ಮಂಗಳೂರು | ಭಾರತ ಜೋಡೊ: ಸದಸ್ಯತ್ವಕ್ಕೆ ಹೆಚ್ಚಿದ ಒತ್ತಡ

ಮಂಗಳೂರು | ಭಾರತ ಜೋಡೊ: ಸದಸ್ಯತ್ವಕ್ಕೆ ಹೆಚ್ಚಿದ ಒತ್ತಡ

ಮಂಗಳೂರು | ಭಾರತ ಜೋಡೊ: ಸದಸ್ಯತ್ವಕ್ಕೆ ಹೆಚ್ಚಿದ ಒತ್ತಡ

ಮಂಗಳೂರು: ಗ್ರಾಮೀಣ ಯುವಜನ ರನ್ನು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸುವ ಉದ್ದೇಶದಿಂದ ಸರ್ಕಾರ ರಚಿಸಲು ಮುಂದಾಗಿರುವ ಭಾರತ ಜೋಡೊ ಯುವ ಸಂಘಕ್ಕೆ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದಸ್ಯತ್ವ ನೋಂದಣಿಯಾಗಿಲ್ಲ. ಬೆರಳೆಣಿಕೆಯ ಪಂಚಾಯಿತಿಗಳಲ್ಲಿ ಮಾತ್ರ ಸದಸ್ಯತ್ವ ನೂರರ ಗಡಿ ದಾಟಿದ್ದು, ನೋಂದಣಿ ಹೆಚ್ಚಿಸಲು ಜಿಲ್ಲಾಡಳಿತವು ಸಂಜೀವಿನಿ ಸಂಘಗಳ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಪಡಂಗಡಿ, ಕಡಬ ತಾಲ್ಲೂಕಿನ ಕೊಂಬಾರು, ಸುಳ್ಯ ತಾಲ್ಲೂಕಿನ ಅಜ್ಜಾವರ, ಐವರ್ನಾಡು, ಮೂಲ್ಕಿ ತಾಲ್ಲೂಕಿನ ಅತಿಕಾರಿಬೆಟ್ಟು, ಬಳ್ಕುಂಜೆ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಸದಸ್ಯತ್ವ ನೋಂದಣಿ 100ಕ್ಕಿಂತ ಹೆಚ್ಚು ಆಗಿದೆ. ಜಿಲ್ಲೆಯ 223 ಗ್ರಾ.ಪಂ.ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾ.ಪಂ.ಗಳಲ್ಲಿ ಸದಸ್ಯತ್ವದ ಪ್ರಮಾಣ ಇನ್ನೂ 50ರ ಗಡಿ ದಾಟಿಲ್ಲ. ಮಂಗಳೂರು, ಪುತ್ತೂರು, ಮೂಡುಬಿದಿರೆ ತಾಲ್ಲೂಕು ಗಳ ಕೆಲವು ಪಂಚಾಯಿತಿಗಳಲ್ಲಿ ಸದಸ್ಯತ್ವ ನೋಂದಣಿ ಎರಡಂಕಿಗೂ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.

‘ಸದಸ್ಯತ್ವ ನೋಂದಣಿ ಪ್ರಾರಂಭ ವಾಗಿ 10 ದಿನಗಳಾಗಿದ್ದರೂ, ಆ.12 ರಿಂದ ಅರ್ಜಿ ಲಭ್ಯವಾಗಿದೆ. ಆನ್‌ಲೈನ್ ಮೂಲಕ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. 16ರಿಂದ 35 ವರ್ಷ ಒಳಗಿನವರಿಗೆ ಮಾತ್ರ ನೋಂದಣಿಗೆ ಅವಕಾಶ ಇದ್ದು, 35 ವರ್ಷ ಮೇಲ್ಪಟ್ಟವರ ಆಧಾರ್ ಸಂಖ್ಯೆ ನಮೂದಿಸಿದರೆ ಸ್ವೀಕೃತವಾಗುವುದಿಲ್ಲ. ನೋಂದಣಿ ಪ್ರಕ್ರಿಯೆ ಪ್ರಾರಂಭದಲ್ಲಿ ಮೊಬೈಲ್‌ ಫೋನ್‌ಗೆ ಒಟಿಪಿ ಬರುತ್ತದೆ. ನೋಂದಣಿ ಮಾಡಿಕೊಳ್ಳುವ ವ್ಯಕ್ತಿಯ ಕಣ್ಣಿನ ಚಿತ್ರ ಸೆರೆಹಿಡಿಯಬೇಕಾಗುತ್ತದೆ. ಸರ್ವರ್ ಸಮಸ್ಯೆಯಿಂದ ಒಟಿಪಿ ಬರುವುದೇ ವಿಳಂಬವಾಗುತ್ತದೆ. ಕೆಲವೊಮ್ಮೆ ಸರ್ವರ್ ಎರರ್ ತೋರಿಸು ತ್ತದೆ’ ಎನ್ನುತ್ತಾರೆ ಸಂಜೀವಿನಿ ಸ್ವ ಸಹಾಯ ಸಂಘದ ಸ್ಥಳೀಯ ಸಮಿತಿ ಸಂಪನ್ಮೂಲ ವ್ಯಕ್ತಿಯೊಬ್ಬರು (ಎಲ್‌ಸಿಆರ್‌ಪಿ).

‘ಏಳು ಹಂತಗಳನ್ನು ಪೂರ್ಣಗೊಳಿಸಿ, ಯುಪಿಐ ಮೂಲಕ ₹10 ಪಾವತಿಸಿದ ಮೇಲೆ ನೋಂದಣಿ ಖಚಿತವಾಗುತ್ತದೆ. ಆ.20ರ ಒಳಗೆ ಎಲ್ಲ ಗ್ರಾ.ಪಂ.ಗಳಲ್ಲಿ ಕನಿಷ್ಠ 100 ಜನರನ್ನು ನೋಂದಣಿ ಮಾಡುವಂತೆ ಸರ್ಕಾರ ಗುರಿ ನೀಡಿತ್ತು. ಈ ಗುರಿ ತಲುಪದ ಕಾರಣ, ಕೊನೆಕ್ಷಣದಲ್ಲಿ ಸದಸ್ಯತ್ವ ನೋಂದಣಿಗೆ ನೆರವಾಗುವಂತೆ ನಮಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿದೆ. ಎಸ್‌ಐ ಆರ್‌ ಪ್ರಕ್ರಿಯೆ, ಜಾಗೃತಿ ಸಮೀಕ್ಷೆ ಹೀಗೆ ಸರ್ಕಾರದ ಎಲ್ಲ ಕಾರ್ಯಕ್ರಮಗಳಿಗೆ ನಮ್ಮನ್ನು ಬಳಸಿಕೊಳ್ಳುವುದರಿಂದ, ನಮ್ಮ ಸಂಘದ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಇದಕ್ಕೆ ನಮಗೆ ಯಾವುದೇ ತರಬೇತಿ ನೀಡಿಲ್ಲ. ಗೌರವಧನವೂ ಇಲ್ಲದೆ ಕೆಲಸ ಮಾಡುತ್ತಿದ್ದೇವೆ’ ಎಂದು ಇನ್ನೊಬ್ಬರು ಎಲ್‌ಸಿಆರ್‌ಪಿ ಬೇಸರಿಸಿದರು.

‘ಜಿಲ್ಲೆಯಲ್ಲಿರುವ 357 ಎಲ್‌ಸಿಆರ್‌ಪಿಗಳು, 223 ಎಂಬಿಕೆಗಳು, ಪಶು ಸಖಿಯರು ಈಗ ತಮ್ಮ ದೈನಂದಿನ ಕೆಲಸ ಬದಿಗಿಟ್ಟು ಭಾರತ್ ಜೋಡೊ ಸಂಘದ ಸದಸ್ಯತ್ವ ನೋಂದಣಿ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಣ್ಣಿನ ಚಿತ್ರ ಸೆರೆ ಹಿಡಿಯಬೇಕಾದ ಕಾರಣ, ಸದಸ್ಯತ್ವ ಪಡೆಯುವವರನ್ನು ಭೇಟಿ ಮಾಡಿಯೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಕೆಲವರು ಸದಸ್ಯರಾಗಲು ಆಕ್ಷೇಪಿಸಿ, ನಮ್ಮನ್ನು ಮರು ಪ್ರಶ್ನಿಸುತ್ತಾರೆ’ ಎಂದು ಬಂಟ್ವಾಳದ ಎಲ್‌ಸಿಆರ್‌ಪಿ ಒಬ್ಬರು ಮಾಹಿತಿ ನೀಡಿದರು.

ಸದಸ್ಯತ್ವ ನೋಂದಣಿಯಲ್ಲಿ ತುಮ ಕೂರು ಮೊದಲ ಸ್ಥಾನ, ಮೈಸೂರು 2ನೇ ಸ್ಥಾನದಲ್ಲಿದೆ. ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ 8ನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,568 (ಶುಕ್ರವಾರ ರಾತ್ರಿ 9.30ರ ವರೆಗೆ) ಮಂದಿ ನೋಂದಾಯಸಿದ್ದಾರೆ.

‘ಜಿಲ್ಲೆಯಲ್ಲಿ 346 ಸಂಘ ರಚನೆ’

223 ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಯುವ ಸಂಘ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ಯುವ ಸಂಘ ಸೇರಿದಂತೆ ನಗರ ಪ್ರದೇಶಗಳಲ್ಲಿ 123 ಸಂಘಗಳನ್ನು ರಚಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 346 ಸಂಘಗಳು ರಚನೆಯಾಗಲಿದ್ದು, ಸೊಸೈಟಿ ಕಾಯ್ದೆ ಪ್ರಕಾರ ಅವುಗಳ ನೋಂದಣಿ ಮಾಡಲಾಗುತ್ತದೆ. ಪ್ರತಿ ಸಂಘಕ್ಕೆ ಕನಿಷ್ಠ 100 ಸದಸ್ಯರು ಇರಬೇಕು. ಇದಕ್ಕಿಂತ ಹೆಚ್ಚು ಎಷ್ಟು ಸದಸ್ಯರು ಸಹ ನೋಂದಾಯಿಸಬಹುದು. ಕೆಲವು ಕಡೆಗಳಲ್ಲಿ ಪ್ರಗತಿ ಕಡಿಮೆ ಇದೆ. ಈ ಕಾರಣಕ್ಕೆ ಮತದಾರರ ಪಟ್ಟಿಯನ್ನು ಬಳಸಿಕೊಂಡು 35 ವರ್ಷದೊಳಗಿನವರನ್ನು ಸಂಪರ್ಕಿಸಿ, ನೋಂದಣಿ ಮಾಡಿಕೊಳ್ಳುವಂತೆ ತಿಳಿಸುತ್ತಿದ್ದೇವೆ ಎಂದು ಜಿಲ್ಲಾ ಸಮನ್ವಯಾಧಿಕಾರಿಯಾಗಿರುವ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಪ್ರದೀಪ್ ಡಿಸೋಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-29-30355958

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ