
ಕಾರ್ಯಕ್ರಮ ಸೂಕ್ತವಾಗಿಲ್ಲದ ಕಾರಣ ರೇವಂತ್ ರೆಡ್ಡಿ ಅಮೆರಿಕ ಭೇಟಿ ನಿರಾಕರಣೆ: ಎಂಇಎ
ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅಮೆರಿಕದಲ್ಲಿ ಭಾಗವಹಿಸಬೇಕಿದ್ದ ಕಾರ್ಯಕ್ರಮವು ಸೂಕ್ತವಾಗಿಲ್ಲದ ಕಾರಣ ಅವರ ಪ್ರವಾಸಕ್ಕೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು(ಎಂಇಎ) ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನಂತರ, ರೇವಂತ್ ರೆಡ್ಡಿ ಅವರು ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದ ಬಳಿಕ ಎಂಇಎ ಹೇಳಿಕೆ ನೀಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ‘ರಾಜಕೀಯ ಅನುಮೋದನೆ ನೀಡುವ ಸಲುವಾಗಿ ಮುಖ್ಯಮಂತ್ರಿಗಳು ಹಾಗೂ ಇತರ ಗಣ್ಯರ ವಿದೇಶಿ ಭೇಟಿಗಳನ್ನು ಸಚಿವಾಲಯವು ಪರಿಶೀಲಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಸ್ತಾಪಿಸಲಾಗುವ ಕಾರ್ಯಕ್ರಮವು, ಸಂಬಂಧಪಟ್ಟ ವ್ಯಕ್ತಿ ಹೊಂದಿರುವ ಹುದ್ದೆ ಮತ್ತು ಭೇಟಿಯ ಉದ್ದೇಶಕ್ಕೆ ಸೂಕ್ತವಾಗಿರಬೇಕು. ಆದರೆ, ಈ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿಗಳ ಅಮೆರಿಕದಲ್ಲಿನ ಕಾರ್ಯಕ್ರಮವು ಸೂಕ್ತವಲ್ಲದ ಕಾರಣ ಅನುಮತಿ ನಿರಾಕರಿಸಲಾಗಿದೆ’ ಎಂದು ಹೇಳಿದ್ದಾರೆ.
ಅನುಮತಿಯನ್ನು ನಿರಾಕರಿಸಿದ ಬಳಿಕ ಮಾತನಾಡಿದ್ದ ರೇವಂತ್ ರೆಡ್ಡಿ, ‘ರಾಷ್ಟ್ರವನ್ನು ಕಟ್ಟುವ ಮತ್ತು ಯುವಜನತೆಯ ಭವಿಷ್ಯದ ವಿಷಯ ಬಂದಾಗ ನಾವು ರಾಜಕೀಯ ಮತ್ತು ಚುನಾವಣೆಯ ಹೊರಗೆ ಯೋಚಿಸಬೇಕು ಎಂದು ನಾನು ಯಾವಾಗಲೂ ನಂಬುತ್ತೇನೆ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.
ಅಮೆರಿಕದ ಪ್ರವಾಸದ ವೇಳೆ ರೇವಂತ್ ರೆಡ್ಡಿ ಅವರು ಹಾರ್ವಡ್ ವಿಶ್ವವಿದ್ಯಾಲಯ, ಎಂಐಟಿ ಹಾಗೂ ಬೋಸ್ಟನ್‌ನ ವರ್ಜೀನಿಯಾ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡುವವರಿದ್ದರು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಈ ಹಿಂದೆ ಅರವಿಂದ್ ಕ್ರೇಜಿವಾಲ್ ಹಾಗೂ ಮಮತಾ ಬ್ಯಾನರ್ಜಿ ಅವರು ದೆಹಲಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾಗ, ಅವರಿಗೆ ಕೂಡ ವಿದೇಶಿ ಪ್ರವಾಸಕ್ಕೆ ತೆರಳುವ ವೇಳೆ ಅನುಮತಿ ನಿರಾಕರಿಸಲಾಗಿತ್ತು.