
Bangalore Rains: ಬೆಂಗಳೂರಲ್ಲಿ ಬೆಳಿಗ್ಗೆಯಿಂದಲೇ ಮಳೆ, ಯಾವ ಭಾಗದಲ್ಲಿ ಹೆಚ್ಚು
ಬೆಂಗಳೂರು: ಬೆಂಗಳೂರು ನಗರದಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಕೂಲ್ ವಾತಾವರಣ. ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ವರಮಹಾಲಕ್ಷ್ಮಿ ಹಬ್ಬದ ಸಿದ್ದತೆಯಲ್ಲಿರುವ ಮಹಿಳೆಯರು ಮಳೆಯನ್ನು ಬರ ಮಾಡಿಕೊಂಡರು.
ಈ ಮಳೆಗಾಲದಲ್ಲಿ ಬೆಂಗಳೂರು ನಗರದಲ್ಲಿ ನಾಲ್ಕೈದು ದಿನ ಹೆಚ್ಚು ಮಳೆಯಾಗಿದ್ದು ಬಿಟ್ಟರೆ ಬಹುತೇಕ ಕಡೆಗಳಲ್ಲಿ ಮಳೆಯಾದ ಅನುಭವವೇ ಆಗಿಲ್ಲ. ಅದು ಈಗಲೂ ಮುಂದುವರಿದಿದೆ.
ಕೆಲ ದಿನಗಳಿಂದ ಮಳೆಗಾಲದಲ್ಲಿಯೇ ಬಿಸಿಲ ವಾತಾವರಣ ಇತ್ತಾದರೂ ಗುರುವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಕೊಂಚ ಹೆಚ್ಚೇ ಇತ್ತು. ನಗರದ ಹಲವು ಭಾಗಗಳಲ್ಲಿ ಮಳೆಯಾಯಿತು.
ಕಚೇರಿಗೆ ಹೋಗುವವರು, ಶಾಲೆಗೆ ಹೊರಟವರು ಕೆಲವು ಕಡೆ ಮಳೆಯಲ್ಲಿಯೇ ನೆನೆದು ಕೊಂಡು ಹೋದರು. ಕೆಲವು ಭಾಗಗಳಲ್ಲಿ ಜಿಬುರು ಮಳೆ ಬರುತ್ತಿದ್ದರೆ, ಇನ್ನಷ್ಟು ಕಡೆಗಳಲ್ಲಿ ಮಳೆಯಾಗಿದೆ. ಬುಧವಾರ ಮಧ್ಯಾಹ್ನದ ನಂತರವೂ ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ಬೇಗೂರಿನಲ್ಲಿ 32 ಮಿ.ಮೀ ನಷ್ಟು ಅತ್ಯಧಿಕ ಮಳೆಯಾದ ವರದಿಯಾಗಿತ್ತು.
ಗುರುವಾರದಂದು ವಿಜಯನಗರ, ಮಹಾತ್ಮಗಾಂಧಿ ರಸ್ತೆ, ರಾಜರಾಜೇಶ್ವರಿನಗರ, ರಾಜಾಜಿನಗರ ಸಹಿತ ಹಲವು ಭಾಗಗಳಲ್ಲಿ ಮಳೆಯಾಯಿತು. ಕೆಲಹೊತ್ತು ಬಂದು ನಿಂತ ಮಳೆ ಮತ್ತೆ ಬಂದಿತು.
ವರಮಹಾಕ್ಷ್ಮಿ ಹಬ್ಬದ ಖರೀದಿಗೆಂದು ಮಾರುಕಟ್ಟೆಗೆ ಹೊರಟೆ. ಮಳೆ ಬಂದಿತು. ಅದರಲ್ಲಿಯೇ ಮಾರುಕಟ್ಟೆಯಲ್ಲಿ ಸುತ್ತಿ ಹೂವು, ಹಣ್ಣು ಹಾಗೂ ಪೂಜಾ ಸಾಮಾನು ಖರೀದಿಸಿದ್ದೇನೆ ಎಂದು ವಿಜಯನಗರ ನಿವಾಸಿ ಭೂಮಿಕಾಗೌಡ ತಿಳಿಸಿದರು.
ಬೆಂಗಳೂರು (ನಗರ) ಸೇರಿದಂತೆ ಕೆಲವು ಸ್ಥಳಗಳಲ್ಲಿ ಗುರುವಾರ ಗಾಳಿಯ ವೇಗದಲ್ಲಿ (30-40 ಕಿ.ಮೀ.) ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದಲ್ಲದೇ ಆಗಸ್ಟ್ 23,24 ಹಾಗೂ 25ರಂದು ಬೆಂಗಳೂರು ನಗರದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.