
ತಾಳಿಕೋಟೆ: ಬೀಜ, ಗೊಬ್ಬರದ ಖರ್ಚು ಕೈಗೆ ಬಾರದ ಸ್ಥಿತಿ
ತಾಳಿಕೋಟೆ: ತಾಲ್ಲೂಕಿನ ಯಾವುದೇ ಗ್ರಾಮದ ಜಮೀನುಗಳಲ್ಲಿ ಕಾಲಿಟ್ಟರೂ ಜಮೀನಿನಲ್ಲಿ ಬಿತ್ತಿದ ಬೀಜದ ಅರ್ಧದಷ್ಟೂ ಬೆಳೆಯಿಲ್ಲ ಸೊಂಟದೆತ್ತರ ಇರಬೇಕಿದ್ದ ಬೆಳೆಗಳೆಲ್ಲ ನೆಲ ಬಿಟ್ಟು ಏಳಲು ಹರಸಾಹಸ ಮಾಡುವ ಸ್ಥಿತಿ, ಗೇಣು ಅಡಿಗೇ ಕಣ್ಣು ಬಿಡುತ್ತಿವೆ. ಮುಂಗಾರು ಅವಧಿಯಲ್ಲಿ ಸಮರ್ಪಕ ಮಳೆಯಾಗದೇ ಕಂಗಾಲಾಗಿ ಕುಳಿತ ರೈತರ ಬಾಡಿದ ಮುಖಗಳಂತೆ ಬೆಳೆಯ ಸ್ಥಿತಿಯೂ ಇದೆ.
ತಾಲ್ಲೂಕಿನಾದ್ಯಂತ ಭರದ ಛಾಯೆ ದಟ್ಟವಾಗಿ ಆವರಿಸಿದೆ. ಮುಂಗಾರು ಬಿತ್ತನೆ ಬೆಳೆಯ ಮೇಲೆ ಮಳೆರಾಯ ಮುನಿಸಿಕೊಂಡ ಕಾರಣ ರೈತಾಪಿ ವರ್ಗಕ್ಕೆ ದಿಕ್ಕು ತಪ್ಪಿದಂತಾಗಿದೆ. ವರ್ಷದ ಬೆಳೆಯಿಂದ ತಮ್ಮ ಕುಟುಂಬವನ್ನು ಸಲಹಿಕೊಂಡು ನಾಡಿನ ಜನತೆಗೆ ಅಗತ್ಯದ ಅನ್ನ,ಆರ್ಥಿಕ ಸಬಲತೆಗೆ ಕಾರಣವಾಗುತ್ತಿದ್ದ ರೈತಾಪಿಗಳ ಜಂಘಾಬಲವೆ ಉಡುಗಿ ಹೋಗಿದೆ.
‘ನಾಲ್ಕು ಎಕರೆ ಹತ್ತಿ ಹಾಕಿನ್ರಿ ಆಶ್ಲೇಷಾ ಮಳೆ ಹೊತ್ತಿಗೆ ಎದೆ ಮಟ ಇರಬೇಕಿದ್ದ ಬೆಳಿ ನೋಡ್ರಿ ಮಣಕಾಲಿಗೂ ಬರುವಲ್ಲವು, ಅದು ನಾಕಾಣೆಯಷ್ಟೂ ಬೆಳೆಯಿಲ್ಲ, ಇದ್ದಷ್ಟಾದರೂ ಕೈಗೆ ಬರಲೆಂತ ಎಣ್ಣಿ ಹೊಡಿಯಾಕ ಹಚ್ಚೇನ್ರಿ ₹40 ಸಾವಿರ ಮ್ಯಾಲ ಖರ್ಚ ಮಾಡಿವೀ, ನಮ್ಮ ಊರ ತುಂಬ ಮುರದ ಬಿತ್ತಿದವರು ಬಹಳಷ್ಟಿದಾರ್ರಿ. ನನಗ ತಾಕತ್ತಿಲ್ಲ ಬಂದಷ್ಟ ಬರಲೆಂತ ಎಲ್ಲಾ ಅಲ್ಲಾಗ ಬಿಟ್ಟಿನ್ರಿ’ ಎಂದು ತುಂಬಗಿಯ ರೈತ ಮಕ್ತುಮಸಾ ಹದನಸಾ ಕಲೈಗಾರ ಆಕಾಶದತ್ತ ಮುಖ ಮಾಡಿ ನಿಂತರು.
ಜಮೀನಿನಲ್ಲಿ ಮೂರ್ನಾಲ್ಕು ಇಂಚಿನಷ್ಟು ಬೆಳೆದು ನಿಂತ ತೊಗರಿ ಮಧ್ಯೆ ಟ್ರ್ಯಾಕ್ಟರ್‌ನಿಂದ ಹರಗಿಸುತ್ತ ಕುಡಕ್ಕೆ ಸಿಕ್ಕುವ ಕಳೆಯನ್ನು ಕುರುಪಿಯಿಂದ ಸ್ವಚ್ಛಗೊಳಿಸುತ್ತಿದ್ದ ಯುವ ರೈತ ಶಿವರಾಜ ಬಾಬಣ್ಣಿ, ‘₹ 30 ಸಾವಿರ ಮ್ಯಾಲ ಖರ್ಚ ಮಾಡಿ ಆರು ಎಕರೆಯೊಳಗ 17 ಪಾಕೀಟ್ ಹತ್ತಿ ಬಿತ್ತಿದ್ದೆ. ಆದ್ರ ಮಳಿ ಕೈ ಕೊಟ್ಟಿತ್ರಿ, ಒಂದೆಕರೆ ಬಿಟ್ಟು, ಐದೆಕರೆ ತೊಗರಿ ಮರು ಬಿತ್ತನಿ ಮಾಡಿನಿ. ಅದೊಂದು ಏಕರೆದಾಗೂ ಬೆಳಿನ ಇಲ್ಲ, ಹತ್ತಿಯಂತೂ ಕೈ ಕೊಡ್ತು. ತೊಗರಿ ನಂಬಿವಿ ಕೈ ಹಿಡದರ ಸಾಕು’ ಎಂದರು.
ಕಳೆದ ವರ್ಷದ ಭರ್ಜರಿ ಹತ್ತಿ ಬೆಳೆಕಂಡು ತಾಲ್ಲೂಕಿನ ಕೊಡಗಾನೂರ, ತುಂಬಗಿ ಕಲಕೇರಿ ವ್ಯಾಪ್ತಿಯಲ್ಲಿ ಹತ್ತಿ ಜಿನ್ ನಿರ್ಮಾಣ ಕಾರ್ಯ ನಡೆದಿವೆ, ಆದರೆ, ಅವುಗಳಿಗೆ ಹತ್ತಿ ಲಭ್ಯವಾಗುವುದೇ ಕಷ್ಟವಾಗಿದೆ.
ಹತ್ತಿ ಪ್ರತಿ ಎಕರೆಗೆ ಸರಾಸರಿ 8 ಕ್ವಿಂಟಲ್ ಬರಬೇಕು ಈ ವರ್ಷ 2-3 ಕ್ವಿಂಟಲ್ ಸಹ ಉತ್ಪನ್ನ ಬರದು. ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ರೈತಾಪಿಗಳು ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ.!
ಶಾಸಕರು, ರಾಜಕಿಯ ಪಕ್ಷದವರು ನಮ್ಮ ತಾಲ್ಲೂಕಿನ್ಯಾಗ ಹೊಲಾ ಹೊಲಾ ಅಡ್ಡಾಡಿ ನಮ್ಮ ಬೆಳಿ ನೋಡಿ ಹೋಗ್ಯಾರು, ಪರಿಹಾರ ಸಿಗಬಹುದೇನ್ರಿ, ಎಂಬ ಪ್ರಶ್ನೆ ರೈತರಲ್ಲಿವೆ.
50,480 ಹೆಕ್ಟೇರ್ ಬಿತ್ತನೆ
ತಾಳಿಕೋಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 60,120 ಹೆಕ್ಟೇರ್ ನಲ್ಲಿ 50,480 ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದ್ದು ಇದರಲ್ಲಿ ಹತ್ತಿ ತೊಗರಿಯದ್ದೇ ಸಿಂಹಪಾಲು. 18,250 ಹೆಕ್ಟೇರ್ ನಷ್ಟು ಹತ್ತಿ, 31,200ಹೆಕ್ಟೆರ್ ನಷ್ಟು ತೊಗರಿ ಬಿತ್ತನೆಯಾಗಿವೆ.
ಇದ್ದುದರಲ್ಲಿ ಕಲಕೇರಿ, ಅಸ್ಕಿ, ಬೆಕಿನಾಳ, ಬ.ಸಾಲವಾಡಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿತ್ತನೆಯ ಶೇ 50ರಷ್ಟು ಸದ್ಯ ಬೆಳೆಯಿದೆ. ಉಳಿದೆಡೆ ಪ್ರಮಾಣ ಇನ್ನೂ ಕಡಿಮೆಯಾಗಿದೆ. ತೇವಾಂಶದ ಕೊರತೆ ಕಾರಣ ಎಂದು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ತಿಳಿಸಿದರು. ಸರ್ಕಾರದಿಂದ ಬರದ ಸ್ಥಿತಿ ಮಾಹಿತಿ ಕೇಳಿದ್ದಾರೆ. ಸಮೀಕ್ಷೆಗೆ ವಿಜ್ಞಾನಿಗಳ ತಂಡ ಬರಲಿದೆ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-26-204470031