ ತಲುಪಲಿರುವ 17 ಕಿ.ಮೀ. ಉದ್ದದ ಪಾದಯಾತ್ರೆ ಮುಗಿಯಲಿದೆ. ಜಂಕ್ಷನ್‌ನಲ್ಲಿರುವ ಜೆ.ಕೆ. ಗ್ರ್ಯಾಂಡ್ ಫಂಕ್ಷನ್ ಹಾಲ್‌ನಲ್ಲಿ ನಾಯಕರ ವಾಸ್ತವ್ಯ ಮಾಡಲಿದ್ದಾರೆ.
‘ಎಚ್‌ಡಿಡಿ ಮಾತಿಗೆ ಅಲುಗಾಡಿರುವ ಸಿ.ಎಂ’
‘ರೈತರ ಭೂಮಿ ಕಿತ್ತುಕೊಳ್ಳುವುದರ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ನಡೆಸುವೆ ಎಂದು ದೇವೇಗೌಡರ ಗುಡುಗಿಗೆ ಮುಖ್ಯಮಂತ್ರಿ ಅಲುಗಾಡಿದ್ದಾರೆ. ಮಾರನೆಯ ದಿನವೇ ಸುದ್ದಿಗೋಷ್ಠಿ ನಡೆಸಿ ರೈತರ ಅಹವಾಲು ಆಲಿಸಲು ಸಮಿತಿ ರಚನೆ ಘೋಷಿಸಿ, 4 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದದ್ದಾರೆ. ಇಲ್ಲಿವರೆಗೆ ಸುಮ್ಮನಿದ್ದು ನಮ್ಮ ಪಾದಯಾತ್ರೆ ಶುರುವಾಗುತ್ತಿದ್ದಂತೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಅದು ಸರ್ಕಾರದ ಪರವಾಗಿಯೇ ವರದಿ ಕೊಡಲಿದೆ. ರೈತರ ಫಲವತ್ತಾದ ಭೂಮಿ ಉಳಿಸಲು ನಮ್ಮ ಕುಟುಂಬ ಕೊನೆ ಉಸಿರಿರುವವರೆಗೆ ಹೋರಾಡಲಿದೆ’ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಾದಯಾತ್ರೆಗೆ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಪಕ್ಷದ ವರಿಷ್ಠ ಹಾಗೂ ತಮ್ಮ ತಾತ ಎಚ್.ಡಿ. ದೇವೇಗೌಡ ಅವರ ಆಶೀರ್ವಾದ ಪಡೆದು ಬೈರಮಂಗಲಕ್ಕೆ ಬಂದರು.
ಈಗಲ್ಟನ್ ರೆಸಾರ್ಟ್‌ನವರು ಸರ್ಕಾರದ ಕರಾರು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಹಿಂದೆ ಪ್ರತಿ ಎಕರೆಗೆ ₹12 ಕೋಟಿ ನಿಗದಿಪಡಿಸಿದ್ದ ಇದೇ ಕಾಂಗ್ರೆಸ್‌ನವರು, ಈಗ ಟೌನ್‌ಶಿಪ್‌ಗಾಗಿ ರೈತರ ಜಮೀನಿಗೆ ಕೇವಲ ₹2 ಕೋಟಿ ಕೊಡುತ್ತಿದ್ದಾರೆ
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260810-14-688994217