
ರಾಜ್ಯದಲ್ಲಿ ಕೃತಕ ಪನೀರ್ ತಯಾರಿಕೆ, ಮಾರಾಟ ನಿಷೇಧ
ಬೆಂಗಳೂರು: ಕೃತಕ ಪನೀರ್(ಅನಲಾಗ್ ಪನೀರ್) ಉತ್ಪಾದನೆ,ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ಮಾಡುವುದನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಇಲಾಖೆಯು ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರ ಡೇರಿಯೇತರ ಅಂಶಗಳನ್ನು ಬಳಸಿ ತಯಾರಿಸಿದ ಉತ್ಪನ್ನಗಳನ್ನು ‘ಪನೀರ್’ ಎಂದು ಲೇಬಲ್ ಮಾಡಿ ಮಾರಾಟ ಮಾಡುವಂತಿಲ್ಲ ಎಂದು ಇಲಾಖೆ ತಿಳಿಸಿದೆ.
ಅದಾಗ್ಯೂ, ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಮತ್ತು ಮಿಕ್ಸ್ಡ್ ಫ್ಯಾಟ್ ಸ್ಪ್ರೆಡ್‌ಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಹೋಟೆಲ್, ರೆಸ್ಟೋರೆಂಟ್‌ಗಳೂ ಕೃತಕ ಪನೀರ್ ಅನ್ನು ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.